ಬೆಂಗಳೂರು, ಮೇ, 25; ಪಿಂಚಣಿ ಮೊತ್ತ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ಬ್ಯಾಂಕ್ ಪಿಂಚಣಿದಾರರು ಮತ್ತು ನಿವೃತ್ತರ ಒಕ್ಕೂಟದಿಂದ ನಿವೃತ್ತ ಬ್ಯಾಂಕ್ ಅಧಿಕಾರಿಗಳು ಮತ್ತು ಪಿಂಚಣಿದಾರರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಬೇಡಿಕೆ ಈಡೇರಿಸದಿದ್ದರೆ ದೆಹಲಿಯ ಜಂತರ್ ಮಂತರ್ ಮತ್ತು ಮುಂಬೈ ನಲ್ಲಿ ಭಾರೀ ಹೋರಾಟ ನಡೆಸುವುದಾಗಿ ಕೇಂದ್ರ ಹಣಕಾಸು ಸಚಿವಾಲಯಕ್ಕೆ ಎಚ್ಚರಿಕೆ ನೀಡಿದ್ದಾರೆ.
ಬ್ಯಾಂಕ್ ಉದ್ಯೋಗಿಗಳ ಪಿಂಚಣಿ ನಿಯಮಗಳು 1995 ಹಾಗೂ 35 ರ ನಿಬಂಧನೆಯಂತೆ ಪಿಂಚಣಿ ಮೊತ್ತವನ್ನು ಪರಿಷ್ಕರಣೆ ಮಾಡದೇ ಪಿಂಚಣಿದಾರರಿಗೆ ಅನ್ಯಾಯ ಮಾಡುತ್ತಿರುವ ಕೇಂದ್ರ ಹಣಕಾಸು ಸಚಿವಾಲಯದ ಧೋರಣೆಗೆ ಪ್ರತಿಭಟನಾಕಾರರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅಖಿಲ ಭಾರತ ಬ್ಯಾಂಕ್ ಪಿಂಚಣಿದಾರರು ಮತ್ತು ನಿವೃತ್ತರ ಒಕ್ಕೂಟ ಅಧ್ಯಕ್ಷ ಕೆ.ವಿ. ಆಚಾರ್ಯ ಮಾತನಾಡಿ, ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೇಡಿಕೆಗಳನ್ನು ಈಡೇರಿಸುವುದಾಗಿ ನೀಡಿದ್ದ ಭರವಸೆ ನೀಡಿದ್ದರು. ಆದರೆ ಭೇಟಿಗೆ ಅವಕಾಶ ಕೊಡುತ್ತಿಲ್ಲ. ಕಳೆದ 1993/95 ರ ಅವಧಿಯಲ್ಲಿ ಬ್ಯಾಂಕ್‌ಗಳಲ್ಲಿ ಪಿಂಚಣಿ ವ್ಯವಸ್ಥೆ ಜಾರಿಯಾದ ನಂತರದಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರ ವೇತನ ಮತ್ತು ಭತ್ಯೆಗಳನ್ನು ನಿಯಮಿತವಾಗಿ ಐದು ವರ್ಷಗಳಿಗೊಮ್ಮೆ ಪರಿಷ್ಕರಿಸಬೇಕು. ಆದರೆ ಸರ್ಕಾರ ನಿರ್ಲಕ್ಷ್ಯ ವಹಿಸಿದ್ದು, 90ರ ದಶಕದಲ್ಲಿ ನಿವೃತ್ತರಾದ ಮುಖ್ಯ ಜನರಲ್ ಮ್ಯಾನೇಜರ್ಗೆ ಬ್ಯಾಂಕ್‌ನಿಂದ ಇದೀಗ ನಿವೃತ್ತರಾಗಿರುವ ಅಟೆಂಡರ್‌ನ ಪಿಂಚಣಿಗಿಂತ ಕಡಿಮೆ ಪಿಂಚಣಿ ಮೊತ್ತ ದೊರೆಯುತ್ತಿದೆ. ಇದರಿಂದ ಭಾರೀ ತಾರತಮ್ಯ ಮತ್ತು ಅನ್ಯಾಯವಾಗುತ್ತಿದೆ ಎಂದು ದೂರಿದರು.
ಒಕ್ಕೂಟದ ರಾಜ್ಯಾಧ್ಯಕ್ಷ ಎಂ.ಆರ್. ಗೋಪಿನಾಥ್ ಮಾತನಾಡಿ, 2002ರ ನಂತರ ನಿವೃತ್ತರಾದವರಿಗೆ 100% ತುಟ್ಡಿ ಭತ್ಯೆ ನಿರಾಕರಿಸಲಾಗಿದೆ. ವೈದ್ಯಕೀಯ ವಿಮೆ ಪಾವತಿಸಲು ಎರಡು ಮೂರು ತಿಂಗಳ ಪಿಂಚಣಿ ಹಣ ವೆಚ್ಚ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಲಿ ಸೇವೆ ಸಲ್ಲಿಸುತ್ತಿರುವ ಬ್ಯಾಂಕ್ ಉದ್ಯೋಗಿಗಳಿಗೆ ವಿಮಾ ಮೊತ್ತದಿಂದ ವಿನಾಯಿತಿ ನೀಡಲಾಗಿದೆ. ಹೀಗಾಗಿ ಪಿಂಚಣಿದಾರರಿಗೆ ಆರೋಗ್ಯ ವಿಮಾ ಪ್ರೀಮಿಯಂ ಅನ್ನು ಬ್ಯಾಂಕುಗಳು ಭರಿಸಬೇಕು ಎಂದು ಒತ್ತಾಯಿಸಿದರು.
ಹೊಸ ಪಿಂಚಣಿ ಯೋಜನೆಯನ್ನು ಪರಿಚಯಿಸುವ ಮೂಲಕ ಬ್ಯಾಂಕುಗಳು 2010 ರಿಂದ ಸಾಮಾಜಿಕ ಭದ್ರತಾ ಕ್ರಮಗಳಿಂದ ಹಿಂದೆ ಸರಿದಿವೆ. ಆದ್ದರಿಂದ ಹಳೆಯ ಪಿಂಚಣಿ ಯೋಜನೆಗೆ ಮರಳುವ ಅಗತ್ಯವಿದೆ. ಹಣಕಾಸು ಸಚಿವರಿಂದ ಸಕಾರಾತ್ಮಕ ಭರವಸೆಗಳ ಹೊರತಾಗಿಯೂ, ಐಬಿಎ ನಿವೃತ್ತಿ ಪ್ರಯೋಜನಗಳನ್ನು ಸುಧಾರಿಸಲು ಯಾವುದೇ ಸಕಾರಾತ್ಮಕ ಆಸಕ್ತಿಯನ್ನು ತೋರಿಸುತ್ತಿಲ್ಲ. ಹಲವು ಬಾರಿ ಮನವಿ, ಆಂದೋಲನ ನಡೆಸಿದರೂ ಸಂಬಂಧಪಟ್ಟ ಅಧಿಕಾರಿಗಳಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಕಾರ್ಯದರ್ಶಿ ಎ.ಎನ್.ಕೃಷ್ಣಮೂರ್ತಿ, ಸಲಹೆಗಾರ ನಡಾಫ್ ಮತ್ತಿತರರು ಭಾಗವಹಿಸಿದ್ದರು.
Be the first to comment