ಈದ್ಗಾ ಮೈದಾನದ ಆಸ್ತಿ ವಿವಾದ: ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ವಕ್ಫ್ ಬೋರ್ಡ್, ಶಾಸಕ ಜಮೀರ್ ಅಹಮದ್ ಖಾನ್ – ಸಾಮಾಜಿಕ ಕಾರ್ಯಕರ್ತ ಆಲಂ ಪಾಶ

ಬೆಂಗಳೂರು, ಆ, 28; ಚಾಮರಾಜಪೇಟೆಯ ಈದ್ಗಾ ಮೈದಾನ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ವಕ್ಫ್ ಬೋರ್ಡ್, ಶಾಸಕ ಜಮೀರ್ ಅಹಮದ್ ಖಾನ್ ಮತ್ತಿತರರು ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದು, ಇದರಿಂದ ಅಲ್ಪ ಸಂಖ್ಯಾತ ಸಮುದಾಯಕ್ಕೆ ಭಾರೀ ನೋವುಂಟಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಆಲಂ ಪಾಶ ಆಪಾದಿಸಿದ್ದಾರೆ.

ಈದ್ಗಾ ಮೈದಾನದ ಆಸ್ತಿ ಹಕ್ಕಿನ ಕುರಿತು ಸರ್ಕಾರ ರೂಪಿಸಿದ ಷಡ್ಯಂತ್ರದಂತೆ ವಾಸ್ತವಾಂಶಗಳನ್ನು ನ್ಯಾಯಾಲಯದಿಂದ ಮುಚ್ಚಿಡಲಾಗಿದೆ. “ನೀ ಅತ್ತಂತೆ ಮಾಡು-ನಾನು ಸತ್ತಂತೆ ಮಾಡುತ್ತೇನೆ” ಎನ್ನುವ ಧೋರಣೆಯನ್ನು ವಕ್ಫ್ ಬೋರ್ಡ್ ಅಧ್ಯಕ್ಷರು, ಸದಸ್ಯರು, ಶಾಸಕರು ಅನುಸರಿಸಿದ್ದಾರೆ. ಇದರ ಪರಿಣಾಮ ಕಂದಾಯ ಸಚಿವ ಆರ್. ಅಶೋಕ್ ಚಿತಾವಣೆ ನಡೆಸಿ ಇದೇ ಮೊದಲ ಬಾರಿಗೆ ಇತಿಹಾಸದಲ್ಲಿ ಹಿಂದೆಂದೂ ಆಗದೇ ಇರುವ ಗೊಂದಲದ ಕೆಲಸ ಮಾಡಲು ಹೊರಟಿದ್ದಾರೆ. ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರು ವಕ್ಫ್ ಮಂಡಳಿ ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ 1965 ರಲ್ಲಿ ಹೈಕೋರ್ಟ್, ಸುಪ್ರೀಂ ಕೋರ್ಟ್ ಗಳು ಈದ್ಗಾ ಭೂಮಿ ವಕ್ಫ್ ಬೋರ್ಡ್ ಗೆ ಸೇರಿದ್ದು ಎಂದು ಆದೇಶ ನೀಡಿದೆ. ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ವಕ್ಫ್ ಬೋರ್ಡ್ ಸರಿಯಾಗಿ ನಿರ್ವಹಣೆ ಮಾಡಿಲ್ಲ. ದಾಖಲೆಗಳನ್ನು ಮುಚ್ಚಿಟ್ಟು ಸರ್ಕಾರದ ಅಣತಿಯಂತೆ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಾಅದಿ ನಡೆಯುತ್ತಿದ್ದಾರೆ. ಬೋರ್ಡ್ ಸದಸ್ಯರು ಸಹ ಇವರ ಜೊತೆ ಶಾಮೀಲಾಗಿದ್ದಾರೆ ಎಂದು ದೂರಿದರು.

ಕಳೆದ 57 ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ಸರ್ಕಾರ ಪ್ರಶ್ನಿಸಿಲ್ಲ. ಹಾಗಾದರೆ ಇದನ್ನು ಒಪ್ಪಿಕೊಂಡಂತಾಗಿದೆ. ಇದನ್ನು ಪ್ರಶ್ನಿಸಿ ಇದೀಗ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಸಾಧ್ಯವಿಲ್ಲ. ಇದು ಒಪ್ಪಿಕೊಂಡಿರುವ ತೀರ್ಪು. ಹಾಗೊಂದು ವೇಳೆ ವಕ್ಫ್ ಆಸ್ತಿ ವಿಚಾರದ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುವಂತಿದ್ದರೆ ಇದಕ್ಕೂ ಮುನ್ನ ಸೆಂಟ್ರಲ್ ವಕ್ಫ್ ಕಾಯ್ದೆ ಪ್ರಕಾರ ವಕ್ಫ್ ನ್ಯಾಯಮಂಡಳಿಯಲ್ಲಿ ವಿವಾದ ಇತ್ಯರ್ಥವಾಗಬೇಕು. ಆ ನಂತರ ಈ ಆದೇಶವನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲು ಅವಕಾಶವಿದೆ ಎಂದರು.

ಈದ್ಗಾ ಮೈದಾನದ ವಿಚಾರದಲ್ಲಿ ತಾವು ಗೃಹ ಕಾರ್ಯದರ್ಶಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ತಮ್ಮ ಸೂಚನೆಗೆ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ವಕ್ಫ್ ಭೂಮಿ ಬಗ್ಗೆ ಕಂದಾಯ ಇಲಾಖೆ, ಪೊಲೀಸ್ ಇಲಾಖೆಗೆ ಯಾವುದೇ ಅಧಿಕಾರ ಇಲ್ಲ. ವಕ್ಫ್ ಟ್ರಿಬ್ಯುನಲ್ ನಲ್ಲಿ ವ್ಯಾಜ್ಯ ಇತ್ಯರ್ಥವಾಗದಿದ್ದರೆ ವಕ್ಫ್ ಮಂಡಳಿ ಹೈಕೋರ್ಟ್ ಗೆ ಹೋಗುವ ಅಗತ್ಯವಿಲ್ಲ. ಆದರೆ ಗುರುವಾರ ಹೈಕೋರ್ಟ್ ನಲ್ಲಿ ನಡೆದ ವಿಚಾರಣೆಯಲ್ಲಿ ಶಾಸಕ ಜಮೀರ್ ಅಹಮದ್ ಅವರು ಸಹ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇವರ ಉದ್ದೇಶ ಏನು? ಎಂದು ಆಲಂ ಪಾಶ ಪ್ರಶ್ನಿಸಿದರು.

 

ಮೊದಲು ಈದ್ಗಾ ಮೈದಾನ ಯಾರದ್ದು ಎಂಬುದು ಇತ್ಯರ್ಥವಾಗಬೇಕು. ಶಾಸಕರು ಮತ್ತು ವಕ್ಫ್ ಮಂಡಳಿ ಈದ್ಗಾ ಮೈದಾನವನ್ನು ಅನಾಥ ಶಿಶು ಮಾಡಿದೆ. ಹೈಕೋರ್ಟ್ ತೀರ್ಪು ನೀಡಿದ 24 ಗಂಟೆಯೊಳಗೆ ವಿಭಾಗೀಯ ಪೀಠಕ್ಕೆ ಹೋಗಿದ್ದು ಅಚ್ಚರಿ ತಂದಿದೆ. ಈದ್ಗಾ ಮೈದಾನದಲ್ಲಿ ಹಿಂದೂ ಮತ್ತು ಮಸ್ಲೀಂ ಧರ್ಮದವರ ಧಾರ್ಮಿಕ ಆಚರಣೆಗೆ ಅವಕಾಶ ಮಾಡಿಕೊಟ್ಟಿರುವುದು ಗೊಂದಲಕ್ಕೆ ಕಾರಣವಾಗಿದೆ. ಕಳೆದ ತಿಂಗಳು ರಾಜ್ಯ ಸರ್ಕಾರ 25 ಸಾವಿರ ಎಕರೆ ಭೂಮಿಯನ್ನು ವಿವಿಧ ಕೈಗಾರಿಕೆಗಳು, ಸಂಘ ಸಂಸ್ಥೆಗಳಿಗೆ ನೀಡಿದೆ. ಆದರೆ ಇದೀಗ ಎರಡು ಎಕರೆ ಈದ್ಗಾ ಭೂಮಿಗಾಗಿ ಗೊಂದಲ ಸೃಷ್ಟಿಸುತ್ತಿದೆ ಎಂದು ಆಲಂ ಪಾಶ ಅಸಮಾಧಾನ ವ್ಯಕ್ತಪಡಿಸಿದರು.

Be the first to comment

Leave a Reply

Your email address will not be published.


*