ರಾಜ್ಯ ಸುದ್ದಿಗಳು
ದೇವನಹಳ್ಳಿ
ಗ್ರಾಮ ಪಂಚಾಯಿತಿಯಲ್ಲಿನ ವರ್ಗ-2ರಲ್ಲಿ ಬರುವಂತಹ ಅನುದಾನದಲ್ಲಿ ಅಂಗನವಾಡಿ ಕೇಂದ್ರಗಳಿಗೆ ಸಲಕರಣಿಗಳನ್ನು ನೀಡುತ್ತಿರುವುದು ಮಕ್ಕಳಿಗೆ ಹೆಚ್ಚಿನ ಸಹಕಾರಿಯಾಗಿದೆ ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ತಿಳಿಸಿದರು. ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಗ್ರಾಪಂ ಆವರಣದಲ್ಲಿ ಗ್ರಾಪಂ ವತಿಯಿಂದ ವರ್ಗ-2ರ ಅನುದಾನದಲ್ಲಿ ಅಂಗನವಾಡಿ ಕೇಂದ್ರಗಳಿಗೆ ಟೇಬಲ್ ಮತ್ತು ಚೇರ್‌ಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವರ್ಗ-2ರಲ್ಲಿ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಸಮ್ಮುಕದಲ್ಲಿ ಒಂದು ನಿರ್ಣಯವನ್ನು ಮಾಡಿ, ಪಂಚಾಯಿತಿ ವ್ಯಾಪ್ತಿಯ 11 ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರಿಗೆ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಎಲ್ಲರನ್ನೂ ಒಗ್ಗೂಡಿಸಿ ಆಯಾ ಅಂಗನವಾಡಿ ಕೇಂದ್ರಗಳಿಗೆ ಟೇಬಲ್ ಮತ್ತು ಚೇರ್‌ಗಳನ್ನು ವಿತರಿಸುವುದರ ಮೂಲಕ ವಿದ್ಯೆ ಪರವಿದ್ದೇವೆ ಎಂದು ವಿಶ್ವನಾಥಪುರ ಗ್ರಾಪಂ ಆಡಳಿತ ಮಂಡಳಿಯ ಈ ಕಾರ್‍ಯ ಶ್ಲಾಘನೀಯವಾದದ್ದು, ಇಂತಹ ಕಾರ್ಯಕ್ರಮಗಳು ತಾಲೂಕಿನ ಪ್ರತಿ ಗ್ರಾಪಂಗಳಲ್ಲಿ ವಿಸ್ತರಣೆಯಾಗಬೇಕು. ವರ್ಗ-2ರಲ್ಲಿ ಬರುವ ಅನುದಾನವನ್ನು ಅಂಗನವಾಡಿ ಕೇಂದ್ರಗಳಿಗೆ ನೀಡುವ ಕೆಲಸ ಮಾಡಬೇಕು ಮತ್ತು ಇಂತಹ ಸೇವಾ ಕಾರ್ಯಗಳು ಆಗುವಂತಾಗಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಯನ್ನು ಸಹ ಕೊಡುತ್ತೇನೆ ಎಂದು ಹೇಳಿದರು.
ಈಗಾಗಲೇ ಕೆಡಿಪಿ ಸಭೆಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಶಾಶ್ವತ ನೆಲೆಗಾಗಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಸ್ವಂತ ನೆಲೆ ಇಲ್ಲದ ಅಂಗನವಾಡಿ ಕೇಂದ್ರಗಳನ್ನು ಗುರ್ತಿಸಿ ಶಾಶ್ವತ ಅಂಗನವಾಡಿ ಕೇಂದ್ರಗಳ ಸ್ಥಾಪನೆಗೆ ಒತ್ತುಕೊಡಲು ಸೂಚಿಸಲಾಗಿದೆ. ಈಗಾಗಲೇ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ 1 ಸಾವಿರ ಕೆಪಿಎಸ್ ಇಂಗ್ಲೀಷ್ ಶಾಲೆಗಳು ಪ್ರಾರಂಭಿಸಲಾಗಿತ್ತು. ಇವತ್ತಿನ ದಿನಮಾನಗಳಲ್ಲಿ ಬಹಳಷ್ಟು ಮಂದಿ ಶುಲ್ಕ ಭರಿಸಲು ಸಾಕಷ್ಟು ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಖಾಸಗಿ ಶಾಲೆಗಳಲ್ಲಿ 50 ಸಾವಿರದಿಂದ 2 ಲಕ್ಷದವರೆಗೆ ಡೊನೇಷನ್ ಕಟ್ಟಬೇಕಾಗುತ್ತದೆ. ಇಂತಹ ಶಾಲೆಗಳಲ್ಲಿ ಬಡ ಮಕ್ಕಳು ಹೇಗೆ ವಿದ್ಯಾಭ್ಯಾಸ ನಡೆಸುತ್ತಾರೆಂಬುವುದನ್ನು ಅರಿತು ಕೆಪಿಎಸ್ ಶಾಲೆಗಳನ್ನು ಮಾಡಲಾಗಿದೆ. ರಾಜ್ಯದ ಕೆಲವು ಸರಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿವೆ. ಅಂತಹ ಶಾಲೆಗಳಲ್ಲಿ ಆಂಗ್ಲ ಶಿಕ್ಷಣ ನೀಡುವ ಕೆಲಸ ಮಾಡಬೇಕಿದೆ. ಸರಕಾರ ಬಜೆಟ್‌ನಲ್ಲಿ ಕೆಪಿಸಿ ಶಾಲೆಗಳ ಜೊತೆಜೊತೆಯಲ್ಲಿ ಇಂತಹ ಶಾಲೆಗಳನ್ನು ಗುರ್ತಿಸಿ ಅಭಿವೃದ್ಧಿಪಡಿಸಿ ಸುಮಾರು ೫ಸಾವಿರ ಕೆಪಿಎಸ್ ಶಾಲೆಗಳನ್ನು ಪ್ರಾರಂಭಿಸಬೇಕು ಎಂದು ಒತ್ತಾಯಿಸುತ್ತೇನೆ ಎಂದರು.
ಗ್ರಾಪಂ ಉಪಾಧ್ಯಕ್ಷ ವಿನಯ್‌ಕುಮಾರ್ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ ೧೧ ಅಂಗನವಾಡಿ ಕೇಂದ್ರಗಳ 233 ಮಕ್ಕಳಿಗೆ ಚೇರ್ ಮತ್ತು ಟೇಬಲ್ ಸಲಕರಣೆಗಳನ್ನು ಪಂಚಾಯಿತಿ ಸರ್ವ ಸದಸ್ಯರ ತೀರ್ಮಾನದಂತೆ ಯೋಜನೆ ರೂಪಿಸಿಕೊಂಡು ವರ್ಗ-2ರ 2ಲಕ್ಷ ರೂ.ಗಳ ಅನುದಾನದಲ್ಲಿ ಸಾಮಾನ್ಯ ಸಭೆಯಲ್ಲಿ ಮಂಜೂರು ಮಾಡಿಕೊಂಡು ಹಂಚಿಕೆ ಮಾಡಲಾಗಿದೆ. ಪ್ರತಿ ಅಂಗನವಾಡಿಯಲ್ಲಿನ ಮಕ್ಕಳ ಸಂಖ್ಯೆಯ ಆಧಾರದಲ್ಲಿ ಸಲಕರಣೆಗಳನ್ನು ವಿತರಿಸುವ ಕಾರ್ಯ ಮಾಡಲಾಗಿದೆ. ಅಂಗನವಾಡಿ ಕೇಂದ್ರಗಳತ್ತ ಮಕ್ಕಳ ಗಮನಸೆಳೆಯಲು ಇದೊಂದು ಉತ್ತಮ ಯೋಜನೆಯಾಗಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಮಂಗಳ ನಾರಾಯಣಸ್ವಾಮಿ ಮಾತನಾಡಿ, ಮಕ್ಕಳು ದೇವರ ಸಮಾನರು, ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗದಂತೆ ಅವರ ಬೂನಾದಿಯಿಂದಲೇ ಅವರ ವಿದ್ಯಾಭ್ಯಾಸಕ್ಕೆ ಬೇಕಾಗುವ ಸಲಕರಣೆಗಳನ್ನು ನೀಡಿದರೆ, ಮುಂದಿನ ದಿನಗಳಲ್ಲಿ ಉತ್ತಮ ಪ್ರಜೆಯಾಗಲು ಸಹಕಾರಿಯಾಗುತ್ತದೆ. ಅದರಂತೆ ನಮ್ಮ ಪಂಚಾಯಿತಿಯ ಎಲ್ಲಾ ಸದಸ್ಯರನ್ನು ಒಳಗೊಂಡು ಇಂತಹ ಕಾರ್ಯವನ್ನು ಮಾಡುತ್ತಿರುವುದು ಸಂತಸ ತಂದಿದೆ.
ಈ ವೇಳೆಯಲ್ಲಿ ಗ್ರಾಪಂ ಸದಸ್ಯರಾದ ವೆಂಕಟಮ್ಮ, ಭವ್ಯ, ಮುನೇಗೌಡ, ನವೀನ್, ಆಂಜಿನಮ್ಮ, ನಾಗಮ್ಮ, ದಿವ್ಯಭಾರತಿ, ನಾಗರಾಜ, ರವಿ, ಆಂಜಿನಮ್ಮ, ಕಲ್ಪನ, ನರಸಿಂಹರಾಜು, ಲಕ್ಷ್ಮೀ ನರಸಮ್ಮ, ಶ್ರೀನಿವಾಸ್, ವೆಂಕಟಾಚಲಯ್ಯ, ಬಿ.ಸಿ.ಸುಂದರೇಶ್, ಮಂಜುಳ, ಮಂಜುನಾಥ್, ಮುಖಂಡರಾದ ಮನಗೊಂಡನಹಳ್ಳಿ ಜಗದೀಶ್, ಚನ್ನಕೇಶವ, ಚನ್ನಕೃಷ್ಣಪ್ಪ, ಹರೀಶ್‌ಗೌಡ, ಮನೋಜ್‌ಗೌಡ, ವಸಂತ್‌ಕುಮಾರ್, ನಾರಾಯಣಸ್ವಾಮಿ, ಪಿಡಿಒ ಗಂಗರಾಜು, ಕಾರ್‍ಯದರ್ಶಿ ಪದ್ಮಮ್ಮ, ಅಂಗನವಾಡಿ ಸಹಾಯಕಿಯರು, ಗ್ರಾಪಂ ಸಿಬ್ಬಂದಿ ಇತರರು ಇದ್ದರು.
Be the first to comment