ಜಿಲ್ಲಾ ಸುದ್ದಿಗಳು
ಬಾಗಲಕೋಟೆ: ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ 2022ನೇ ಸಾಲಿಗೆ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ತಾಲೂಕಾವಾರು ಮುಖ್ಯ ಬೆಳೆಗಳನ್ನು ಗ್ರಾಮ ಪಂಚಾಯತಿ ಮಟ್ಟಕ್ಕೆ ಹಾಗೂ ಉಳಿದ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ಜಾರಿಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜಿಲ್ಲೆಯಲ್ಲಿ ವಿವಿಧ ಬೆಳಗಳಿಗೆ ವಿಮೆ ಒಳಪಡಿಸುವ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಸಮರ್ಪಕ ಅನುಷ್ಠಾನ ಕುರಿತಂತೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮುಸುಕಿನ ಜೋಳ, ಸಜ್ಜೆ, ಹೆಸರು, ಸೂರ್ಯಕಾಂತಿ ಬೆಳಗಳನ್ನು ಗ್ರಾಮ ಪಂಚಾಯತಿ ಮಟ್ಟಕ್ಕೆ, ಮುಸುಕಿನ ಜೋಳ, ಜೋಳ, ಸಜ್ಜೆ, ಉದ್ದು, ತೊಗರಿ, ಹುರುಳಿ, ಸೋಯಾ ಅವರೆ, ಸೂರ್ಯಕಾಂತಿ, ಎಳ್ಳು, ನೆಲಗಡಲೆ, ಈರುಳ್ಳಿ, ಕೆಂಪು ಮೆಣಸಿನಕಾಯಿ ಅರಿಶಿಣ ಬೆಳೆಗಳನ್ನು ಹೋಬಳಿ ಮಟ್ಟಕ್ಕೆ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಮುಸುಕಿನ ಜೋಳ (ನೀ), ಸಜ್ಜೆ (ಮ.ಆ), ಸೂರ್ಯಕಾಂತಿ (ಮ.ಆ) ಬೆಳೆಗಳಿಗೆ ವಿಮಾ ಕಂತು ತುಂಬಲು ಜುಲೈ 31 ಕೊನೆಯದಿನವಾದರೆ, ಹೆಸರು (ಮ.ಆ) ಬೆಳೆಗೆ ವಿಮೆ ಪಾವತಿಗೆ ಜುಲೈ 15 ಕೊನೆಯ ದಿನವಾಗಿದೆ. ಹೋಬಳಿ ಮಟ್ಟಕ್ಕೆ ಮುಸುಕಿನ ಜೋಳ (ಮ.ಆ), ಜೋಳ (ಮ.ಆ), ಸಜ್ಜೆ (ನೀರಾವರಿ), ತೊಗರಿ (ನೀ, ಮ.ಆ), ಹುರುಳಿ, ಎಳ್ಳು (ಮ.ಆ), ನೆಲಗಡಲೆ (ನೀ, ಮ.ಆ), ಕೆಂಪು ಮೆಣಸಿಣಕಾಯಿ (ಮ.ಆ) ಹಾಗೂ ಅರಿಶಿನ ಬೆಳೆಗೆ ವಿಮೆ ಕಂತು ಪಾವತಿಸಲು ಜುಲೈ 31 ಕೊನೆಯದಿನವಾಗಿದೆ. ಜೋಳ (ನೀ), ಉದ್ದು (ಮ.ಆ), ಸೋಯಾ ಅವರೆ (ನೀ) ಬೆಳಗಳಿಗೆ ಜುಲೈ 15 ಮತ್ತು ಸೂರ್ಯಕಾಂತಿ (ನೀ), ಈರುಳ್ಳಿ (ನೀ, ಮ.ಆ), ಕೆಂಪು ಮೆಣಸಿನಕಾಯಿ (ಮ.ಆ) ಬೆಳಗಳಿಗೆ ವಿಮೆ ಕಂತು ಪಾವತಿಗೆ ಆಗಸ್ಟ 16 ಕೊನೆಯ ದಿನವಾಗಿರುತ್ತದೆ ಎಂದು ತಿಳಿಸಿದರು.
ಬೆಳೆಸಾಲ ಪಡೆದ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಚೆಪಡದೆ ಇದ್ದಲ್ಲಿ ಈ ಕುರಿತು ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ 7 ದಿನಗಳ ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಿದಲ್ಲಿ ಅಂತಹ ರೈತರನ್ನು ಬೆಳೆವಿಮೆ ಯೋಜನೆಯಿಂದ ಕೈಬಿಡಲಾಗುತ್ತದೆ. ಜಿಲ್ಲೆಗೆ ಬಜಾಜ್ ಅಲಿಯಾಂಜ್ ಕಂಪನಿಯನ್ನು ವಿಮೆ ಕಂಪನಿಯಾಗಿ ನಿಯೋಜಿಸಿದ್ದು, ವಿಮೆ ಕುರಿತು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ವಿಮಾ ಸಂಸ್ಥೆಯ ಪ್ರತಿನಿಧಿ, ಬ್ಯಾಂಕ್ ಸಿಬ್ಬಂದಿಗಳನ್ನು ಸಂಪರ್ಕಿಸಲು ತಿಳಿಸಿದರು. ಇದೇ ಸಂದರ್ಭದಲ್ಲಿ ವಿಮೆ ಕಂತು ಪಾವತಿ ಕುರಿತಾದ ಬುಕ್‍ಲೆಟ್ ಬಿಡುಗಡೆ ಮಾಡಿದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕಿ ಡಾ.ಚೇತನಾ ಪಾಟೀಲ, ತೋಟಗಾರಿಕೆ ಉಪನಿರ್ದೇಶಕ ರಾಹುಲ್ ಕುಮಾರ ಬಾವಿದಡ್ಡಿ, ನಬಾರ್ಡನ ಯಮುನಾ ಪೈ, ಜಿಲ್ಲಾ ಅಂಕಿ ಸಂಖ್ಯಾಧಿಕಾರಿ ಗಂಗಾಧರ ದಿವಟರ, ಪಶು ಇಲಾಖೆಯ ಸಹಾಯಕ ನಿರ್ದೇಶಕ ಪದರಾ, ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಯ ಸಹಾಯಕ ನಿರ್ದೇಶಕ ಪತ್ತಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ವಿಮಾ ಕಂಪನಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.
ವಿಮಾ ಕಂಪನಿ ಪ್ರತಿನಿಧಿಗಳ ವಿವರ
ವಿವಿಧ ಬೆಳೆಗಳ ವಿಮೆಗೆ ಅಳವಡಿಸುವ ಕುರಿತಂತೆ ಬಜಾಜ್ ಅಲಿಯಾಂಜ್ ಕಂಪನಿಯ ಪ್ರತಿನಿಧಿಗಳಾದ ಜಿಲ್ಲಾ ಪ್ರತನಿಧಿ ಸಂದೇಶ (7337661955), ಗುಳೇದಗುಡ್ಡ ತಾಲೂಕಿಗೆ ಮಲ್ಲಿಕಾರ್ಜುನ ಬ್ಯಾಳಿ (9008134063), ಬಾದಾಮಿಗೆ ಸಂತೋಷ ಕಮತಗಿ (8151074930), ಬಾಗಲಕೋಟೆಗೆ ಬಸವರಾಜ ಧೂಪದ (9036620814), ಬೀಳಗಿಗೆ ಅನೀಲ ರವಿಕಿರಣ (6360923667), ಹುನಗುಂದಕ್ಕೆ ನಿರಂಜನ ಕೋಟೂರ (8618685017), ಜಮಖಂಡಿಗೆ ರಾಜಶೇಖರ ಗಾಣಿಗೇರ (7829316745), ಮುಧೋಳಕ್ಕೆ ಮಹೇಶ ಮಣ್ಣನವರ (7846060071), ಇಲಕಲ್ಲಗೆ ಮಹಾಂತೇಶ ತೆಗ್ಗನಮಠ (9901259435), ರಬಕವಿ-ಬನಹಟ್ಟಿ ತಾಲೂಕಿಗೆ ಮಹಾಂತೇಶ ನಾಗಠಾಣ (8971544829) ಇವರನ್ನು ಸಂಪರ್ಕಿಸಬಹುದಾಗಿದೆ.
Be the first to comment