ದೇಶದ ಸುದ್ದಿಗಳು
ಕಲಬುರಗಿ: ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದಲ್ಲಿ ಕೋಲಿ ಸಮಾಜವು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿದ್ದು, ಶೀಘ್ರ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೇಲೆ ಒತ್ತಡ ಹಾಕಿ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ, ಗುಜರಾತ್‌ನ ಕುಡಿಯುವ ನೀರು ಸರಬರಾಜು, ಪಶುಸಂಗೋಪನಾ ಮತ್ತು ಗ್ರಾಮೀಣ ವಸತಿ ಖಾತೆ ಸಚಿವ ಕುನಾವರ್ ಜೀ ಭಾಯಿ ಭಾವಲಿಯಾ ಭರವಸೆ ನೀಡಿದರು.
ರಾಷ್ಟ್ರೀಯ ಕಾರ್ಯಕಾರಣಿ ಸಭೆ ಕಲಬುರಗಿ
ಇಲ್ಲಿನ ರಾಮಮಂದಿರ ಸಮೀಪದ ಜಿಡಿಎ ಲೇಔಟ್‌ನಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕಾರ್ಯಕಾರಿಣಿ ಹಾಗೂ ಜನಜಾಗೃತಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಧಾನಿ ಮೋದಿ, ಅಮಿತ್ ಶಾ ಅವರನ್ನು ಭೇಟಿ ಆಗಲು ಕಾಲಾವಕಾಶ ಕೇಳುತ್ತೇನೆ. ಶೀಘ್ರದಲ್ಲಿ ದೆಹಲಿಗೆ ಹೋಗಿ ಎಸ್‌ಟಿ ಸೇರಿಸಬೇಕು ಎಂದು ಒತ್ತಾಯಿಸುವುದಾಗಿ ಪುನರುಚ್ಚಿಸಿದರು.
ಹಾಸ್ಟೇಲ್ ನಿರ್ಮಾಣಕ್ಕೆ ಚಿಂತನೆ
ದೇಶದ ಇತರೆ ರಾಜ್ಯಗಳಲ್ಲಿ ಭವ್ಯವಾದ ಕೋಲಿ ಭವನವಿಲ್ಲ, ಇಲ್ಲಿ ನಿರ್ಮಾಣವಾದ ಕೋಲಿ ಭವನ ಸುಸಜ್ಜಿತ, ಭವ್ಯವಾಗಿದೆ ಎಂದು ಶ್ಲಾಘಿಸಿದರು. ರಾಜಸ್ಥಾನದ ಎಂಪಿ ಬಾಹುದ್ದುರಸಿಂಗ್ ಕೋಲಿ, ಉತ್ತರ ಪ್ರದೇಶದ ಎಂಪಿ ಘನಶಾಮ್ ಅನುರಾಗಿ, ಮಹಾರಾಷ್ಟ್ರದ ಸಿದ್ದಾರ್ಥ ಕೋಲಿ, ಬಿಜೆಪಿ ಮುಖಂಡ ಶರಣಪ್ಪ ತಳವಾರ, ಕಾಂಗ್ರೆಸ್ ಮುಖಂಡ ರಾಜಗೋಪಾಲರೆಡ್ಡಿ ಮೊದಲಾದವರು ಮಾತನಾಡಿದರು.
ಶಾಸಕ ಬಿ. ನಾರಾಯಣರಾವ್ ಮಾತನಾಡಿ, ಕೋಲಿ ಸಮಾಜದ ಎಸ್‌ಟಿ ಸೇರಿಸುವ ಚೆಂಡು ಕೇಂದ್ರ ಸರ್ಕಾರದ ಅಂಗಳದಲ್ಲಿದೆ. ಒಂದು ವೇಳೆ ಶೀಘ್ರವಾಗಿ ಎಸ್‌ಟಿಗೆ ಸೇರಿಸಿದರೆ ಕಲಬುರಗಿಯಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರನ್ನು ಕರೆಯಿಸಿ ಸನ್ಮಾನಿಸಲಾಗುವುದು ಎಂದು ವಾಗ್ದಾನ ನೀಡಿದರು. ಗುಜರಾತ್ ರಾಜ್ಯದಲ್ಲಿ ಮೋದಿ, ಶಾ ಅವರ ಗೌರವ ಕಾಯ್ದು, ಅಲ್ಲಿಯ ಶಾಸಕರು ಕೋಲಿ ಸಮಾಜದ ಮರ್ಯಾದೆ ಉಳಿಸಬೇಕು ಎಂದರು.
ಸಾನಿಧ್ಯವಹಿಸಿದ ಹಾವೇರಿಯ ನರಿಶಿಪುರ ಪೀಠದ ಪೀಠಾಧಿಪತಿ ಶಾಂತಭೀಷ್ಮ ಸ್ವಾಮೀಜಿ, ತೋನಸನಹಳ್ಳಿಯ ಮಲ್ಲಣ್ಣಪ್ಪ ಮುತ್ಯಾ, ಭಾರದ್ವಾಜ ಮಹಾರಾಜರು ಆಶೀವರ್ಚನ ನೀಡಿದರು.
ವೇದಿಕೆ ಮೇಲೆ ವಿಧಾನಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಸಂಘಟನಾ ಕಾರ್ಯದರ್ಶಿ ಶಿವಲಿಂಗಪ್ಪ ಕಿನ್ನೂರ್, ದತ್ತಾತ್ರೇಯ ರೆಡ್ಡಿ ಮುದಿರಾಜ್, ಸರ್ಕಾರಿ ಕೋಲಿ ನೌಕರರ ಸಂಘದ ರಾಜ್ಯಾಧ್ಯಕ್ಷ ಬಾಬುರಾವ ಜಮಾದಾರ್ ಬಾದನಹಳ್ಳಿ, ನಿಕಟ ಪೂರ್ವ ಅಧ್ಯಕ್ಷ ಸತ್ಯನಾರಾಯಣ ಪವಾರ್, ಸಂಸದರಾದ ರಂಜಿತಾ ಕೋಲಿ, ವಿರೇಂದ್ರ ಕಶ್ಯಪ, ಡಾ. ಭಾರತಿಬಹನ್, ಭಾನುಪ್ರತಾಪ ವರ್ಮಾ, ಕಿಶೋರಬಾಯಿ, ಅನಿಲಭಾಯಿ, ಮುಖೇಶ ಕೋರಿ ಇಂದಿರಾ ಶಕ್ತಿ, ಮೌಲಾಲಿ ಅನಪುರ ಸೇರಿದಂತೆ ಚುನಾಯಿತ ಜನಪ್ರತಿನಿಧಿಗಳು ಹಾಜರಿದ್ದರು.
ಮುಖಂಡರಾದ ಶಿವಶರಣಪ್ಪ ಕೋಬಾಳ, ಆರ್. ಎಂ. ನಾಟೀಕಾರ್, ವಸಂತರಾವ್ ನರಿಬೋಳ, ಜಯಪ್ರಕಾಶ ಕಮಕನೂರ, ಅಭಿಯಂತರ ಮಾಣಿಕಪ್ಪ ಕನಕಟ್ಟಿ, ಶೋಭಾ ಬಾಣಿ, ನಿಂಗಪ್ಪ ಹುಳಗೋಳಕರ್, ಉಮೇಶ ಮುದ್ನಾಳ, ಸಂಜು ಡಿಗ್ಗಿ, ಸಿದ್ದು ಬಾನರ್, ಸಂಘಟಕರಾದ ವಿಜಯಕುಮಾರ ಹದಗಲ್, ರಮೇಶ ನಾಟೀಕಾರ್, ರೇವಣಸಿದ್ದಪ್ಪ, ಶ್ರೀನಾಥ ಪಿಲ್ಲಿ, ಶ್ರೀನಿವಾಸ ಘಾಲಿ, ಅರ್ಜುನ ಜಮಾದಾರ್, ಹಣಮಂತ ಬಂಕಲಗಾ, ಕಲ್ಲಪ್ಪ ಪ್ಯಾಟಿ, ಮಲ್ಲಿಕಾರ್ಜುನ ಧೂಳಬಾ, ಅರ್ಜುನ ಸಿಬಾ, ಹುಲಿಕಂಠರಾವ್ ಹೇರೂರ್, ಶರಣು ಕೋಲಿ, ರಾಜೇಂದ್ರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಕೋಲಿ ಸಮಾಜದ ಬಾಂಧವರು ಭಾಗವಹಿಸಿದ್ದರು. ಕೋಲಿ ಸಮಾಜದ ರಾಜ್ಯಾಧ್ಯಕ್ಷ ತಿಪ್ಪಣ್ಣ ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ್ ಹೇರೂರ್ ನಿರೂಪಿಸಿದರು. ಬಾಬುರಾವ ಕೋಬಾಳ ಪ್ರಾರ್ಥನೆ ಗೀತೆ ಹಾಡಿದರು.
ನಿಮ್ಮ ಆರ್ಥಿಕ ಸಹಾಯ ದಿಂದ ಮಾತ್ರ ಮಾಧ್ಯಮವನ್ನು ಪಾರದರ್ಶಕವಾಗಿ ಮುನ್ನಡೆಸಲು ಸಾಧ್ಯ
Be the first to comment