ಫೆರಿಫೆರಲ್ ರಿಂಗ್ ರಸ್ತೆ ನಿರ್ಮಿಸಿದರೆ ಭೂಮಿ ನೀಡಲು ಸಿದ್ಧ : ಇಲ್ಲವಾದಲ್ಲಿ ಯೋಜನೆಯನ್ನೇ ರದ್ದುಗೊಳಿಸುವಂತೆ ಒತ್ತಾಯಿಸಿ ಇದೇ 12 ರಂದು ಬಿಡಿಎ ಮುಂದೆ ಬೃಹತ್ ಪ್ರತಿಭಟನೆಗೆ ರೈತರ ನಿರ್ಧಾರ
ಬೆಂಗಳೂರು, ಜು, 7; ಬೆಂಗಳೂರು ನಗರದ ಮಹತ್ವಾಕಾಂಕ್ಷೆಯ ಫೆರಿಫೆರಲ್ ರಿಂಗ್ ರಸ್ತೆ ಯೋಜನೆಗಾಗಿ 2013ರ ಭೂ-ಸ್ವಾಧೀನ ಮತ್ತು ಪುನರ್ವಸತಿ ಕಾಯ್ದೆಯಡಿ ಜಮೀನು ನೀಡಲು ರೈತರು ಸಿದ್ಧರಿದ್ದೇವೆ. ಆದರೆ ಕಾಲಮಿತಿಯೊಳಗೆ ಯೋಜನೆ ರೂಪಿಸಿ ಪರಿಹಾರ ನೀಡಬೇಕು. ಇಲ್ಲದ್ದಿದ್ದಲ್ಲಿ ಯೋಜನೆಯನ್ನೇ ರದ್ದುಗೊಳಿಸುವಂತೆ ಫೆರಿಫೆರಲ್ ಭೂಸ್ವಾಧೀನ ರೈತರ ಹೋರಾಟ ಸಮಿತಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಯೋಜನೆ ಕಾರ್ಯಗತಗೊಳಿಸಲು ಸಾಧ್ಯವಾಗದಿದ್ದರೆ ಯೋಜನೆಯನ್ನು ರದ್ದು ಮಾಡುವಂತೆ ಇದೇ 12 ರಂದು ಬಿ.ಡಿ.ಎ ಕಛೇರಿ ಮುಂದೆ ಬೃಹತ್ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಬೆಂಗಳೂರಿನ ಅಭಿವೃದ್ದಿ ಮತ್ತು ಸಂಚಾರಿ ದಟ್ಟಣೆ ನಿಯಂತ್ರಣಕ್ಕಾಗಿ ಫೆರಿಪೆರಲ್ ರಿಂಗ್ ರಸ್ತೆ ನಿರ್ಮಿಮಿಸಲು ಕನಿಷ್ಠ 37,500 ಕೋಟಿ ರೂ ಹಣದ ಅವಶ್ಯಕತೆ ಇದೆ. ಆದರೆ ಸರ್ಕಾರಕ್ಕೆ ಇದನ್ನು ಜಾರಿಮಾಡುವ ಇಚ್ಚಾಶಕ್ತಿಯೇ ಇಲ್ಲ ಎಂದು ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಹೋರಾಟ ಸಮಿತಿ ಪ್ರಮುಖರು, ರಾಜ್ಯ ಸರ್ಕಾರ ಹಾಗೂ ಬಿ.ಡಿ.ಎ 2005ರಲ್ಲಿ ಬೆಂಗಳೂರು ಉತ್ತರ ಭಾಗದಲ್ಲಿ 65 ಕಿಲೋ ಮೀಟರ್ ಫೆರಿಫರಲ್ ರಿಂಗ್ ರಸ್ತೆ ನಿರ್ಮಾಣ ಮಾಡಲು 1810 ಎಕರೆ ರೈತರ ಜಮೀನನ್ನು ಭೂಸ್ವಾಧೀನಕ್ಕೆ ಪಡೆಯಲು ಅಂತಿಮ ಅಧಿಸೂಚನೆ ಹೊರಡಿಸಿದೆ. ಇದರಿಂದಾಗಿ ರೈತರು 17 ವರ್ಷಗಳಿಂದ ಸದರಿ ಜಮೀನುಗಳಲ್ಲಿ ಯಾವುದೇ ಅಭಿವೃದ್ದಿ ಕಾರ್ಯ ನಡೆಸಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ನಮ್ಮ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಂತಾಗಿದೆ. ಈ ಸಮಸ್ಯೆಗಳ ಬಗ್ಗೆ ರೈತರು ಅನೇಕ ಬಾರಿ ಹೋರಾಟದ ಮೂಲಕ ಗಮನ ಸೆಳೆದು ಸರ್ಕಾರ ಹಾಗೂ ಬಿ.ಡಿ.ಎ ಗೆ ಮನವಿ ಸಲ್ಲಿಸಿದ್ದೇವೆ. ಆದರೆ ಇದುವರೆವಿಗೆ ರೈತರ ಜಮೀನಿಗೆ ಸೂಕ್ತ ಪರಿಹಾರ ನೀಡುವ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ರೈತರಿಗೆ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಾ ಯೋಜನೆ ಜಾರಿಯನ್ನು ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಇದಲ್ಲದೇ 2016ರಲ್ಲಿ ಬಿ.ಡಿ.ಎ ಆಯುಕ್ತರು, ನೊಂದಣಿ ಮಹಾ ಪರಿವೀಕ್ಷಕರು ಹಾಗೂ
ಮುದ್ರಾಂಕಗಳ ಆಯುಕ್ತರಿಗೆ ಭೂ ಸ್ವಾಧೀನಕ್ಕೆ ಒಳಪಡುವ 67 ಗ್ರಾಮಗಳಲ್ಲಿನ ರೈತರ ಭೂಮಿಗೆ ಮುದ್ರಾಂಕ ಹೆಚ್ಚಿಸಬಾರದು ಎಂದು ಪತ್ರ ಬರೆದಿದ್ದರು. ಯೋಜನೆಗಾಗಿ ಅಧಿಸೂಚನೆ ಹೊರಡಿಸಿರುವ ಸರ್ವೆ ನಂಬರ್ ಗಳ ಮಾರ್ಗಸೂಚಿ ದರವನ್ನು ಹೆಚ್ಚು ಮಾಡದಂತೆ ನೊಂದಣಿ ಮತ್ತು ಮುದ್ರಾಂಕ ಇಲಾಖೆಗೆ ಪತ್ರ ಬರೆದು ರೈತರಿಗೆ ದೊರೆಯಬೇಕಾಗಿದ್ದ ಮಾರುಕಟ್ಟೆ ದರದಿಂದ ವಂಚನೆ ಮಾಡಿದ್ದಾರೆ. ಕಳೆದ ವರ್ಷದ ನವೆಂಬರ್ ನಲ್ಲಿ ಸರ್ಕಾರದ ಉಪ ಮುಖ್ಯ ಕಾರ್ಯದರ್ಶಿಗಳು ಸುಪ್ರಿಂಕೋರ್ಟ್ ಗೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ 2005ರಲ್ಲಿ ಹೊರಡಿಸಿರುವ ಅಧಿಸೂಚನೆಯಂತೆ ಭೂ ಸ್ವಾಧೀನಕ್ಕೆ 15,500 ಕೋಟಿ ಮತ್ತು ಹೆಚ್ಚುವರಿಯಾಗಿ 7000 ಕೋಟಿ ಅವಶ್ಯಕತೆ ಇದೆ ಎಂದು ತಿಳಿಸಿತ್ತು ಎಂದು ಮಾಹಿತಿ ನೀಡಿದರು.
ಅಧಿಸೂಚನೆ ಹೊರಡಿಸಿರುವ 750 ಎಕರೆ ಜಮೀನು ಈಗಾಗಲೇ ಅಭಿವೃದ್ದಿ ಹೊಂದಿರುವ ಪ್ರದೇಶವಾಗಿದ್ದು, ಅಲ್ಲಿ ಬಡಾವಣೆಗಳು, ಮನೆಗಳು, ವಾಣಿಜ್ಯ ಮಳಿಗೆಗಳು ನಿರ್ಮಾಣವಾಗಿವೆ. ಅಲ್ಲಿ ಭೂಮಿಯ ಮೌಲ್ಯ ಹೆಚ್ಚಾಗಿದೆ. ಆದ್ದರಿಂದ ಆ ಜಮೀನುಗಳ ಸ್ವಾಧೀನಕ್ಕೆ ಪರಿಹಾರವಾಗಿ ಕನಿಷ್ಠ 15000 ಕೋಟಿ ರೂ ಆಗಬಹುದು. ಈ ಯೋಜನೆ ಜಾರಿಗೆ ಸರ್ಕಾರಗಳು ಆಸಕ್ತಿ ತೋರುತ್ತಿಲ್ಲ ಎಂದು ಆರೋಪಿಸಿದರು.
Be the first to comment