ರಾಜ್ಯ ಸುದ್ದಿ
ಬೆಂಗಳೂರು: ರಾಜ್ಯದ ಎನ್‌ಪಿಎಸ್ ನೌಕರರ ಸಂಘಟನೆಯ ಮುಖಂಡರು ಹಳೆ ಪಿಂಚಣಿ ಯೋಜನೆ ಜಾರಿ ಮಾಡುವ ಕುರಿತಾಗಿ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ.
ಎನ್‌ಪಿಎಸ್ ರದ್ದು ಮಾಡಿ ಹಳೆ ಪಿಂಚಣಿ ಜಾರಿಗೊಳಿಸುವ ಬಗ್ಗೆ ಎನ್‌ಪಿಎಸ್ ನೌಕರರ ಸಂಘಟನೆ, ರಾಜ್ಯ ಪ್ರಾಥಮಿಕ ಶಿಕ್ಷಣ ಸಂಘದ ಪದಾಧಿಕಾರಿಗಳು ಹಾಗೂ ಸಚಿವಾಲಯದ ನೌಕರರ ಪದಾಧಿಕಾರಿಗಳೊಂದಿಗೆ ಸಿಎಂ ಸಭೆ ನಡೆಸಿದ್ದಾರೆ.
ಎನ್‌ಪಿಎಸ್ ರದ್ದತಿಯ ಕುರಿತಾಗಿ ಸಭೆಯಲ್ಲಿ ಚರ್ಚೆ ನಡೆಸಿದ್ದು, ಒಪಿಎಸ್ ಜಾರಿ ಮಾಡುವ ಬಗ್ಗೆ ಶೀಘ್ರದಲ್ಲಿಯೇ ಬೃಹತ್ ಸಮಾವೇಶ ಆಯೋಜಿಸುವಂತೆ ಸಿಎಂ ತಿಳಿಸಿದ್ದು, ಸಮಾವೇಶದಲ್ಲಿ ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಜಾರಿಗೊಳಿಸುವ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಸರ್ಕಾರಿ ನೌಕರರಿಗೆ ನೀಡಿರುವ ಭರವಸೆಯಂತೆ ಎನ್‌ಪಿಎಸ್ ರದ್ದತಿ ಭರವಸೆಯನ್ನು ಈಡೇರಿಸುವುದಾಗಿ ಸಿಎಂ ತಿಳಿಸಿದ್ದು, ನೌಕರರ ಮನವಿ ಆಲಿಸಿ ಹಳೆ ಪಿಂಚಣಿ ಜಾರಿಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಸಭೆಯಲ್ಲಿ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತರಾಮ ತೇಜಾ, ಕಾರ್ಯದರ್ಶಿ ನಾಗಭೂಷಣ್, ರಾಜ್ಯ ಪ್ರಾಥಮಿಕ ಶಿಕ್ಷಣ ಸಂಘದ ಅಧ್ಯಕ್ಷ ನಾಗೇಶ್, ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ, ರಾಜ್ಯ ಸರ್ಕಾರಿ ನೌಕರರ ಸಂಘದ ಗೌರವ ಅಧ್ಯಕ್ಷ ಶಿವರುದ್ರಯ್ಯ ಹಾಗೂ ಎನ್‌ಪಿಎಸ್ ನೌಕರರ ಸಂಘದ ಪದಾಧಿಕಾರಿಗಳು ಸೇರಿದಂತೆ ಹಲವರು ಇದ್ದರು.
Be the first to comment