ಕನಕಪುರ ತಾಹಶೀಲ್ದಾರ್ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿ – ಗಂಭೀರ ಆರೋಪ

638 ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳುವಂತೆ ಆದೇಶಿಸಿ ಕರ್ತವ್ಯ ಲೋಪ ಎಸಗಿದೆ ಕನಕಪುರ ತಾಹಶೀಲ್ದಾರ್ : ನ್ಯಾಯಾಲಯದ ಆದೇಶ ಉಲ್ಲಂಘಿಸಿ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿ – ಗಂಭೀರ ಆರೋಪ


 

ಬೆಂಗಳೂರು, ಜು, 7; ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ತಹಶೀಲ್ದಾರ್ ಹಾಗೂ ತಾಲ್ಲೂಕು ದಂಡಾಧಿಕಾರಿ ವಿಶ್ವನಾಥ್ ಭಾರೀ ಪ್ರಮಾಣದಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಜನ ಸಾಮಾನ್ಯರನ್ನು ವಂಚಿಸುತ್ತಿದ್ದು, 2014 ರಿಂದ ಇತ್ಯರ್ಥವಾಗದೇ ಬಾಕಿ ಉಳಿದಿದ್ದ 638 ಪ್ರಕರಣಗಳನ್ನು ಒಂದೇ ಬಾರಿಗೆ “ ಯಥಾ ಸ್ಥಿತಿ ” ಎಂದು ಮತ್ತು ಮಾನ್ಯ ಸಿವಿಲ್ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಬೇಕೆಂದು ಆದೇಶಿಸಿ ಸಾವಿರಾರು ಜನರಿಗೆ ದ್ರೋಹ ಬಗೆದಿದ್ದಾರೆ ಎಂದು ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಗಂಭೀರ ಆರೋಪ ಮಾಡಿದೆ.

ಈ ರೀತಿಯ ಆದೇಶದಿಂದ ನ್ಯಾಯದ ನಿರೀಕ್ಷೆಯಲ್ಲಿದ್ದ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಬಡ ರೈತರು, ಹಿರಿಯ ನಾಗರೀಕರು ಮತ್ತು ಮಹಿಳೆಯರು ತೀವ್ರ ಬಾಧಿತರಾಗಿದ್ದಾರೆ. ಮೇಲ್ಮನವಿ ಸಲ್ಲಿಸಲು, ಸಿವಿಲ್ ನ್ಯಾಯಾಲಯ ಮೊರೆ ಹೋಗಲು ಬಡ ರೈತರು ಹಣ ಇಲ್ಲದೆ ಪರದಾಡುವಂತಾಗಿದೆ ಎಂದು ದೂರಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಕನಕಪುರ ಘಟಕದ ಅಧ್ಯಕ್ಷ ಕೆ.ಆರ್. ಸುರೇಶ್, ಪೌತಿ ಖಾತೆ ಸೇರಿದಂತೆ ಮತ್ತಿತರ ಕಂದಾಯ ಪ್ರಕರಣಗಳ ವಿಚಾರದಲ್ಲಿ ತಾಹಶೀಲ್ದಾರರ ಜನ ವಿರೋಧಿ ನೀತಿ ಅನುಸರಿಸಿದ್ದಾರೆ. ಪ್ರಕರಣದ ದಾಖಲಾತಿ ಪರಿಶೀಲಿಸದೇ, ವಸ್ತು ಸ್ಥಿತಿ ಅರಿಯದೆ ಇಂತಹ ನಿರ್ಧಾರ ಕೈಗೊಂಡಿದ್ದು, ಕೂಡಲೇ ಈ ಎಲ್ಲಾ ಪ್ರಕರಣಗಳ ವಿಚಾರಣೆ ನಡೆಸಿ ಬಗೆಹರಿಸಬೇಕು. ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳುವುದಾದರೆ ದಂಡಾಧಿಕಾರಿಯಾಗಿ ಇವರು ಜವಾಬ್ದಾರಿ ಏನು ಎಂದು ಪ್ರಶ್ನಿಸಿದರು.

ವಿಶ್ವನಾಥ್ ಅವರು ಕನಕಪುರ ತಾಲ್ಲೂಕಿನಲ್ಲಿ ಸುಮಾರು ಒಂದುವರೆ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಕರ್ತವ್ಯ ಲೋಪಕ್ಕೆ ರಾಜ್ಯದಲ್ಲಿ ಖ್ಯಾತಿ ಪಡೆದಿದ್ದಾರೆ. ಅವರ ಅಕ್ರಮಗಳ ಬಗ್ಗೆ ಕಂದಾಯ ಸಚಿವರು ಮತ್ತಿತರ ಹಿರಿಯ ಅಧಿಕಾರಿಗಳಿಗೆ ಪುರಾವೆ ಸಮೇತ ದೂರು ನೀಡಲಾಗಿದೆ. ಸಾತನೂರು ಹೋಬಳಿ , ತೆಂಗನಾಯಕನಹಳ್ಳಿ ಗ್ರಾಮದ ಸರ್ವೆ ನಂ -106 / 03 ಹಾಗೂ ಕನಕಪುರ ಪಟ್ಟಣದ ಸರ್ಕಾರಿ ಗೋಮಾಳ ಸರ್ವೆ ನಂ 715 ರಲ್ಲಿ ಅಕ್ರಮ ಗಣಿಗಾರಿಕೆ ನಡೆಸಬಾರದು ಎಂದು ಕನಕಪುರ ನ್ಯಾಯಾಲಯದಿಂದ ತಡೆಯಾಜ್ಞೆ ಆದೇಶ ಇದ್ದು, ಇದನ್ನು ಉಲ್ಲಂಘಿಸಿ ಅಕ್ರಮ ಗಣಿಗಾರಿಕೆ ಮಾಡುತ್ತಿರುವವರ ಜೊತೆ ಶಾಮೀಲಾಗಿದ್ದಾರೆ. ತಾಲ್ಲೂಕಿನ ಹಲವೆಡೆ ಚಾಲ್ತಿಯಲ್ಲಿರುವ ಅನೇಕ ಅಕ್ರಮ ಗಣಿಗಾರಿಕೆ ಹಾಗೂ ಕ್ರಷರ್ ಗಳನ್ನು ತಡೆಯಲು ತಾಹಶೀಲ್ದಾರ್ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಕಸಬಾ ಹೋಬಳಿ , ರಾಯಸಂದ್ರ ಗ್ರಾಮದ ಸರ್ವೆ ನಂ : 45 ಮತ್ತು 46 ರಲ್ಲಿ 3 ಎಕರೆ 6 ಗುಂಟೆ ಜಮೀನು ಸರ್ಕಾರಿ ಕೆರೆಯಾಗಿದ್ದು, ಇದನ್ನು ಕಾನೂನು ಬಾಹಿರವಾಗಿ ಶಾಮೀಲಾಗಿ ಖಾಸಗಿ ವ್ಯಕ್ತಿಯ ಹೆಸರಿಗೆ ಖಾತೆ ಮಾಡಿಸಿ ರಾಷ್ಟ್ರೀಯ ಹೆದ್ದಾರಿ ಒತ್ತುವರಿ ಪ್ರಕರಣದಲ್ಲಿ ಪರಿಹಾರ ಹಣ ಪಡೆದುಕೊಳ್ಳಲು ಸಹಕರಿಸಿದ್ದಾರೆ. ಉಳಿಕೆ ಸರ್ಕಾರಿ ಕೆರೆ ಜಾಗದಲ್ಲಿ ಮಳಿಗೆಗಳನ್ನು ನಿರ್ಮಿಸಲು ಕಾರಣರಾಗಿದ್ದಾರೆ. ಈ ಬಗ್ಗೆ ದಾಖಲೆ ಸಮೇತ ದೂರು ನೀಡಿದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೆ.ಆರ್. ಸುರೇಶ್ ಆಪಾದಿಸಿದರು.

Be the first to comment

Leave a Reply

Your email address will not be published.


*