ಕರ್ನಾಟಕ ರಾಜ್ಯಕ್ಕೆ ಬಿಜೆಪಿ ಅನ್ಯಾಯ ಮಾಡಿದೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಬಗ್ಗೆ ಕಾಳಜಿ ಇಲ್ಲ ನಿಮ್ಮ ಪರ ಧ್ವನಿ ಎತ್ತಲು ನನ್ನಗೆ ಮತ ನೀಡಿ : ಡಿಕೆ ಸುರೇಶ

ರಾಮನಗರದ ಕಾರ್ಯಕರ್ತರ ಸಮಾವೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ರಾಜ್ಯದ ಪರ ಸಂಸತನಲ್ಲಿ ಅವಕಾಶ ಮಾಡಿಕೋಡಿ

ರಾಮನಗರ : ಕಳೆದ ಬಾರಿ ಮೋದಿ ಅಲೆಯ ನಡುವೆಯೂ ಪಕ್ಷ ಭೇದ ಮರೆತು ಜನರು ನನಗೆ ಆಶೀರ್ವಾದ ಮಾಡಿದ್ದರು. ಕ್ಷೇತ್ರವನ್ನು ಅಭಿವೃದ್ದಿ ಮಾಡಿ ನಿಮ್ಮ ಬಳಿ ಮತ್ತೊಮ್ಮೆ ಅವಕಾಶ ನೀಡಿ ಎಂದು ಬಂದಿದ್ದೇನೆ. ಕಾಂಗ್ರೆಸ್ ಕಾರ್ಯಕರ್ತರು ಪ್ರತಿ ಮನೆಗೆ ಹೋಗಿ ನನ್ನ ಸಾಧನೆಗಳ ಪಟ್ಟಿಯನ್ನು ಎಲ್ಲರಿಗೂ ಮನವರಿಕೆ ಮಾಡಬೇಕು. ನೀವುಗಳು ನನ್ನ ಕೆಲಸಕ್ಕೆ ಕೂಲಿ ಕೊಡಿಸಬೇಕು.

ಹಳ್ಳಿಯ ಕಡೆ ಬಿಲ ಹೊಡೆಯುವುದು ಎನ್ನುವ ಮಾತಿದೆ. ಮೋದಿ ಅವರು ಎಲ್ಲರ ಜೇಬಿಗೆ ಜಿಎಸ್ ಟಿ ರೂಪದಲ್ಲಿ ಬಿಲ ಹೊಡೆಯುತ್ತಿದ್ದಾರೆ. ರೈತರು ವಿಮೆ, ಕೀಟನಾಶಕ  ತೆಗೆದುಕೊಳ್ಳಲು ಹೋಗಲಿ, ಮನೆ ಕಟ್ಟಿದರೂ ಜಿಎಸ್ ಟಿ ಹಾಕುತ್ತಿರುವುದು ಮೋದಿ. ನಮ್ಮ ದುಡ್ಡೆಲ್ಲಾ ಉತ್ತರ ಭಾರತಕ್ಕೆ ಹೋಗುತ್ತಿದೆ. ನಮ್ಮ ಮಕ್ಕಳು ಉತ್ತರ ಭಾರತಕ್ಕೆ ಭಿಕ್ಷೆ ಬೇಡಲು ಹೋಗಬೇಕಾಗುತ್ತದೆ. ದೇಶದ ಪ್ರಧಾನಿ ಉತ್ತರಾಖಂಡಕ್ಕೆ ಹೋಗಿ ಡಿ.ಕೆ.ಸುರೇಶ್ ಸೋಲಿಸಬೇಕು ಎಂದು ಹೇಳುತ್ತಾರೆ. ಇಷ್ಟು ಎತ್ತರಕ್ಕೆ ಬೆಳೆಸಿರುವುದು ನೀವು. ಅಭಿವೃದ್ಧಿಗಾಗಿ, ಕನ್ನಡಿಗರ ದನಿಯಾಗಿ ಡಿ.ಕೆ.ಸುರೇಶ್, ಹೋರಾಟ ಮಾಡುತ್ತಿದ್ದಾನೆ.

ಐದು ಗ್ಯಾರಂಟಿಗಳನ್ನು ಕೊಟ್ಟು, ಉತ್ತಮ ಆಡಳಿತ ನೀಡಿ ನಾವು ಜನರ ಬಳಿ ಮತ ಕೇಳಲು ಹೋಗುತ್ತಿದ್ದೇವೆ. ಕಾಂಗ್ರೆಸಿನವರು ಕೊಡುಗೆ ಕೊಟ್ಟು ಜನರಿಗೆ ಹೇಳುವುದನ್ನು ಮರೆತಿದ್ದೇವೆ. ಬಿಜೆಪಿಯವರು ಏನೂ ಕೊಡದೆ ಕೊಟ್ಟಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಮೋದಿ ಗ್ಯಾರಂಟಿ ಕೊಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ. 50 ಕೆ.ಜಿ ಇದ್ದ ಯೂರಿಯಾ ಚೀಲವನ್ನು 40 ಕೆ.ಜಿಗೆ ಇಳಿಸಿರುವುದೇ ಮೋದಿ ಸಾಧನೆ.

ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತನ್ನು ಈಡೇರಿಸುತ್ತದೆಯೇ ಎನ್ನುವ ಅನುಮಾನ ಜನರಿಗೆ ಇತ್ತು. ಬಿಜೆಪಿಯವರು ಹಣ ಎಲ್ಲಿದೆ ಎಂದು ಪ್ರಶ್ನೆ ಮಾಡುತ್ತಿದ್ದರು. ಆದರೆ ಇಡಿ ದೇಶವೇ ತಿರುಗಿ ನೋಡುವಂತೆ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು 52 ಸಾವಿರ ಕೋಟಿ ಹಣವನ್ನು ಗ್ಯಾರಂಟಿಗಳಿಗೆ ನೀಡಿದ್ದಾರೆ. ರಾಮನಗರ ಜಿಲ್ಲೆಯ ಶೇ 94 ರಷ್ಟು ಜನರಿಗೆ ಈ ಯೋಜನೆ ತಲುಪಿದೆ.

ಕಾರ್ಯಕರ್ತರು ಯಾರ ಮನೆಗೆ ಗ್ಯಾರಂಟಿ ಯೋಜನೆಗಳು ತಲುಪಿಲ್ಲ ಅವರ ಮನೆಗೆ ಹೋಗಿ ತಲುಪುವಂತೆ ನೋಡಿಕೊಳ್ಳಬೇಕು. ಎಲ್ಲ ಜಾತಿ, ಧರ್ಮ, ಪಕ್ಷಗಳ ಜನರಿಗೆ ಯಾವುದೇ ಬೇಧವಿಲ್ಲದೆ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ. ನೀವು ಅತ್ಯಂತ ಧೈರ್ಯದಿಂದ ಜನರ ಬಳಿ ಕಾಂಗ್ರೆಸ್ ಪಕ್ಷಕ್ಕೆ ಮತ ಕೇಳಬೇಕು.

ಬಿಜೆಪಿ, ಜೆಡಿಎಸ್ ಅವರ ಮನೆಗೂ ತೆರಳಿ ಮತ ಯಾಚನೆ ಮಾಡಬೇಕು. ಪ್ರತಿ ಮನೆಯಿಂದ ಮೂರು ಮತಗಳನ್ನು ತರಲೇಬೇಕು. ಇಡೀ ಕ್ಷೇತ್ರದಲ್ಲಿ ಶೇ 90 ರಷ್ಟು ಮತಗಳು ಚಲಾವಣೆಯಾಗುವಂತೆ ನೋಡಿಕೊಳ್ಳಬೇಕು. ನಾವು ಅಭಿವೃದ್ಧಿ ಮಾಡಿದ್ದೇವೆ ಖಾಲಿ ಗ್ಯಾರಂಟಿ ಇರುವವರೇ ಓಡಾಡುತ್ತಿರುವಾಗ ಕಾಂಗ್ರೆಸ್ ಕಾರ್ಯಕರ್ತರು ಮನೆಯಲ್ಲಿ ಕುಳಿತುಕೊಳ್ಳಬಾರದು.

ನಾನು ದೆಹಲಿಯಲ್ಲಿ ಕುಳಿತಿಲ್ಲ

ನಾನು ಜನರ ನಡುವೆ ಇದ್ದು ಕೆಲಸ ಮಾಡಿದ್ದೇನೆ. ಪ್ರತಿ ಜನರ ಕಷ್ಟ ಕೇಳಿದ್ದೇನೆ, ಗೆದ್ದ ಮೇಲೆ ದೆಹಲಿಯಲ್ಲಿ ಕುಳಿತುಕೊಂಡಿರಲಿಲ್ಲ. ಕಸಬಾ ಹೋಬಳಿಯ 60 ಕೆರೆಗಳು, ಕೈಲಾಂಚ ಹೋಬಳಿಯ ಎಲ್ಲಾ ಕೆರೆಗಳನ್ನು ತುಂಬಿಸುವ ಯೋಜನೆ ರೂಪಿಸಲಾಗುತ್ತಿದೆ. ಸುಮಾರು 10 ಸಾವಿರಕ್ಕೂ ಹೆಚ್ಚು ಟ್ರಾನ್ಸ್ ಫಾಮರ್ಸ್ ಗಳನ್ನು ರೈತರ ಉಪಯೋಗಕ್ಕೆ ಹಾಕಿಕೊಟ್ಟಿದ್ದೇನೆ. ಇಷ್ಟೆಲ್ಲಾ ಕೆಲಸ ಮಾಡಿದ್ದೇನೆ. ಯಾವುದೇ ಕಾರಣಕ್ಕೂ ಮತ ಕೇಳಲು ಹಿಂಜರಿಯಬೇಡಿ.

ಕನಕಪುರ ಒಂದರಲ್ಲೇ 1,500 ಚೆಕ್ ಡ್ಯಾಂಗಳು ಜಿಲ್ಲೆಯಾದ್ಯಂತ 3 ಸಾವಿರಕ್ಕೂ ಚೆಕ್ ಡ್ಯಾಂಗಳನ್ನು ಕಟ್ಟಿದ್ದೇನೆ. ನಾನು ಸ್ವಾಭಿಮಾನದ ಮತ, ಕೂಲಿಯನ್ನು ನಿಮ್ಮ ಬಳಿ ಕೇಳುತ್ತಿದ್ದೇನೆ. ನನ್ನ ಜಿಲ್ಲೆ ನಂಬರ್ 1 ಜಿಲ್ಲೆಯಾಗಬೇಕು ಎನ್ನುವ ಕಾಳಜಿ ನನಗೆ ಇದ್ದ ಕಾರಣ ಕೆಲಸ ಮಾಡಿದ್ದೇನೆ.

ಮನೆ ಬಿಟ್ಟು ಹೊರ ಬಂದು ಕಾಂಗ್ರೆಸ್ ಪರವಾಗಿ ಮತ ಕೇಳಿ

ಕಳೆದ ಬಾರಿ ಕಸಬಾ ಮತ್ತು ಕೈಲಾಂಚ ಭಾಗದಲ್ಲಿ ಮತಗಳು ಕಡಿಮೆ ಬಂದಿದ್ದವು. ಇಕ್ಬಾಲ್ ಅವರು ನಿಂತ ಕಾರಣ ಮತಗಳು ಬೀಳಲಿಲ್ಲ ಎಂದು ಕಾರಣ ನೀಡಿದ್ದರು. ಆದರೆ ಈಗ ಚುನಾವಣೆಗೆ ನಿಂತಿರುವುದು ಡಿ.ಕೆ.ಸುರೇಶ್ ಎನ್ನುವುದು ನೆನಪಿರಲಿ. ನಾನು ಕ್ಷೇತ್ರಕ್ಕೆ ಅವಮಾನ ಆಗುವಂತಹ ಕೆಲಸ ಮಾಡಿಲ್ಲ. ತಲೆಮರೆಸಿಕೊಂಡಿಲ್ಲ. ಎಲ್ಲಾ ಹಂತದ ನಾಯಕರು ಮೈ ಚಳಿ ಬಿಟ್ಟು ಹೊರಗೆ ಬಂದು ಕಾಂಗ್ರೆಸ್ ಪಕ್ಷದ ಪರವಾಗಿ ಮತ ಕೇಳಬೇಕು.

ಬೈದುಕೊಂಡವರು ಅಕ್ಕಾ ಎಂದು ಕೈ ಮುಗಿಯುತ್ತಿದ್ದಾರೆ

ಬಾಯಿಗೆ ಬಂದಂತೆ ಬೈದುಕೊಂಡವರು, ಕಿತ್ತಾಡಿದವರೇ ಅಕ್ಕಾ ಎಂದು ಕೈ ಮುಗಿಯುತ್ತಾ ಇದ್ದಾರೆ. ಇಷ್ಟು ವರ್ಷ ಇದ್ದ ಎರಡು ಕಣ್ಣುಗಳಲ್ಲಿ ಒಂದು ಕಣ್ಣು ಹೋಗಿತ್ತು. ಈಗ ಮತ್ತೊಂದು ಕಣ್ಣು ಹೋಗಿದೆ. ಎರಡು ಬಾರಿ ಸಿಎಂ, ಈ ದೇಶದ ಪ್ರಧಾನಮಂತ್ರಿ ಮಾಡಿದ್ದರು ರಾಮನಗರ ಜಿಲ್ಲೆ ಹೇಗಿದೆಯೋ ಹಾಗೆ ಇದೆ ಎಂದು ದಳದ ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡಬೇಕು. ಕಾಂಗ್ರೆಸ್ ಪಕ್ಷ ಜಿಲ್ಲೆಯನ್ನು ಅಭಿವೃದ್ಧಿ ಮಾಡುತ್ತದೆ ಬನ್ನಿ ಎಂದು ಕರೆಯಬೇಕು. ನಾಗೇಗೌಡರನ್ನು ಬಾಯಿಗೆ ಬಂದಂತೆ ಬೈಯುತ್ತಿದ್ದರು. 20 ವರ್ಷಗಳು ಕಳೆದ ನಂತರ ಅವರ ನೆನಪಾಗಿ ಅವರ ಸಮಾಧಿಗೆ ಹೂ ಹಾಕಿದ್ದಾರೆ.

ಈಗ ನಿಂತಿರುವವರು ನಮ್ಮ ಜಿಲ್ಲೆಯವರ?

ಈಗ ನಿಂತಿರುವವರು ರಾಮನಗರ ಜಿಲ್ಲೆಯವರಾ? ಈಗ ನಿಂತಿರುವವರ ತಮ್ಮ ಚನ್ನರಾಯಪಟ್ಟಣದ ಶಾಸಕರು. ಅವರ ಮಾವ ಈ ದೇಶದ ಪ್ರಧಾನಿಗಳಾಗಿದ್ದವರು. ಹಾಸನ ಜಿಲ್ಲೆಯವರು ಸೋಲಿಸಿ ಕಳುಹಿಸಿದಾಗ ಇಲ್ಲಿಗೆ ಬಂದರು. ಇಲ್ಲಿನ ಜನತೆ ಅವರನ್ನು ಮತ್ತೆ ಗೆಲ್ಲಿಸಿದರು. ಅವರು ಪ್ರಧಾನಿ, ಮುಖ್ಯಮಂತ್ರಿಗಳಾಗಿದ್ದಾಗ ಜಿಲ್ಲೆಗೆ ಏನು ಮಾಡಿದರು?

ಅರ್ಕಾವತಿಯಲ್ಲಿ ನೀರಿಲ್ಲ, ಮೂಲಸೌಕರ್ಯಗಳು ಇಲ್ಲ ಎಂದರೆ ನನಗೆ ಮತ್ತು ಶಾಸಕರಿಗೆ ಕರೆ ಮಾಡುತ್ತೀರಿ. ಅವರನ್ನು ಪಕ್ಷಾತೀತವಾಗಿ ನಮ್ಮ ಕಾಂಗ್ರೆಸ್ ಕಾರ್ಯಕರ್ತರೂ ಸೇರಿದಂತೆ ಅನೇಕ ಜನ ಬೆಂಬಲಿಸಿದ್ದಾರೆ. ಆದರೆ ಜಿಲ್ಲೆಗೆ ಏನು ಮಾಡಿದರು? ನಮ್ಮವರು ಒಬ್ಬರು ಆಗಲಿ ಎನ್ನುವ ಅಭಿಮಾನ ನಮಗೆ ಇತ್ತು. ಆದರೆ ಇಂದು ಬೇರೆ ಜಿಲ್ಲೆಗೆ ಹೋಗಿದ್ದಾರೆ. ಅವರಿಗೆ ಋಣ ಇದೆಯೇ?

ಮುಖ್ಯಮಂತ್ರಿಗಳಾಗಿದ್ದಾಗ ಒಂದೇ ಒಂದು ಸೇತುವೆ ಕಟ್ಟಲಿಲ್ಲ, ಕಾಳೇಗೌಡನ ದೊಡ್ಡಿ ಏತ ನೀರಾವರಿ ಯೋಜನೆ ಮಾಡಲಿಲ್ಲ. ನಾನು ಕೇಂದ್ರಿಯ ವಿದ್ಯಾಲಯ ತಂದಿದ್ದೇನೆ. ಪ್ರಧಾನ ಮಂತ್ರಿಗಳಾಗಿದ್ದಾಗ, ಸಂಸದರಾಗಿದ್ದಾಗ ಈ ಜಿಲ್ಲೆಗೆ ಏಕೆ ಏನೂ ಮಾಡಲಿಲ್ಲ. ಕೇವಲ ಎರಡು ಹೋಬಳಿಗಳ ರಸ್ತೆ ಅಭಿವೃದ್ಧಿಗೆ 120 ಕೋಟಿ, ಸೇತುವೆಗೆ 40 ಕೋಟಿ ಅನುದಾನವನ್ನು ಕೇವಲ 8 ತಿಂಗಳಲ್ಲಿ ಬಿಡುಗಡೆ ಮಾಡಿಸಿದ್ದೇನೆ. ನೀವು ಪ್ರತಿ ಮನೆಗೂ ತೆರಳಿ ನನ್ನ ಅಭಿವೃದ್ಧಿ ಕೆಲಸಗಳ ಬಗ್ಗೆ ಪ್ರಚಾರ ಮಾಡಬೇಕು. ಯುವಕರಿಗೆ ಹೇಳಬೇಕು. ಮೋದಿಯವರು ಬಂದು ನಾನು ಮಾಡುವ ಕೆಲಸ ಮಾಡಿಕೊಡುತ್ತಾರೆಯೇ?

Be the first to comment

Leave a Reply

Your email address will not be published.


*