ವೆಸ್ಟಾಸ್ ವಿಂಡ್ ಟೆಕ್ನಾಲಜಿ (ಇಂಡಿಯಾ) ಪ್ರೈ.ಲಿ ಕಂಪನಿಯ ಪೊಲಿಂಗ್ ಸಬ್ ಸ್ಟೇಷನ್ ಹಾರಕನಾಳು 29ಜನ ಕಾವಲುಗಾರರ ಬದುಕು ಬೀದಿಪಾಲು ಪುನಃ ಕೆಲಸಕ್ಕೆ ನೇಮಿಸಿಕೊಳ್ಳಿ ಎಂದು ಆಗ್ರಹಿಸಿ ಅಹೋರಾತ್ರಿ ಪ್ರತಿಭಟನೆ
ಹರಪನಹಳ್ಳಿ : ( ವಿಜಯನಗರ ಜಿಲ್ಲೆ ) :- ವೆಸ್ಟಾಸ್ ವಿಂಡ್ ಟೆಕ್ನಾಲಜಿ (ಇಂಡಿಯಾ) ಪ್ರೈ.ಲಿ ಪೊಲಿಂಗ್ ಸಬ್ ಸ್ಟೇಷನ್ ಹಾರಕನಾಳು ವಿಂಡ್ ಲೋಕೇಷನ್‌ನಲ್ಲಿ ಕೆಲಸ ಮಾಡುತ್ತಿರುವ 29ಸೆಕ್ಯೂರಿಟಿ ಗಾರ್ಡಗಳಿಗೆ ಗೇಟ್ ಪಾಸ್ ಕೊಟ್ಟು ಬೀದಿಗೆ ತಳ್ಳಿರುವುದರಿಂದ ವಿಷದ ಬಾಟಲಿ ಹಿಡಿದುಕೊಂಡು ಅಹೋರಾತ್ರಿ ಪ್ರತಿಭಟನೆ ಮಾಡುತ್ತಿದ್ದಾರೆ.
ತಾಲ್ಲೂಕಿನ ಹಾರಕನಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಹಾರಕನಾಳು ಗ್ರಾಮದ ಹತ್ತಿರ ಇರುವ ವೆಸ್ಟಾಸ್ ವಿಂಡ್ ಟೆಕ್ನಾಲಜಿ (ಇಂಡಿಯಾ) ಪ್ರೈ.ಲಿ ಪೊಲಿಂಗ್ ಸಬ್ ಸ್ಟೇಷನ್ ಗೇಟಿನ ಮುಂಬಾಗದಲ್ಲಿ ಪ್ರತಿಭಟನಾಕಾರರು ಟೆಂಟ್ ಹಾಕಿಕೊಂಡು ಬೃಹತ್ ಪ್ರತಿಭಟನೆ ಮುಂದಾಗಿದ್ದಾರೆ,
ವೆಸ್ಟಾಸ್ ವಿಂಡ್ ಟೆಕ್ನಾಲಜಿ (ಇಂಡಿಯಾ) ಪ್ರೈ.ಲಿ ಪೊಲಿಂಗ್ ಸಬ್ ಸ್ಟೇಷನ್ ಹಾರಕನಾಳು ವಿಂಡ್ ಲೋಕೇಷನ್‌ನಲ್ಲಿ ಕೆಲಸ ಮಾಡುತ್ತಿರುವ 29ಜನ ಸೆಕ್ಯೂರಿಟಿ ಗಾರ್ಡಗಳನ್ನು ಅಕ್ಟೋಬರ್ 1ನೇ ತಾರೀಖಿನಿಂದ ಇದ್ದಕ್ಕಿದ್ದಂತೆ ಕೆಲಸದಿಂದ ವಜಾಮಾಡಿದ್ದರಿಂದ ನಮ್ಮ ಕುಟುಂಬಗಳು ಬೀದಿಗೆ ಬಂದಿವೆ ಹಾಗಾಗಿ ನಮ್ಮನ್ನು ಪುನಃ ಕೆಲಸಕ್ಕೆ ನೇಮಿಸಿಕೊಳ್ಳಬೇಕೆಂದು ವೆಸ್ಟಾಸ್ ವಿಂಡ್ ಟೆಕ್ನಾಲಜಿ ಪ್ರೈ.ಲಿ ಮತ್ತು ಅಪರ್ವ (ಸಿ.ಎಲ್.ಪಿ) ಕಂಪನಿ ವಿರುದ್ದ ಕರ್ನಾಟಕ ಸ್ಟೇಟ್ ವಿಂಡ್ ಎನರ್ಜಿ ಎಂಪ್ಲಾಯಿಸ್ ಯುನಿಯನ್ ಹಾಗೂ ತಾಲ್ಲೂಕಿನ ವಿವಿಧ ಸಂಘಟನೆಗಳು ಚುನಾಯಿತ ಪ್ರತಿನಿಧಿಗಳು ಹಾಗೂ ಸುತ್ತಮುತ್ತಲಿನ ಗ್ರಾಮದ ಗ್ರಾಮಸ್ಥರು ಅಹೋರಾತ್ರಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ವೇಳೆ ಕಿಸಾನ್ ಸಭಾ ಸಂಘಟನೆಯ ಮುಖಂಡ ಹೊಸಳ್ಳಿ ಮಲ್ಲೇಶ್ ಮಾತನಾಡಿ ಸಾಂವಿಧಾನಿಕವಾಗಿ ಕಾರ್ಮಿಕರಿಗೆ ಕನಿಷ್ಟ ವೇತನ, ಮತ್ತು ಭದ್ರತೆ ಬಹಳ ಮುಖ್ಯ, ಅದೆಲ್ಲವನ್ನು ದಿಕ್ಕರಿಸಿದ ವೆಸ್ಟಾಸ್ ವಿಂಡ್ ಕಂಪನಿಯವರು ೨೦ವರ್ಷಗಳ ಹಿಂದೆ ಈ ಭಾಗದಲ್ಲಿ ರೈತರಿಂದ ಭೂಮಿಯನ್ನು ವಶಪಡಿಸಿಕೊಂಡು ಈ ಭಾಗದ ಜನರನ್ನು ನಿರಾಶ್ರಿತರನ್ನಾಗಿ ಮಾಡಿದ್ದಲ್ಲದೆ, ಅದಕೆ ಪರ್ಯಾಯವಾಗಿ ಮನೆಗೆ ಒಬ್ಬರಿಗೆ ಉದ್ಯೋಗ ನೀಡುತ್ತೇವೆ ಎಂದು ಭರವಸೆ ನೀಡಿದ್ದು, ಅದರಂತೆ 29ಜನರನ್ನು ಕಂಪನಿಯು ನೇಮಕ ಮಾಡಿಕೊಂಡು 18ವರ್ಷಗಳ ಕಾಲ ದುಡಿಸಿಕೊಂಡು ಈಗ ಏಕಾಏಕಿ ಯಾವ ಸೂಚನೆಯ ನೀಡದೇ ಆ ಕಾವಲುಗಾರರನ್ನು ಕಂಪನಿಯಿಂದ ಕಿತ್ತುಹಾಕಿದ್ದರಿಂದ ಅವರ ಬದುಕು ಬೀದಿಗೆ ಬಂದು ನಿಂತಿದೆ, ಹಾಗಾಗಿ ಈ ಕಾರ್ಮಿಕರನ್ನು ಕೂಡಲೇ ನೀವು ವಾಪಸ್ಸು ಕರೆಸಿಕೊಂಡು ಅವರನ್ನು ಉದ್ಯೋಗದಲ್ಲಿ ಮುಂದುವರೆಸಿ ಅವರಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು.
ಸಿ.ಪಿ.ಐ ತಾಲ್ಲೂಕು ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್ ಮಾತನಾಡಿ ಸುಮಾರು 10-15ವರ್ಷಗಳ ಕಾಲ ನಿಮ್ಮ ಕಂಪನಿಯಲ್ಲಿ ದುಡಿಯುವ 29ಸೆಕ್ಯೂರಿಟಿ ಗಾರ್ಡಗಳನ್ನು ಏಕಾ ಏಕಿ ಕೆಲಸದಿಂದ ವಜಾ ಮಾಡಿರುವುದು ಮಹಾ ತಪ್ಪು, ಈಗಾಗಲೇ ಅವರು ಮತ್ತು ಅವರ ಕುಟುಂಬದವರು ಬೀದಿಗೆ ಬಂದಿದ್ದಾರೆ, ಹಾಗಾಗಿ ಇಂತಹ ಕಂಪನಿ ವಿರುದ್ದ ನಾವು ಅಹೋರಾತ್ರಿ ಪ್ರತಿಭಟನೆ ಮಾಡುವ ಮೂಲಕ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಕಂಪನಿಗಳು ಕಾರ್ಮಿಕರನ್ನು ದುಡಿಸಿಕೊಂಡು ದೇಶವಾಸಿಗಳ ಬದುಕನ್ನು ಕಿತ್ತುಕೊಳ್ಳುತ್ತಿವೆ, ಇಂತಹ ಎಲ್ಲ ದುರಂತಗಳಿಗೆ ನಮ್ಮ ದೇಶದ ಜನ ಪ್ರತಿನಿಧಿಗಳೆ ನೇರ ಹೊಣೆಗಾರರಾಗುತ್ತಾರೆ, ಜನ ಪ್ರತಿನಿಧಿಗಳು ಕಂಪನಿಗಳ ಬೂಟು ನೆಕ್ಕುವ ಕೆಲಸವನ್ನು ಮಾಡುತ್ತಿದ್ದಾರೆ, ದೇಶವನ್ನು ಹಾಳುಮಾಡುತ್ತ ಇವರು ಲೂಟಿಕೋರರಾಗಿದ್ದಾರೆ, ಹಾಗಾಗಿ ಜನ ಸಾಮಾನ್ಯರ ಪರಿಸ್ಥಿತಿ ಇವರಿಗೆ ಹೇಗೆ ಅರ್ಥವಾಗುತ್ತದೆ ಎಂದು ಕಿಡಿಕಾರಿ ಜನ ಪ್ರತಿನಿಧಿಗಳ ಮತ್ತು ಕಂಪನಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಉಪಾಧ್ಯಕ್ಷರಾದ ಮಂಜ್ಯಾನಾಯ್ಕ್ ಮಾತನಾಡಿ ಹಾರಕನಾಳು ಪೊಲಿಂಗ್ ಸಬ್ ಸ್ಟೇಷನ್ ಕೆಲಸ ಮಾಡುವ 29ಜನ ಕಾವಲುಗಾರ ಕಾರ್ಮಿಕರನ್ನು ಉದ್ಯೋಗದಿಂದ ತೆಗೆದು ಹಾಕಿದ್ದಲ್ಲದೇ, ಈ ಭಾಗದ ರೈತರಿಗೆ ಅನ್ಯಾಯ ಮಾಡಿದ್ದಾರೆ, ಭೂಮಿ ಕಳೆದುಕೊಂಡು ನಿರಾಶ್ರಿತರಾಗಿ ಬೀದಿಗೆ ಬಂದಿದ್ದಾರೆ.
ಉನ್ನತ ಮತ್ತು ತಾಂತ್ರಿಕ ವ್ಯಾಸಂಗ ಮಾಡಿದ ಅರ್ಹ ಸ್ಥಳೀಯ ಅಭ್ಯರ್ಥಿಗಳನ್ನು ಉನ್ನತ ಹುದ್ದೆಗಳಿಗೆ ನೇಮಿಸಿಕೊಳ್ಳದೇ ಕೇವಲ 29ಜನ ಕಾವಲುಗಾರರ ಹುದ್ದೆಗಳನ್ನು ನೇಮಿಸಿಕೊಂಡು ಉನ್ನತ ಹುದ್ದೆಗಳಿಗೆ ಮುಂಬೈ, ಚನ್ನೈ, ಬೆಂಗಳೂರು ಜನರಿಗೆ ಆಯ್ಕೆ ಮಾಡಿಕೊಂಡು ಸ್ಥಳೀಯರನ್ನು ದಿಕ್ಕರಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ವೆಸ್ಟಾಸ್ ವಿಂಡ್ ಟೆಕ್ನಾಲಜಿ (ಇಂಡಿಯಾ) ಪ್ರೈ.ಲಿ ಅಡ್ಮಿನ್ ಆದ ಧನಂಜಯ, ಲಿಗಲ್ ಅಡ್ವೈಜರ್ ಸಂಪತ್, ರಸ್ವಲ್ ಪ್ರತಿಭಟನಾಕಾರರನ್ನು ಸಮಾಧಾನ ಮಾಡಲು ಪ್ರಯತ್ನಿಸಿದರು ಆದರೆ ಫಲಿಸಲಿಲ್ಲ.
ಸೆಕ್ಯೂರಿಟಿ ಗಾರ್ಡಗಳಾದ ಕೃಷ್ಣಮೂರ್ತಿ, ಸೂರ್ಯನಾಯ್ಕ್, ಎಲ್.ಸಿ ಮಂಜ್ಯಾ ನಾಯ್ಕ್, ಎಸ್.ರವಿ ನಾಯ್ಕ್, ಎಲ್.ಪಿ ಸೋಮ್ಲಾ ನಾಯ್ಕ್, ಎಲ್.ಬಿ ಹಾಲೇಶ್ ನಾಯ್ಕ್, ಎಲ್ ಮಂಜ್ಯಾ ನಾಯ್ಕ್, ಲಕ್ಷö್ಮಣ ನಾಯ್ಕ್, ವೀರ್ಯ್ಯ ನಾಯ್ಕ್, ನಿಂಗರಾಜ್, ಜೆ.ನಾಗರಾಜ್, ಪೀರ್ಯಾ ನಾಯ್ಕ್, ರವಿಚಂದ್ರ, ಎಸ್. ನಾಗರಾಜ್, ಧರ್ಮ ನಾಯ್ಕ್ ಎಂ ಕೊಟ್ರಪ್ಪ, ಎಲ್.ಟಿ ರಮೇಶ್ ನಾಯ್ಕ್, ವೀರೇಶ್ ನಾಯ್ಕ್, ಶೇಖರಪ್ಪ ಎ.ಕೆ, ಲೋಕ್ಯಾ ನಾಯ್ಕ್, ಹೆಚ್ ಪಂಪನಾಯ್ಕ್, ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಹಾರಕನಾಳ್ ಗ್ರಾ.ಪಂ ಸದಸ್ಯರಾದ ಬಸವನಗೌಡ್ರು, ದುರುಗದಯ್ಯ, ನಿಂಗಪ್ಪ, ಮುಖಂಡರಾದ ಕಲ್ಲನಗೌಡ್ರು, ರಾಜಶೇಖರ ಗೌಡ, ನಂದೀಶ್, ಮಂಜಯ್ಯ, ಶಿವಕುಮಾರ್, ನಾಗರಾಜ್, ಎಲ್.ಬಿ ಹಾಲೇಶ್ ನಾಯ್ಕ್, ವೀರ್ಯಾ ನಾಯ್ಕ್, ಪಂಪನಾಯ್ಕ್, ಎ.ವೈ.ಎಫ್ ನ ಮುಖಂಡರಾದ ದೊಡ್ಡ ಬಸವರಾಜ್, ಎ.ಐ.ಎಸ್.ಎಫ್ ನ ಮುಖಂಡರಾದ ದಿನೇಶ್, ಎನ್.ಎಸ್.ಯು.ಐ ಮುಖಂಡರಾದ ಹರಿಶ್ಚಂದ್ರ ನಾಯ್ಕ್, ಹಾಗೂ ಕರ್ನಾಟಕ ಸ್ಟೇಟ್ ವಿಂಡ್ ಎನರ್ಜಿ ಎಂಪ್ಲಾಯಿಸ್ ಯುನಿಯನ್ ಹಾಗೂ ತಾಲ್ಲೂಕಿನ ವಿವಿಧ ಸಂಘಟನೆಗಳು ಚುನಾಯಿತ ಪ್ರತಿನಿಧಿಗಳು ಹಾಗೂ ಸುತ್ತಮುತ್ತಲಿನ ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದರು.
Be the first to comment