ಜಿಲ್ಲಾ ಸುದ್ದಿಗಳು
ಭಟ್ಕಳ
ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಅರ್ಥಪೂರ್ಣ ಕಾರ್ಯವನ್ನು ಸಾಹಿತ್ಯ ಪರಿಷತ್ತು ಮಾಡುತ್ತಿರುವುದು ಶ್ಲಾಘನೀಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ ಹೇಳಿದರು.ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಅರ್ಥಪೂರ್ಣ ಮತ್ತು ಔಚಿತ್ಯ ಪೂರ್ಣ ಕಾರ್ಯವನ್ನು ಸಾಹಿತ್ಯ ಪರಿಷತ್ತು ಮಾಡುತ್ತಿರುವುದು ಶ್ಲಾಘನೀಯ. ನಮ್ಮ ಇಲಾಖೆ ಮಾಡಬೇಕಾದ ಕಾರ್ಯವನ್ನು ಸಾಹಿತ್ಯ ಪರಿಷತ್ತು ಮಾಡುತ್ತಿವುದು ಅಭಿನಂದನಾರ್ಹ ಎಂದು ಭಟ್ಕಳದ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ ನುಡಿದರು. ಉ.ಕ.ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಶಿರಾಲಿಯ ಜನತಾ ವಿದ್ಯಾಲಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯಕ್ಕೆ ಪ್ರತಿಶತ ನೂರು ಅಂಕ ಗಳಿಸಿದ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ಇದರಿಂದ ಪ್ರೇರಣೆಗೊಂಡು ಮುಂದಿನ ಶೈಕ್ಷಣಿಕ ಹಂತಗಳಲ್ಲೂ ನಿರಂತರ ಸಾಧನೆ ಮಾಡಬೇಕು. ಮಕ್ಕಳ ಆಸಕ್ತಿಯಿರುವ ಕ್ಷೇತ್ರದಲ್ಲಿ ಶಿಕ್ಷಣವನ್ನು ಪಡೆದು ಯಶಸ್ಸು ಗಳಿಸಲು ಪಾಲಕರು ಪ್ರೋತ್ಸಾಹಿಸಬೇಕೆಂದು ನುಡಿದು ಕನ್ನಡ ಭಾಷಾ ವಿಷಯದಲ್ಲಿ ಪ್ರತಿಶತ ನೂರು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಜಾರ್ಜ ಫರ್ನಾಂಡೀಸ ಮಾತನಾಡಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕನ್ನಡ ಭಾಷಾ ವಿಷಯದಲ್ಲಿ ಸಾಧನೆ ಮಾಡಿರುವ ಮಕ್ಕಳೊಂದಿಗೆ ಪಾಲಕರೂ ಹಾಜರಾಗಿರುವ ಕುರಿತು ಹರ್ಷ ವ್ಯಕ್ತಪಡಿಸಿದರಲ್ಲದೇ ಪಾಲಕರು ಮಕ್ಕಳ ಶೈಕ್ಷಣಿಕ ಸಾಧನೆಯ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದ ಸಾಧನೆಗೂ ಪ್ರೇರಣೆ ನೀಡ ಮಕ್ಕಳ ಸರ್ವಾಂಗೀಣ ಪ್ರಗತಿಗೂ ಪ್ರೋತ್ಸಾಹ ನೀಡಬೇಕೆಂದು ನುಡಿದರು.ಪ್ರಶಂಸನಾ ಪತ್ರ ವಿತರಿಸಿದ ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಮೋಹನ ನಾಯ್ಕ ಮಾತನಾಡಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಮಯ ವ್ಯರ್ಥ ಮಾಡದೇ ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕೆಂದು ನುಡಿದು ಸಾಹಿತ್ಯ ಪರಿಷತ್ತು ಜಿಲ್ಲೆ ಮತ್ತು ತಾಲೂಕಿನಲ್ಲಿ ನಿರಂತರವಾಗಿ ಸಂದರ್ಭೋಚಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಅದರ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಪ್ರಾಥಮಿಕ ಶಾಲಾ ಶೀಕ್ಷಕ ಸಂಘದ ಅಧ್ಯಕ್ಷ ಉಲ್ಲಾಸ ನಾಯ್ಕ, ಪ್ರೌಢಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಕುಮಾರ ನಾಯ್ಕ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ವೇದಿಕೆಯಲ್ಲಿ ಮಾಧ್ಯಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಶಬ್ಬೀರ ದಫೇದಾರ ಉಪಸ್ಥಿತರಿದ್ದರು. ಕನ್ನಡ ಭಾಷಾ ವಿಷಯದಲ್ಲಿ ಪ್ರತಿಶತ ನೂರು ಅಂಕಗಳನ್ನು ಗಳಿಸಿದ 122 ವಿದ್ಯಾರ್ಥಿಗಲನ್ನು ಸಾಹಿತ್ಯ ಪರಿಷತ್ ವತಿಯಿಂದ ಪುರಸ್ಕರಿಸಲಾಯಿತು.ದಾನಿಗಳಾದ ಶಿಕ್ಷಕ ವಿಲ್ಸನ ಹಾಗೂ ವೆಂಕಟೇಶ ನಾಯ್ಕ ಚಿತ್ರಾಪುರ ಇವರನ್ನು ಗೌರವಿಸಲಾಯಿತು.ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪಿ.ಆರ್.ನಾಯ್ಕ ಆಶಯನುಡಿಗಳನ್ನಾಡಿದರೆ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಸಾಪ ಗೌರವ ಕೋಶಾಧ್ಯಕ್ಷ ಶ್ರೀಧರ ಶೇಟ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸಾಮಾಜಿಕ, ಕ್ರೀಡೆ, ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತಿದ್ದ ಅಕಾಲದಲ್ಲಿ ಅಗಲಿದ ಕಿಶೋರ ನಾಯ್ಕ ಚಿತ್ರಾಪುರ ಅವರಿಗೆ ಆರಂಭದಲ್ಲಿ ಮೌನಾಚರಣೆಯ ಮೂಲಕ ಗೌರವ ಸಲ್ಲಿಸಲಾಯಿತು. ಶ್ರೀವಲಿ ಪ್ರೌಢಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಕಸಾಪ ಗೌರವ ಕಾರ್ಯದರ್ಶಿ ನಾರಾಯಣ ನಾಯ್ಕ ನಿರೂಪಿಸಿದರೆ ಕಸಾಪ ಸದಸ್ಯ ಪೆಟ್ರಿಕ್ ಟೆಲ್ಲಿಸ್ ವಂದಿಸಿದರು. ಕಾರ್ಯಕ್ರಮದಲ್ಲಿ ಸಾಹಿತಿ ನಾರಾಯಣ ಯಾಜಿ, ಕಸಾಪ ಸದಸ್ಯರಾದ ಪಾಂಡುರoಗ ಅಳ್ವೆಗದ್ದೆ, ಸಂತೋಷ ಆಚಾರ್ಯ, ಕೃಷ್ಣ ಮೊಗೇರ, ಪೂರ್ಣಿಮಾ ಕರ್ಕಿಕರ್, ಗಣೇಶ ಯಾಜಿ, ಖಾಸಗಿ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಉಮೇಶ ನಾಯ್ಕ, ಸಾಧಕ ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.
Be the first to comment