ಭರತನಗರಿ ಕಾದಂಬರಿ ಮೇಲೆ ಕಾನೂನು ಕ್ರಮಕ್ಕೆ ಎನ ರವಿಕುಮಾರ ಆಗ್ರಹ

ಬೆಂಗಳೂರು: ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ತಮ್ಮ ಕಾದಂಬರಿ ‘ಭರತನಗರಿ’ ಯಲ್ಲಿ ರಾಷ್ಟ್ರಗೀತೆ ಬಗ್ಗೆ ಅತ್ಯಂತ ಅವಹೇಳನಕಾರಿಯಾಗಿ ಬರೆದಿದ್ದಾರೆ. ವಿಡಂಬನೆ ಮಾಡಿದ್ದಲ್ಲದೆ ಭಾರತವನ್ನು ಜಡಭಾರತ ಎಂದು ಕರೆದಿದ್ದಾರೆ.

ಗಂಗಾನದಿಯನ್ನು ಅವಹೇಳನಕಾರಿಯಾಗಿ ಕರೆದಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಆಕ್ಷೇಪಿಸಿದ್ದಾರೆ.

ಬರಗೂರು ರಾಮಚಂದ್ರಪ್ಪ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೆಂಗಳೂರು ಮಹಾನಗರ ಪೊಲೀಸ್ ಆಯುಕ್ತರಿಗೆ ಇಂದು ದೂರು ಸಲ್ಲಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಭಾರತ ಮತ್ತು ರಾಷ್ಟ್ರಗೀತೆ ಬಗ್ಗೆ ಅಭಿಮಾನ ಇರುವವರು ಇದನ್ನು ಸಹಿಸಿಕೊಂಡು ಸುಮ್ಮನೆ ಕುಳಿತಿರಲು ಸಾಧ್ಯವಿಲ್ಲ ಎಂದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರೂ ಆಗಿದ್ದ ಬರಗೂರು ರಾಮಚಂದ್ರಪ್ಪ ಅವರು ದೊಡ್ಡ ಸಾಹಿತಿಯಾಗಿದ್ದು, ಅಂಥವರು ನಾಡಿಗೆ ಮತ್ತು ದೇಶಕ್ಕೆ ಅವಹೇಳನ ಮಾಡಿದ್ದಾರೆ. ಇದೊಂದು ತಲೆ ತಗ್ಗಿಸಬೇಕಾದ ವಿಚಾರ ಎಂದು ತಿಳಿಸಿದರು. ಸಿದ್ದರಾಮಯ್ಯನವರ ಸರಕಾರ ಇದ್ದಾಗ ಇಂಥ ಅಪಮಾನ ಆಗಿದೆ. ಯಾಕೆ ಅವರು ಕ್ರಮ ಕೈಗೊಂಡಿಲ್ಲ? ಅಥವಾ ಸಿದ್ದರಾಮಯ್ಯನವರು ಹೋಗಲಿ ಬಿಡಿ ಎಂದು ಉದಾಸೀನ ಮಾಡಿದರೇ ಎಂದು ಪ್ರಶ್ನಿಸಿದರು.

ಇವತ್ತು ಬರಗೂರು ರಾಮಚಂದ್ರಪ್ಪ ಅವರ ಈ ಬರಹದ ಬಗ್ಗೆ ಸಿದ್ದರಾಮಯ್ಯ ಏನು ಹೇಳುತ್ತಾರೆ ಎಂದು ಕೇಳಿದರಲ್ಲದೆ, ಪೊಲೀಸ್ ಇಲಾಖೆಯು ರಾಷ್ಟ್ರಧ್ವಜಕ್ಕೆ ಆದ ಅವಮಾನದ ಹಿನ್ನೆಲೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕಾನೂನು ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜೊತೆ ಚರ್ಚಿಸಿ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸ್ ಆಯುಕ್ತರು ತಿಳಿಸಿದ್ದಾಗಿ ಹೇಳಿದರು. ಭರತನಗರಿ ಕಾದಂಬರಿಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ನಾಡಿನ ಕಲೆ, ಸಂಸ್ಕ್ರತಿ , ದೇಶ, ಅಂಬೇಡ್ಕರ್ ಮತ್ತು ಸಾಹಿತ್ಯದ ಬಗ್ಗೆ ಉದ್ದುದ್ದ ಭಾಷಣ ಮಾಡುವ ಬರಗೂರು ರಾಮಚಂದ್ರಪ್ಪ ಅವರು, ಹೀಗೆ ಬರೆದುದಾದರೂ ಹೇಗೆ ಎಂದು ಕೇಳಿದರು. 1983ರಲ್ಲಿ ಈ ಕಾದಂಬರಿ ಬರೆದುದಾಗಿ ಅವರು ಪ್ರಶ್ನೆಗೆ ಉತ್ತರ ನೀಡಿದರು. ಈಗ ಅದು ಗಮನಕ್ಕೆ ಬಂದಿದೆ ಎಂದರು.

ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಬರಗೂರು ರಾಮಚಂದ್ರಪ್ಪ ಎಂಬ ಪುಸ್ತಕವನ್ನು ಎಸ್.ಮಾರುತಿ ಅವರು ಬರೆದಿದ್ದಾರೆ. ಆ ಪುಸ್ತಕ ಗಮನಿಸಿದಾಗ ರಾಷ್ಟ್ರಗೀತೆ, ರಾಷ್ಟ್ರಧ್ವಜದ ಬಗ್ಗೆ ವಿಕೃತಿ ಮೆರೆದಿರುವುದು ಗೊತ್ತಾಗಿದೆ. ಬರಗೂರರಿಗೆ ರಾಷ್ಟ್ರಗೀತೆ ಬಗ್ಗೆ ಇರುವ ವಿಕೃತ ಮನಸ್ಸು ಈಗ ಅರಿವಿಗೆ ಬಂದಿದೆ ಎಂದು ವಿವರಿಸಿದರು.

ಭರತನಗರಿ ಓದಿದರೆ ಯಾರಿಗಾದರೂ ತಲೆ ಕೊಡಬಹುದು. ಪ್ರಧಾನಿಯಾಗಿದ್ದ ವಾಜಪೇಯಿಯವರನ್ನು ಮಜಾಪೇಯಿ ಬಿಹಾರಿ ಎಂದು ಕರೆದು ಅವಮಾನ ಮಾಡಿದ್ದಾರೆ. ಚಂದ್ರಶೇಖರ, ಮೊರಾರ್ಜಿ, ಸಿಂಹಚರಣ್ (ಚರಣ್ ಸಿಂಗ್) ಎಂದು ವಿಕೃತಿಯ ಹೆಸರುಗಳನ್ನು ಬಳಸಿದ್ದಾರೆ. ಓದುವವರ ತಲೆ ಕೆಡಬೇಕೆಂದು ಹೀಗೆ ಮಾಡಿದ್ದಾರಾ? ಅಥವಾ ಅವರು ತಲೆಕೆಟ್ಟು ಬರೆದಿದ್ದಾರಾ ಗೊತ್ತಿಲ್ಲ ಎಂದು ಆಕ್ಷೇಪಿಸಿದರು.

ಮಾರುತಿ ಅವರು 2016ರಲ್ಲಿ ತಮ್ಮ ಪುಸ್ತಕ ಬರೆದಿದ್ದಾರೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ಯೋಗೇಂದ್ರ ಹೊಡಾಘಟ್ಟ, ಚಾಮರಾಜಪೇಟೆ ಕಾನೂನು ಪ್ರಕೋಷ್ಠದ ಮಂಡಲ ಸಹ ಸಂಚಾಲಕ ಹಾಗೂ ದೂರುದಾರ ವಿ.ಎಲ್. ಜಗದೀಶ್ ಈ ಸಂದರ್ಭದಲ್ಲಿ ಇದ್ದರು.

Be the first to comment

Leave a Reply

Your email address will not be published.


*