ನಾಗಮಂಗಲದಿಂದ ಬೆಂಗಳೂರಿಗೆ ಉಚಿತ ಬಸ್ ಸೇವೆಗೆ ಚಾಲನೆ : ತಾಯಿ ಆಸೆ ಈಡೇರಿಸಲು ಮುಂದಾಗ ಮಂಡ್ಯದ ಯುವ ಉದ್ಯಮಿ

ಬೆಂಗಳೂರು, ಆ, 28; ಅರಮನೆ ಶಂಕರ್ ಸೇವಾ ಪ್ರತಿಷ್ಠಾನ (ರಿ)ದಿಂದ ಬೆಂಗಳೂರಿನಿಂದ ಮಂಡ್ಯ ಜಿಲ್ಲೆಯ ನಾಗಮಂಗಲ: ನಾಗಮಂಗಲದಿಂದ ಬೆಂಗಳೂರಿಗೆ ಇಂದಿನಿಂದ ಪ್ರತಿನಿತ್ಯ ಉಚಿತ ಬಸ್ ಸೇವೆ ದೊರೆಯುತ್ತಿದೆ. ಇದು ಒಂದೆರೆಡು ದಿನಗಳ ಸಾಂದರ್ಭಿಕ ಸೇವೆಯಲ್ಲ. ತಮ್ಮ ಹುಟ್ಟೂರಿನ ಋಣ ತೀರಿಸಲು ನಿರಂತರವಾಗಿ ಉಚಿತ ಬಸ್ ಸೇವೆಯನ್ನು ಒದಗಿಸುತ್ತಿದ್ದಾರೆ ಯುವ ಉದ್ಯಮಿ, ಅರಮೆನ ಶಂಕರ್ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಅರಮನೆ ಶಂಕರ್.

ಗೌರಿ – ಗಣೇಶ ಚತುರ್ಥಿ ಅಂಗವಾಗಿ ಇಂದು ಬೆಳಿಗ್ಗೆ ಬೆಂಗಳೂರಿನ ಶ್ರೀನಗರ ಬಸ್ ನಿಲ್ದಾಣದಲ್ಲಿ ಬಸ್ ಸೇವೆಗೆ ಚಾಲನೆ ನೀಡಿದರು. ಬೆಂಗಳೂರಿನ ಶ್ರೀನಗರ ದಿಂದ ನಾಗಮಂಗಲಕ್ಕೆ ಪ್ರತಿ ದಿನ ಬೆಳಿಗ್ಗೆ 8:30ಕ್ಕೆ ಒಂದು ಬಸ್ ಸಂಚರಿಸಿದರೆ ಮಧ್ಯಾಹ್ನ 3 ಕ್ಕೆ ನಾಗಮಂಲದಿಂದ ಬೆಂಗಳೂರಿಗೆ ಮತ್ತೊಂದು ಬಸ್ ಹೊರಡಲಿದೆ. ಒಂದು ಬಸ್ ಮಂಡ್ಯ ಮತ್ತೊಂದು ಬಸ್ ಬೆಳ್ಳೂರು ಕ್ರಾಸ್ ಮಾರ್ಗವಾಗಿ ಸಾಗಲಿದೆ.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಖರಡ್ಯ ಗ್ರಾಮದ ಅರಮನೆ ಶಂಕರ್ ರೈತಾಪಿ ಕುಟುಂಬದ ವೆಂಕಟೇಗೌಡ ಮತ್ತು ಜಯಮ್ಮ ಅವರ ಕಿರಿಯ ಪುತ್ರ. ಬೆಂಗಳೂರಿನಲ್ಲಿ ಹಲವಾರು ಉದ್ಯಮಗಳನ್ನು ನಡೆಸುತ್ತಿದ್ದಾರೆ. ಸಮಾಜ ಸೇವೆ ಇವರ ಪ್ರವೃತ್ತಿ. ಯಾವುದೇ ರಾಜಕೀಯ ಪಕ್ಷಗಳ ಜೊತೆ ಗುರುತಿಸಿಕೊಳ್ಳದೇ ತಟಸ್ಥವಾಗಿ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಶಿಕ್ಷಣ, ಕ್ರೀಡೆ, ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ.

ಉದ್ಘಾಟನೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅರಮನೆ ಶಂಕರ್, ನಾಗಮಂಗಲದ ಜನರಿಗೆ ಉಚಿತ ಬಸ್ ಸೇವೆ ಒದಗಿಸುವಂತೆ ತಮ್ಮ ತಾಯಿ ಬಯಕೆಯನ್ನು ಈ ಮೂಲಕ ಈಡೇರಿಸುತ್ತಿದ್ದೇನೆ. ಸಮಾಜ ಸೇವೆಯಲ್ಲಿ ತೊಡಗಲು ತಮಗೆ ಆದಿಚುಂಚನಗರಿ ಮಠದ ಶ್ರೀಗಳೇ ಪ್ರೇರಣೆಯಾಗಿದ್ದಾರೆ. ಜನ ಸಾಮಾನ್ಯರು ತಮ್ಮ ಊರಿಗೆ ನಿರಾಯಾಸವಾಗಿ ತೆರಳಲು ಈ ವ್ಯವಸ್ಥೆ ಕಲ್ಪಿಸಲಾಗಿದೆ. ತಮ್ಮ ಊರಿನ ಜನರಿಗೆ ಇನ್ನಷ್ಟು ಸಮಾಜ ಸೇವೆ ಮಾಡುವ ಹೆಬ್ಬಯಕೆ ತಮ್ಮದಾಗಿದೆ ಎಂದು ಹೇಳಿದರು.

Be the first to comment

Leave a Reply

Your email address will not be published.


*