ಮೀನುಗಾರ ಮೊಗೇರರಿಗೆ ಪರಿಶಿಷ್ಟ ಜಾತಿ ಸಿಂಧುತ್ವ ಪ್ರಮಾಣಪತ್ರ ನೀಡುವ ಕ್ರಮವನ್ನು ಖಂಡಿಸಿ ಮನವಿ

ವರದಿ- ಕುಮಾರ ನಾಯಕ್ ಭಟ್ಕಳ್ , ಉಪಸಂಪಾದಕರು

ಯಲ್ಲಾಪುರ

ಮೂಲದಿಂದ ಬಂದ ಪರಿಶಿಷ್ಟ ಜಾತಿ,ಜನಾಂಗದವರೇ ಇದುವರೆಗೆ ಅಭಿವೃದ್ಧಿ ಹೊಂದದೇ ಇರುವ ಸಂದರ್ಭದಲ್ಲಿ ಕಾರವಾರದ ಮೀನುಗಾರ ಮೊಗೇರರಿಗೆ ಪರಿಶಿಷ್ಟ ಜಾತಿ ಸಿಂಧುತ್ವ ಪ್ರಮಾಣಪತ್ರ ನೀಡುವ ಕ್ರಮವನ್ನು ಖಂಡಿಸಿ ತಾಲೂಕಾ ವಿವಿಧ ದಲಿತ ಸಂಘಟನೆಗಳ ಒಕ್ಕೂಟ ಬುಧವಾರ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಪರಿಶಿಷ್ಟ ಜಾತಿಗೆ ಸೇರಿದ 101 ಜಾತಿಯವರಿಗೇ ಸರಿಯಾಗಿ ಮೀಸಲು ಅನುದಾನದ ಮೂಲಭೂತ ಸೌಕರ್ಯಗಳು ಪೂರ್ಣಪ್ರಮಾಣದಲ್ಲಿ ತಲುಪಿರುವುದಿಲ್ಲ. ಹಾಗಾಗಿ ಮತ್ತೆ ಪರಿಶಿಷ್ಟ ಜಾತಿ ಪಂಗಡದ ಪಟ್ಟಿಯಲ್ಲಿ ಬೇರೆ ಯಾವುದೇ ಜಾತಿ ಸಮುದಾಯದವರನ್ನು ಸೇರಿಸಬಾರದು. ಮೂಲ ಇರುವವರೇ ಹಿಂದುಳಿದು ಅವಕಾಶ ವಂಚಿತರಾಗಿದ್ದಾರೆ.

ಹೀಗಿರುವಾಗ,ಜಿಲ್ಲೆಯಲ್ಲಿ 1997 ರಿಂದ 2010 ರವರೆಗೆ ಮೀನುಗಾರ ಸಮುದಾಯದವರು ಸುಳ್ಳುಜಾತಿಯ ಮಾಹಿತಿ ನೀಡಿ ಪರಿಶಿಷ್ಟ ಜಾತಿ ಪ್ರಮಾಣ ಪಡೆದುಕೊಂಡು ಮೀಸಲಾತಿ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಮೀನುಗಾರ ಸಮುದಾಯದವರು ನಕಲಿದಾಖಲೆ ಸೃಷ್ಟಿಸಿ ಪ.ಜಾತಿಯ ಮೂಲ‌ ಮೊಗೆರರ ಸವಲತ್ತು ಪಡೆಯುವ ಮೂಲಕ ಸಾಂವಿಧಾನಿಕ ಮೀಸಲಾತಿ ಹಕ್ಕುಗಳನ್ನು ಕಸಿದು ಅನ್ಯಾಯವೆಸಗಿದ್ದಾರೆ. ಇಷ್ಟಾಗಿಯೂ ಅವರಿಗೆ ಪ.ಜಾತಿಯ ಪ್ರಮಾಣಪತ್ರ ನೀಡಲು ಮುಂದಾದಲ್ಲಿ ಉಗ್ರಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ವಿವಿಧ ದಲಿತ ಸಂಘಟನೆಗಳ ಪ್ರಮುಖರಾದ ನಾಗೇಶ ಬೋವಿವಡ್ಡರ್, ಮಾರುತಿ ಬೋವಿವಡ್ಡರ್, ಕಲ್ಲಪ್ಪ ಹೋಳಿ,ಪ್ರಕಾಶ ಕಟ್ಟಿಮನಿ,ಅಶೋಕ ಕೊರವರ,ಶ್ಯಾಮಲಿ ಪಾಟಣಕರ್,ತೋಳರಾಮ ಅತ್ತರವಾಲಾ,ಸಂತೋಷ ಪಾಟಣಕರ್, ರವಿ ಪಾಟಣಕರ್,ಭೀಮಶಿ ವಾಲ್ಮೀಕಿ, ಮುಂತಾದವರು ಭಾಗವಹಿಸಿದ್ದರು.

Be the first to comment

Leave a Reply

Your email address will not be published.


*