ಜಿಲ್ಲಾಸುದ್ದಿಗಳು
ಭವಿಷ್ಯದ ಭದ್ರ ಬುನಾದಿಗೆ ಶಿಕ್ಷಣವೇ ಅಡಿಪಾಯ. ಮಕ್ಕಳಿಗೆ ಶಿಕ್ಷಣ ಕಲಿಸಿದರೆ ಅವರ ಭವಿಷ್ಯ ಉಜ್ವಲವಾಗುತ್ತದೆ. ಶಿಕ್ಷಣದ ಜೊತೆಗೆ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕಾಗಿ ಬಾಲ್ಯದಿಂದಲೇ ಮಕ್ಕಳಲ್ಲಿ ಪೋಷಕರು ಸ್ವಚ್ಛತೆ ಹಾಗೂ ಪರಿಸರ ಪ್ರಜ್ಞೆಯನ್ನೂ ಮೂಡಿಸಬೇಕಾದ ಅಗತ್ಯವಿದೆ.
ರಾಮನಗೌಡ ಪಾಟೀಲ್ ಯತ್ನಾಳ
ವಿಜಯಪುರ:ಅಲೆಮಾರಿ ಹೆಳವ ಸಮುದಾಯದವರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಯುವ ನಾಯಕ ಹಾಗೂ ನಗರ ಶಾಸಕರ ಪುತ್ರ ರಾಮನಗೌಡ ಪಾಟೀಲ (ಯತ್ನಾಳ) ಕಿವಿಮಾತು ಹೇಳಿದರು.
ನಗರದ ಬೆನಕಟ್ಟಿ ಪಿಯು ಕಾಲೇಜಿನಲ್ಲಿ ರವಿವಾರ ಅಖಿಲ ಕರ್ನಾಟಕ ಹೆಳವ ಸಮಾಜದ ವಿಜಯಪುರ ಜಿಲ್ಲಾ ಘಟಕದಿಂದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ.ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಹೆಳವ ಸಮಾಜಬಾಂಧವರು ನಾವು ಹಿಂದುಳಿದವರು ಎಂಬ ಭಾವನೆ ತಾಳದೆ ಸರಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಹೆಳವ ಸಮಾಜದ ವತಿಯಿಂದ ಹೆಳವ ಸಮಾಜವನ್ನು ಎಸ್.ಟಿ.ಗೆ ಸೇರಿಸಲು ಸರಕಾರದ ಗಮನ ಸೆಳೆಯುವಂತೆ ಕೋರಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಬರೆದ ಮನವಿ ಪತ್ರವನ್ನು ರಾಮನಗೌಡ ಯತ್ನಾಳ ಅವರಿಗೆ ಸಲ್ಲಿಸಲಾಯಿತು. ಈ ಕುರಿತು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ರಾಮನಗೌಡರು, ಹೆಳವ ಸಮಾಜದ ಈ ಬೇಡಿಕೆ ಬಗ್ಗೆ ವಿಧಾನಸಭೆಯಲ್ಲಿ ಧ್ವನಿ ಎತ್ತುವಂತೆ ನಾನು ನನ್ನ ತಂದೆಯವರಿಗೆ ಒತ್ತಾಯಿಸುತ್ತೇನೆ ಎಂದು ಭರವಸೆ ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಶ್ರೀಮತಿ ಮಂಜುಳಾ ಬಬಲೇಶ್ವರ ಮಾತನಾಡಿ, ಇಲಾಖೆಯಿಂದ ದೊರೆಯುವ ವಿವಿಧ ಸೌಲಭ್ಯಗಳ ಕುರಿತು ವಿವರಿಸಿ, ಅವುಗಳ ಪ್ರಯೋಜನ ಪಡೆಯಲು ವಿದ್ಯಾರ್ಥಿಗಳಿಗೆ ತಿಳಿಸಿದರು.
ಅಖಿಲ ಕರ್ನಾಟಕ ಹೆಳವ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಪ್ಪ ಹೆಳವರ ಕೆಲೂರ ಮಾತನಾಡಿ, ಹೆಳವ ಸಮಾಜವನ್ನು ಎಸ್.ಟಿ.ಗೆ ಸೇರ್ಪಡೆ ಮಾಡುವಂತೆ ಆಗ್ರಹಿಸಿ ರಾಜ್ಯಾದ್ಯಂತ ಹೋರಾಟ ನಡೆಯುತ್ತಿದ್ದು, ಈ ಹೋರಾಟಕ್ಕೆ ಹೆಳವ ಸಮಾಜದ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಕಳಕಳಿಯ ಮನವಿ ಮಾಡಿದರು.
ಅತಿಥಿಗಳಾಗಿ ಭಾಗವಹಿಸಿದ್ದ ಪಿಎಸ್ ಐ ಕೀರ್ತಿ ಗವಾರ ಹಾಗೂ ಬೆನಕಟ್ಟಿ ಪಿಯು ಕಾಲೇಜಿನ ಪ್ರಾಚಾರ್ಯರು ಮಾತನಾಡಿ, ಪ್ರತಿಭಾ ಪುರಸ್ಕಾರ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಹೆಳವ ಸಮಾಜದ ಜಿಲ್ಲಾಧ್ಯಕ್ಷ ಬಾಬು ಹೆಳವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೆಳವ ಸಮಾಜದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಇನ್ನೂ ಹೆಚ್ಚಿನ ಸಾಧನೆ ಮಾಡಿ ಸಮಾಜದಲ್ಲಿ ಮುಂದೆ ಬರಬೇಕೆಂದು ಹಾರೈಸಿದರು.ಮಾವಿನಬಾವಿಯ ಶ್ರೀ ಬಸವರಾಜ ಗುರೂಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಮಾರಂಭದಲ್ಲಿ ಹೆಳವ ಸಮಾಜದ ಮೂವತ್ತು ಜನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಪ್ರೋತ್ಸಾಹಿಸಲಾಯಿತು.ಇದೇ ಸಂದರ್ಭದಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ ಶಿಕ್ಷಕ ಮಹಾಂತೇಶ ಎಸ್.ಹೆಳವರ(ಇಟಗಿ), ಹಾಗೂ ಚಿಕ್ಕಬೇವನೂರ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಶ್ರೀಮತಿ ಜಯಶ್ರೀ ವೆಂಕಟೇಶ ಭೈರಾಮಡಗಿ ದಂಪತಿಯನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.ಹೆಳವ ಸಮಾಜದ ರಾಜ್ಯ ಸಮಿತಿ ನಿರ್ದೇಶಕ ಶರಣಪ್ಪ ಹೆಳವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಹೆಳವರ, ಉಪಾಧ್ಯಕ್ಷರಾದ ಭೀಮಣ್ಣ ಭೈರಾಮಡಗಿ,ಸಿದ್ದಣ್ಣ ಹೆಳವರ,ಸಾಬು ಹೆಳವರ, ಸಹಕಾರ್ಯದರ್ಶಿ ಭೀಮಾಶಂಕರ ಹೆಳವರ, ಸಂಘಟನಾ ಕಾರ್ಯದರ್ಶಿ ಶಿವಾನಂದ ಹೆಳವರ, ಖಜಾಂಚಿ ದತ್ತು ಹೆಳವರ ಸೇರಿದಂತೆ ಎಲ್ಲ ತಾಲೂಕಾ ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.ಹೆಳವ ಸಮಾಜದ ಜಿಲ್ಲಾ ಸಂಚಾಲಕ ದೇವೇಂದ್ರ ಹೆಳವರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಸಮಿತಿ ನಿರ್ದೇಶಕರಾದ ಸಂಗಮೇಶ ಹೆಳವರ ಕಾರ್ಯಕ್ರಮ ನಿರೂಪಿಸಿದರು.
ಶಿವಶರಣ ಹೆಳವರ ಸ್ವಾಗತಿಸಿ,ವಂದಿಸಿದರು.
Be the first to comment