ಯಾದಗಿರಿ: ಆಟೋ ಚಾಲಕರು ಸಂಘಟಿತರಾಗಿ ಸರ್ಕಾರದಿಂದ ಸಿಗುವ ಸೌಲತ್ತು ಪಡೆಯುವ ಮೂಲಕ ಅಬಿವೃದ್ಧಿ ಹೊಂದಬೇಕೆಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಸಲಹೆ ನೀಡಿದರು.
ನಗರದ ಗಂಜ್ ವೃತ್ತದಲ್ಲಿ ನೂತನವಾಗಿ ಆರಂಭಗೊAಡ ಕರ್ನಾಟಕ ರಾಜ್ಯ ಚಾಲಕರ ಪರಿಷತ್ ನ ಆಟೋ ಚಾಲಕರ ಸಂಘದ ಜಿಲ್ಲಾ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಟೋ ಚಾಲಕರಿಗೆ ಇರುವ ಸಮಸ್ಯೆಗಳನ್ನು ಪಟ್ಟಿ ಮಾಡಿ ನೀಡಿದ್ದಕ್ಕೆ ಸ್ಪಂದಿಸಿದ ಅವರು, ಬೇಡಿಕೆಗಳು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿ, ಶಕ್ತಿ ಯೋಜನೆಯಿಂದ ಸಂಕಟ ನಮ್ಮ ಸರ್ಕಾರದ ಗಮನಕ್ಕೆ ಬಂದಿದೆ ಎಂದು ತಿಳಿಸಿದ ಅವರು, ನಿಮಗೆ ನಷ್ಟವಾಗಿದ್ದರೂ ಹೆಣ್ಣುಮಕ್ಕಳಿಗೆ ಉಚಿತವಾಗಿ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಒಂದರಲ್ಲಿ ನಷ್ಟವಾಗಿದ್ದರೂ ಮತ್ತೊಂದರಲ್ಲಿ ಲಾಭವಾಗಿಯೇ ಇರುತ್ತದೆ. ಒಂದು ಪಡೆಯಲು ಒಂದು ಬಿಡಬೇಕು ಎಂದು ನುಡಿದರು.
ಸರ್ಕಾರದ ಮಟ್ಟದಲ್ಲಿ ಸಿಗುವ ಸೌಲತ್ತು ಒದಗಿಸಿಕೊಡಲು ಎಲ್ಲ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದರು.
ಪ್ರಥಮ ದರ್ಜೆ ಗುತ್ತಿಗೆದಾರ ಹಣಮೇಗೌಡ ಬೀರನಕಲ್ ಮಾತನಾಡಿ, ಆಟೋ ಚಾಲಕರು ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಸೇವೆ ಸಲ್ಲಿಸಿದ್ದು ಇರುತ್ತದೆ. ಮತ್ತು ಎಲ್ಲ ಸಂದರ್ಭದಲ್ಲಿ ಆಟೋ ಚಾಲಕರ ನೆರವು ಅತ್ಯಂತ ಶ್ಲಾಘನೀಯ ಎಂದು ನುಡಿದರು.
ಅತಿಥಿಯಾಗಿ ಆಗಮಿಸಿದ್ದ ಯಾದಗಿರಿ ಟೈಮ್ಸ್ ಪತ್ರಿಕೆ ಸಂಪಾದಕ ಹಾಗೂ ವೀರಭಾರತಿ ಪ್ರತಿಷ್ಠಾನ ಅಧ್ಯಕ್ಷ ವೈಜನಾಥ ಹಿರೇಮಠ ಮಾತನಾಡಿ, ಸರ್ಕಾರದಿಂದ ಸಿಗುವ ಸೌಲತ್ತುಗಳನ್ನು ಸಂಬಂದಿಸಿದ ಇಲಾಖೆಯವರು ಕಾರ್ಯಾಗಾರಗಳು ಕಾರ್ಯಕ್ರಮಗಳು ಮಾಡುವ ಮೂಲಕ ಮಾಹಿತಿ ನೀಡುವ ಕೆಲಸ ಆಗಬೇಕು. ಆಟೋ ಚಾಲಕರ ಕಾರ್ಯಕ್ರಮಕ್ಕೆ ಆರ್.ಟಿ. ಓ. ಅಧಿಕಾರಿಗಳು ಬಂದು ಮಾಹಿತಿ ನೀಡುವಂತ ಕೆಲಸ ಆಗಬೇಕಿತ್ತು ಆದರೆ ಮುಂಬರುವ ದಿನಗಳಲ್ಲಿಯಾದರೂ ಈ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.
ಕೋಲಿ ಸಮಾಜದ ಮುಖಂಡ ಉಮೇಶ ಕೆ. ಮುದ್ನಾಳ ಮಾತನಾಡಿ ಆಟೋ ಚಾಲಕರು ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು, ಸೌಲತ್ತು ಪಡೆಯಲು ಅನುಕೂಲವಾಗುತ್ತದೆ ಎಂದು ಕಿವಿಮಾತು ಹೇಳಿದರು.
ವೇದಿಕೆ ಮೇಲೆ ಹಿರಿಯ ಚಾಲಕ ಬಾಗಪ್ಪ ರಾಗಿರಿ, ನೂರಿ ವಾಹನ ಚಾಲನೆ ತರಬೇತಿ ಶಾಲೆಯ ಪ್ರಾಚಾರ್ಯ ಜುಬೇರ್ ಅಹ್ಮದ್, ಆಟೋ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಲಕ್ಷಮ್ನ ಚವ್ಹಾಣ ಸೇರಿದಂತೆ ಅನೇಕರಿದ್ದರು. ಗುರುಪ್ರಸಾದ ವೈದ್ಯ ನಿರೂಪಿಸಿ ಸ್ವಾಗತಿಸಿ ಕೊನೆಗೆ ವಂದನಾರ್ಪಣೆ ಗೈದರು.
Be the first to comment