ಜಿಲ್ಲಾ ಸುದ್ದಿಗಳು
-
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಗಬೇನಾಳ ತಾಂಡಾ ವ್ಯಾಪ್ತಿಯ ಬಸವಸಾಗರ ಜಲಾಶಯ ಪಕ್ಕದಲ್ಲಿ ಬರುವ ಸರ್ವೇ ನಂಬರ್ 84ರಲ್ಲಿ ನಡೆಸುತ್ತಿರುವ ಬೂದಿಹಾಳ ಪೀರಾಪುರ ಏತ ನೀರಾವರಿ ಕಾಮಗಾರಿಯ ವಿದ್ಯುತ್ ಸ್ಥಾವರ ನಿರ್ಮಾಣ ಸ್ಥಗಿತಗೊಳಿಸುವಂತೆ ಆಗ್ರಹಿಸಿ ರೈತರು ಶನಿವಾರ ರಸ್ತೆ ತಡೆದು ನಡೆಸಿದ ಪ್ರತಿಭಟನೆಗೆ ಯಶ ದೊರಕಿದೆ. ರೈತ ಮಹಿಳೆಯರು ವಿಷದ ಬಾಟಲಿ ಹಿಡಿದೇ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರಿಂದ ಪರಿಸ್ತಿತಿಯ ತೀವ್ರತೆ ಅರಿತುಕೊಂಡ ಸ್ಥಳಕ್ಕೆ ಆಗಮಿಸಿದ್ದ ವಿಜಯಪುರ ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ ಹಾಗೂ ಕೆಬಿಜೆಎನ್ನೆಲ್ ಅಧಿಕಾರಿಗಳು ಸ್ಪಂಧನೆ ನೀಡಿ 15 ದಿನಗಳವರೆಗೆ ಕೆಲಸ ಸ್ಥಗಿತಗೊಳಿಸುವುದಾಗಿ ತಿಳಿಸಿ ರೈತರ ಪ್ರತಿಭಟನೆ ಅಂತ್ಯಗೊಳ್ಳುವಂತೆ ನೋಡಿಕೊಂಡಿದ್ದಾರೆ. ಗುರುವಾರ ಸಂಜೆಯಿಂದಲೇ ನಾರಾಯಣಪುರ ಎಡದಂಡೆ ಕಾಲುವೆ ಬಳಿ ರೈತರು ಅಹೋರಾತ್ರಿ ಧರಣಿ ಸತ್ಯಾಗ್ರಹ ಪ್ರಾರಂಭಿಸಿದ್ದರು. ಆದರೂ ಕೆಬಿಜೆಎನ್ನೆಲನವರು ಕೆಲಸ ಪ್ರಾರಂಭಿಸುವ ಪ್ರಯತ್ನದಲ್ಲಿದ್ದರು. ಇದನ್ನು ಅರಿತ ರೈತರು ಶನಿವಾರ ಪ್ರತಿಭಟನೆ ಉಗ್ರಗೊಳಿಸುವ ತೀರ್ಮಾನಕ್ಕೆ ಬಂದಿದ್ದರು. ನಾವು ಕೆಲವಷ್ಟು ದಾಖಲೆ ಸಂಗ್ರಹಿಸುತ್ತಿದ್ದೇವೆ. ಸೋಮವಾರ ಎಸಿ ಕೋರ್ಟನ ಟ್ರಿಬ್ಯೂನಲಗೆ ಅರ್ಜಿ ಸಲ್ಲಿಸುತ್ತೇವೆ. ಹೈಕೋರ್ಟನ ಕಲಬುರ್ಗಿ ಪೀಠದ ಸೆಕೆಂಡ್ ಬೆಂಚಗೆ ಮೇಲ್ಮನವಿ ಸಲ್ಲಿಸುತ್ತೇವೆ. ಕೋರ್ಟ ಜಮೀನಿನ ಮಾಲಿಕತ್ವದ ಕುರಿತು ಅಂತಿಮ ತೀರ್ಪು ಕೊಡುವವರೆಗೆ ಕೆಲಸ ಸ್ಥಗಿತಗೊಳಿಸಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಸಿಪಿಐ
-
ಆನಂದ ವಾಗಮೋಡೆ, ಪಿಎಸೈ ಮಲ್ಲಪ್ಪ ಮಡ್ಡಿ ನೇತೃತ್ವದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ 4 ಡಿಆರ್ ಮತ್ತು ವಿವಿಧ ಠಾಣೆಗಳ ಪೊಲೀಸರು ಬಂದೋಬಸ್ತ ಏರ್ಪಡಿಸಿದ್ದಾರೆ. ಪ್ರತಿಭಟನೆ ಪ್ರಾರಂಭಗೊಂಡಾಗ ಸ್ಥಳದಲ್ಲಿ ಬಿಗುವಿನ ವಾತಾವರಣ ಕಂಡುಬಂದಿತ್ತು. ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ದನಗೌಡ ಬಿರಾದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಣ್ಣ ಬಾಗೇವಾಡಿ, ತಾಲೂಕು ಅಧ್ಯಕ್ಷ ಅಯ್ಯಪ್ಪ ಬಿದರಕುಂದಿ, ತಾಲೂಕು ಪ್ರಧಾನ ಕಾರ್ಯದರ್ಶಿ ವೈ.ಎಲ್.ಬಿರಾದಾರ, ಮುಖಂಡ ಪಾವಡೆಪ್ಪಗೌಡ ಹವಾಲ್ದಾರ್, ನೊಂದ ರೈತ ಕುಟುಂಬದ ಸದಸ್ಯರು, ವಿಜಯಪುರ, ಯಾದಗಿರಿ, ರಾಯಚೂರು ಜಿಲ್ಲೆಗಳ ನೂರಾರು ರೈತರು ಪಾಲ್ಗೊಂಡಿದ್ದರು.
Be the first to comment