ಜಿಲ್ಲಾ ಸುದ್ದಿಗಳು
ಬಾಗಲಕೋಟೆ : ಏಪ್ರೀಲ್ 21 ರಂದು ಆಚರಿಸಲ್ಪಡುವ ರಾಜ್ಯ ಸರಕಾರಿ ನೌಕರರ ದಿನಾಚರಣೆ ಕಾರ್ಯಕ್ರಮದಲ್ಲಿ 2021 ಹಾಗೂ 2022ನೇ ಸಾಲಿನ ಒಟ್ಟು 20 ಜನ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ರಾಜ್ಯ ಸರಕಾರಿ ನೌಕರರ ದಿನಾಚರಣೆ ಕಾರ್ಯಕ್ರಮ ಆಚರಿಸುವ ಕುರಿತಂತೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸರಕಾರದ ನಿರ್ದೇಶನದಂತೆ ಸರ್ವೋತ್ತಮ ಸೇವಾ ಪ್ರಶಸ್ತಿಗಾಗಿ ಪ್ರಸ್ತಾವನೆಗಳನ್ನು ಪಡೆಯಲು ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದ್ದು, 2021ನೇ ಸಾಲಿನ ಪ್ರಶಸ್ತಿಗೆ 11 ಹಾಗೂ 2022ನೇ ಸಾಲಿನ ಪ್ರಶಸ್ತಿಗೆ 9 ಪ್ರಸ್ತಾವನೆಗಳು ಸ್ವೀಕೃತಗೊಂಡಿದ್ದು, ಸರಕಾರದ ಮಾನದಂಡಗಳ ಆಧಾರದ ಮೇಲೆ ಜಿಲ್ಲಾ ಮೌಲ್ಯ ಮಾಪನ ಸಮಿತಿಯಲ್ಲಿಟ್ಟು ಆಯ್ಕೆ ಮಾಡಲಾಗಿದೆ ಎಂದರು.
ಎ ವೃಂದದ ಇಬ್ಬರು ಅಧಿಕಾರಿಗಳನ್ನು, ಬಿ ವೃಂದದಲ್ಲಿ ಇಬ್ಬರು ಅಧಿಕಾರಿಗಳು, ಸಿ ವೃಂದದಲ್ಲಿ ಐವರು ನೌಕರರನ್ನು ಹಾಗೂ ಡಿ ವೃಂದದಲ್ಲಿ ಒಬ್ಬ ನೌಕರರು ಸೇರಿ ಎರಡು ವರ್ಷದ ಒಟ್ಟು 20 ನೌಕರರನ್ನು ಆಯ್ಕೆ ಮಾಡಲಾಗಿದೆ. ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಆಯೋಜಿಸಲು ತಿರ್ಮಾನಿಸಲಾಗಿದ್ದು, ಸೇವಾ ನಿಯಮ ಹಾಗೂ ಆರ್.ಸಿ.ಐ ವಿಷಯಗಳ ಕುರಿತು ಮಾತನಾಡಲು ಬೆಳಗಾವಿಯ ಜಾಗೃತ ಕೋಶದ ಉಪ ಕೃಷಿ ನಿರ್ದೇಶಕ ವೆಂಕಟರಮಣಪ್ಪ ಅವರನ್ನು ಉಪನ್ಯಾಸಕರಾಗಿ ಕರೆಸಲು ತಿರ್ಮಾನಿಸಲಾಯಿತು.
ಏಪ್ರೀಲ್ 21 ರಂದು ಬೆಳಿಗ್ಗೆ 10ಕ್ಕೆ ಜಿಲ್ಲಾ ಸರಕಾರಿ ನೌಕರರ ಭವನದಿಂದ ಜಿಲ್ಲಾಡಳಿತ ಭವನದವರೆಗೆ ವಿವಿಧ ವಿವಿಧ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು. ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆಯ್ಕೆಯಾಗಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ. ಕಾರ್ಯಕ್ರಮದ ದಿನದಂದು ಪೂರ್ವಾಹ್ನ ಅರ್ಧ ದಿನದ ರಜೆಯನ್ನು ಘೋಷಿಸಿ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಸಭೆಯಲ್ಲಿ ಕೋರಲಾಯಿತು.
ಸಭೆಯಲ್ಲಿ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ರಾಜ್ಯ ಪರಿಷತ್ ಸದಸ್ಯ ಎಸ್.ವಿ.ಸತ್ಯರೆಡ್ಡಿ, ಕೃಷಿ ಇಲಾಖೆಯ ಉಪನಿರ್ದೇಶಕ ಕೊಂಗವಾಡ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಎನ್.ಹೇಮಾವತಿ, ನಗರಸಭೆ ಪೌರಾಯುಕ್ತ ಮುನಿಶಾಮಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Be the first to comment