ರಾಜ್ಯ ಸುದ್ದಿಗಳು
ದೇವನಹಳ್ಳಿ
ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ವತಿಯಿಂದ ಊರ್ಜದೇವಿ ಯೋಜನೆಯಡಿಯಲ್ಲಿ ದೇಶದ 1 ಲಕ್ಷ ಯುವತಿಯರಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸ್ವಯಂ ಏಜೆನ್ಸಿ ಪ್ರಾರಂಭಿಸಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಎಸ್‌ಎಲ್‌ಎನ್‌ಎಸ್ ಭಾರತ್ ಗ್ಯಾಸ್ ಏಜೆನ್ಸಿಯ ಮಾಲಿಕ ವೇಣುಗೋಪಾಲ್ ತಿಳಿಸಿದರು.
ದೇವನಹಳ್ಳಿ ಪಟ್ಟಣದ ಪ್ರಶಾಂತ ನಗರದಲ್ಲಿರುವ ಎಸ್‌ಎಲ್‌ಎನ್‌ಎಸ್ ಭಾರತ್ ಗ್ಯಾಸ್ ಏಜೆನ್ಸಿಯ ಕಚೇರಿಯಲ್ಲಿ ಮಾತನಾಡಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಒಟ್ಟು 30 ಗ್ರಾಪಂಯ ಹಳ್ಳಿಗಳ ಯುವತಿಯರಿಗೆ ಸ್ವ-ಉದ್ಯೋಗ ಕಲ್ಪಿಸಲು ಸಂಸ್ಥೆ ಅನುಕೂಲ ಮಾಡಿಕೊಟ್ಟಿದ್ದು, ದೇವನಹಳ್ಳಿ ತಾಲೂಕಿನ 8 ಗ್ರಾಪಂಗಳಾದ ವೆಂಕಟಗಿರಿಕೋಟೆ, ಗಂಗವಾರ, ಅಣ್ಣೇಶ್ವರ, ಬೂದಿಗೆರೆ, ಬೆಟ್ಟಕೋಟೆ, ಬಿದಲೂರು, ಯಲಿಯೂರು ಮತ್ತು ಕೋರಮಂಗಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳಲ್ಲಿನ ಯುವತಿಯವರಿಗೆ ಅರ್ಜಿ ಆಹ್ವಾನಿಸಲಾಗಿದೆ. ಸುಮಾರು 20 ರಿಂದ 30 ವರ್ಷದೊಳಗಿನ ಯುವತಿಯರಿಗೆ ಮೊದಲ ಆದ್ಯತೆ ನೀಡಲಾಗಿದ್ದು, ಈಗಾಗಲೇ ಫೆ.9 ರಿಂದ ಫೆ.20ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದರು.
ಅರ್ಜಿ ಸಲ್ಲಿಸಲು ಇಚ್ಚಿಸುವವರು ಸಾಮಾನ್ಯ ಕಂಪ್ಯೂಟರ್ ಜ್ಞಾನ, ದ್ವಿತೀಯ ಪಿಯುಸಿ ಅಂಕಪಟ್ಟಿ, ಆಧಾರ್‌ಕಾರ್ಡು ಮತ್ತು ಸ್ವ-ವಿವರದ ಪ್ರತಿಗಳೊಂದಿಗೆ ಖುದ್ದಾಗಿ ಎಸ್‌ಎಲ್‌ಎನ್‌ಎಸ್ ಭಾರತ್ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಅಲ್ಲಿಯೇ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಿದವರಲ್ಲಿ ಅರ್ಹ ಅಭ್ಯರ್ಥಿಗಳನ್ನು ಬಿಪಿಸಿಎಲ್ ಸಂಸ್ಥೆಯಿಂದ ಅಧಿಕಾರಿಗಳು ನೇರ ಸಂದರ್ಶನ ನಡೆಸಿ ಅರ್ಹರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಏಜೆನ್ಸಿಯ ಕಚೇರಿ ಸಿಬ್ಬಂದಿಯನ್ನು ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.
Be the first to comment