ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಪ್ರಸಕ್ತ ಸಾಲಿಗೆ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆಗೆ ಕೃಷಿ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಕಾಂರ್ಯದರ್ಶಿಗಳಾದ ಶಿವಯೋಗಿ ಕಳದ ಮಂಗಳವಾರ ಚಾಲನೆ ನೀಡಿದರು.
ಜಿಲ್ಲೆಯ ಬಾದಾಮಿ ತಾಲೂಕಿನ ಕುಳಗೇರಿ ಹೋಬಳಿಯಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬಿತ್ತನೆ ಬೀಜ ವಿತರಣೆಗೆ ಚಾಲನೆಯನ್ನು ನೀಡಿದರು. ಬಾದಾಮಿ ತಾಲೂಕಿನ ವಿವಿಧ ರೈತ ಸಂಪರ್ಕ ಕೇಂದ್ರದಲ್ಲಿ ಹೆಸರು ೪೬ ಕ್ವಿಂಟಲ್ ಹಾಗೂ ತೊಗರಿ ೧೬.೨೦ ಕ್ವಿಂಟಲ್ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿರುವುದಾಗಿ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲರಿಂದ ಮಾಹಿತಿ ಪಡೆದುಕೊಂಡರು.
ಪ್ರಸಕ್ತ ಸಾಲಿನಲ್ಲಿ ಕೆ-ಕಿಸಾನ ಮುಖಾಂತರ ಬೀಜ ವಿತರಣೆಯನ್ನು ಮಾಡುತ್ತಿರುವುದನ್ನು ವೀಕ್ಷಿಸಿದರು. ಪ್ರಸ್ತುತ ರೈತರಿಗೆ ಅವಶ್ಯವಿರುವ ಬೀಜ ಮತ್ತು ರಸಗೊಬ್ಬರದ ಸಮರ್ಪಕ ವಿತರಣೆ ಬಗ್ಗೆ ಕ್ರಮ ಕೈಗೊಳ್ಳಲು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಜಂಟಿ ಕೃಷಿ ನಿರ್ದೇಶಕರು ಜಿಲ್ಲೆಯಲ್ಲಿ ಒಟ್ಟು ತೊಗರಿ ೭೪.೨೫ ಕ್ವಿಂ, ಹೆಸರು ೩೪೫.೨೦ ಕ್ವಿಂಟಲ್ ಹಾಗೂ ಸೊಯಾ ಅವರೆ ೧೦೪೯.೯೦ ಕ್ವಿಂ, ದಾಸ್ತಾನು ಇದ್ದು ರೈತರಿಗೆ ವಿತರಣೆ ಮಾಡುತ್ತಿರುವುದಾಗಿ ತಿಳಿಸಿದರು.
ಮುಂಗಾರು ಹಂಗಾಮಿಗೆ ಅವಶ್ಯವಿರುವ ಉದ್ದು, ಮೆಕ್ಕೆ ಜೋಳ, ಸಜ್ಜೆ ಹಾಗೂ ಸೂರ್ಯಕಾಂತಿ ಬೆಳೆಗಳಿಗೆ ಈಗಾಗಲೆ ಬೇಡಿಕೆಯನ್ನು ನೀಡಿದ್ದು, ಬಿತ್ತನೆ ಬೀಜಗಳ ಸರಬರಾಜು ಪಡೆದು ಮುಂದಿನ ದಿನಗಳಲ್ಲಿ ರೈತರಿಗೆ ವಿತರಿಸುವುದಾಗಿ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಕೃಷಿ ಸಹಾಯಕ ನಿರ್ದೇಶಕರಾದ ಅಶೋಲ ತಿರಕನ್ನವರ, ಎಸ್.ಬಿ.ಹಳ್ಳೊಳ್ಳಿ, ಬಿ.ಜಿ.ಮಾಳೇದ, ಎಂ.ಆರ್.ನಾಗೂರ ಹಾಗೂ ಕೃಷಿ ಅಧಿಕಾರಿ ಬಿ.ಎನ್.ಬುದ್ನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
Be the first to comment