ಜಿಲ್ಲಾ ಸುದ್ದಿಗಳು
ಶಾಲೆಗಳಲ್ಲಿ ನಡೆಯುತ್ತಿದೆ ಚುನಾವಣೆ, ಮಕ್ಕಳಿಗೆ ಮತದಾನದ ಭಾಗ್ಯ.
ಶಾಲೆಗಳಲ್ಲಿ ವಿದ್ಯಾರ್ಥಿ ನಾಯಕರ ಆಯ್ಕೆ ಮತದಾನದ ಮೂಲಕ ಸಾಗಿದ್ದು ಮಕ್ಕಳಿಗೆ ಚಿಕ್ಕಂದಿನಿಂದಲೇ ಚುನಾವಣಾ ಮಜಲುಗಳನ್ನು ಅರಿಯಲು ನೆರವಾಗಿದೆ.ಈ ಕ್ರಮ ಶ್ಲಾಘನೆಗೆ ಕಾರಣವಾಗಿದೆ.
ಬಾಗಲಕೋಟೆ:ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಸ್ಥೆಯಡಿಯಲ್ಲಿ ನಡೆಯುತ್ತಿರುವ ಇಲಕಲ್ಲ ತಾಲೂಕಿನ ಶ್ರೀ ಗುರು ಮಂಟೇಶ್ವರ ಪ್ರೌಢ ಶಾಲೆಯಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ ಅಡಿಯಲ್ಲಿ ಶಾಲಾ ಸಂಸತ್ ಚುನಾವಣೆ ನಡೆಯಿತು.
ಶಾಲೆ ಆರಂಭವಾಯಿತೆಂದರೆ ಪ್ರತಿ ಶಾಲೆಗಳಲ್ಲಿ ಶಾಲಾ ಸಂಸತ್ ಚುನಾವಣೆಗೆ ತಯಾರಿ ನಡೆಯುತ್ತದೆ.ಆಯಾ ವರ್ಷದ ವಿದ್ಯಾರ್ಥಿ ನಾಯಕನ ಆಯ್ಕೆ ಪ್ರಕ್ರಿಯೆ ಚುನಾವಣೆಯ ಮೂಲಕ ಸಾಗುತ್ತದೆ. ಶಾಲೆಗಳಲ್ಲಿ ಮಕ್ಕಳಿಗೆ ಚುನಾವಣೆಯ ಅರಿವು ಮೂಡಿಸುವ ಪ್ರಯುಕ್ತ ಶಾಲಾ ಸಂಸತ್ ರಚನೆ ನಡೆಸುವಂತೆ ಶಿಕ್ಷ ಣ ಇಲಾಖೆ ಆದೇಶಿಸಿದ್ದು ಮಕ್ಕಳಿಗೆ ದೇಶದ ರಾಜಕೀಯ ವ್ಯವಸ್ಥೆಯನ್ನು ತಿಳಿಯುವಲ್ಲಿ ಸಹಕಾರಿಯಾಗಿದೆ.
ಶಾಲಾ ಸಂಸತ್ ಚುನಾವಣೆ ಚುನಾವಣಾ ಆಯೋಗದ ನೀತಿ ನಿಯಮಗಳನ್ವಯ ನಡೆಯುತ್ತಿದ್ದು ಬಹಳ ವಿಶೇಷವೆನಿಸುತ್ತದೆ. ಚುನಾವಣಾ ದಿನಾಂಕ ಘೋಷಣೆ, ನಾಮಪತ್ರ ಸಲ್ಲಿಕೆಗೆ ಗಡವು, ಹಿಂಪಡೆಯುವಿಕೆಗೆ ಅವಕಾಶ, ಚುನಾವಣಾ ಚಿಹ್ನೆ ನೀಡುವುದು, ಮತ ಪ್ರಚಾರಕ್ಕೆ ಅವಕಾಶ, ಮತದಾನ, ಫಲಿತಾಂಶ ಘೋಷಣೆ ಹೀಗೆ ನಿಯಮಬದ್ಧವಾಗಿ ಚುನಾವಣೆ ನಡೆಸಲಾಗುತ್ತದೆ. ಬಳಿಕ ಮಂತ್ರಿಮಂಡಲ ರಚನೆ ಹಾಗೂ ಖಾತೆ ಹಂಚಿಕೆ, ಜವಾಬ್ದಾರಿ ಹಂಚಿಕೆ ನಡೆಯುತ್ತದೆ.
ಶಾಲೆಯಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಮತದಾನ ಮಾಡಿದ್ದು ಬಹಳ ಖುಷಿ ನೀಡಿತು.ಅಲ್ಲದೇ ಚುನಾವಣೆ ಹೇಗೆ ನಡೆಸುತ್ತಾರೆ ಎಂಬ ಕುತೂಹಲ ದೂರವಾಯಿತು. ಶಾಲೆಯಲ್ಲಿನ ಎಲ್ಲಾ ಮಕ್ಕಳು ಮತದಾನ ಮಾಡಿದೆವು ಎಂದು 9 ತರಗತಿಯ ವಿದ್ಯಾರ್ಥಿ ಚಂದಾಲಿಂಗ ಮಂಡಿ ಅಭಿಪ್ರಾಯ ವ್ಯಕ್ತ ಪಡಿಸಿದನು. ಮುಖ್ಯ ಚುನಾವಣಾ ಅಧಿಕಾರಿಗಳಾಗಿ ಶಾಲೆಯ ಮುಖ್ಯೋಪಾಧಾಯರಾದ ಎಸ್.ಬಿ.ದಾಸರ, ಚುನಾವಣಾ ಅಧಿಕಾರಿಯಾಗಿ ಶಕ್ಷಕರಾದ ಎಸ್.ಬಿ.ಹೆಳವರ,ವೀಕ್ಷಕರಾಗಿ ಎಸ್.ಬಿ. ಯಾವಗಲ್ಲಮಠ,ಅಧ್ಯಕ್ಷಾಧಿಕಾರಿಯಾಗಿ ವಾಯ್.ಎಸ್.ವಾಲಿಕಾರ,ಮತಗಟ್ಟೆ ಅಧಿಕಾರಿಗಳಾಗಿ ಬಿ.ಹೆಚ್.ನಾಲತವಾಡ, ಬಿ.ಎಸ್.ಕಮತರ,ಎಲ್.ಎಸ್.ಬೀಳಗಿ,ಶ್ರೀ ಮತಿ ಪಿ.ಎನ್.ಸಂಗಾನವರ ಹಾಗೂ ಆಯ್.ಎಸ್.ಮಂಡಿ ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.
Be the first to comment