ಕಾರವಾರ:
ಭಟ್ಕಳ ತಾಲೂಕಿನ ಮಾವಳ್ಳಿ-1 ಗ್ರಾ.ಪಂ ಮಾಹಿತಿ ಹಕ್ಕು ಅಧಿಕಾರಿಯಾದ ಗ್ರಾಪಂ ಕಾರ್ಯದರ್ಶಿ ತಾವು ಮಾಡಿದ ತಪ್ಪನ್ನು ಮುಚ್ಚಿ ಹಾಕಲು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲ ಆದೇಶ ಪ್ರತಿಯನ್ನೇ ತಿದ್ದುಪಡಿ ಮಾಡಿ ಮಾಹಿತಿ ಹಕ್ಕಿನಡಿ ಕೇಳಿದ್ದ ಅರ್ಜಿದಾರರಿಗೆ ವಂಚಿಸಿದ್ದು, ಈ ಕುರಿತು ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತಿ ಸಿಇಒಗೆ ಮನವಿ ಸಲ್ಲಿಸಿ, ಆಗ್ರಹಿಸಿದ್ದಾರೆ.
2020ನೇ ಸಾಲಿನಲ್ಲಿ ಆಡಳಿತಾಧಿಕಾರಿಗಳ ಅವಧಿಯಲ್ಲಿ ಮಾವಳ್ಳಿ-1 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ತಾಲೂಕು ಪಂಚಾಯತಿ ಮಳಿಗೆಗಳಿಗೆ ಬಳಸಿದ ಅನುದಾನದ ವಿವರ ಮತ್ತು ಕ್ರಿಯಾ ಯೋಜನೆಯ ನಕಲು ಪ್ರತಿ ಮತ್ತು ತಾಲೂಕು ಪಂಚಾಯತ ಕಟ್ಟಡಕ್ಕೆ ಮಾವಳ್ಳಿ-1 ಗ್ರಾಮ ಪಂಚಾಯತ ಅನುದಾನ ವಿನಿಯೋಗಿಸಲು ಅನುಮತಿ ನೀಡಿದ ಅಧಿಕಾರಿಗಳ ಲಿಖಿತ ದಾಖಲೆಯ ನಕಲು ಪ್ರತಿಯನ್ನು ಮಾಹಿತಿ ಅಧಿಕಾರಿಯ ಸಹಿಯೊಂದಿಗೆ ದೃಢೀಕರಿಸಿ ನೀಡುವಂತೆ ಮಾವಳ್ಳಿ-1 ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವಾಸಿ ಜಟ್ಟಪ್ಪ ನಾಯ್ಕ ಎನ್ನುವವರು ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಸಲ್ಲಿಸಿದ್ದರು.
ಇದಕ್ಕೆ ಉತ್ತರವಾಗಿ, ಮಾವಳ್ಳಿ-1 ಗ್ರಾಮ ಪಂಚಾಯತದಿಂದ ತಾಲೂಕು ಪಂಚಾಯತ ಮಳಿಗೆಗೆ ಬಳಸಿದ ಅನುದಾನದ ಮೊತ್ತ 6.49 ಲಕ್ಷ ರೂ.ಗಳಾಗಿದೆಯೆಂದು ಇದರ ಕ್ರಿಯಾಯೋಜನೆ ನಕಲು ಪ್ರತಿಯನ್ನು ಪ್ರಭಾರ ಕಾರ್ಯದರ್ಶಿಯವರು ನೀಡಿ, ತಾಲೂಕು ಪಂಚಾಯತಿ ಕಟ್ಟಡಕ್ಕೆ ಅನುದಾನ ವಿನಿಯೋಗಿಸಲು ಅನುಮತಿ ನೀಡಿದ ಮೇಲಾಧಿಕಾರಿಗಳ ಲಿಖಿತ ದಾಖಲೆಯ ನಕಲು ಪ್ರತಿಯನ್ನು ಕಾರ್ಯದರ್ಶಿಯವರು ರಜೆಯಲ್ಲಿರುವುದರಿಂದ ಹದಿನೈದು ದಿನದೊಳಗೆ ತಮಗೆ ನೀಡಲಾಗುವುದು ಎಂದು ಲಿಖಿತ ಹೇಳಿಕೆಯ ಪ್ರತಿಯನ್ನು ನೀಡಿದ್ದರು. 15 ದಿನ ಕಳೆದ ನಂತರ ಪಂಚಾಯತಿಗೆ ತೆರಳಿ ಕೇಳಿದರೂ ಕಾರ್ಯದರ್ಶಿ ರಜೆಯಲ್ಲೇ ಇದ್ದಾರೆಂದು ಮೌಖಿಕವಾಗಿ ಹೇಳುತ್ತಿದ್ದರು.
ಇದಾದ ಕೆಲವು ದಿನಗಳ ಬಳಿಕ ಕರ್ತವ್ಯಕ್ಕೆ ಹಾಜರಾದ ಕಾರ್ಯದರ್ಶಿ ಮೇಲಾಧಿಕಾರಿಗಳ ಆದೇಶ ಪ್ರತಿಯನ್ನು ನೀಡಿದ್ದು, ಇದರಲ್ಲಿ ಮಾವಳ್ಳಿ-1 ಎಂದು ಮೂರು ಕಡೆ ತಿದ್ದಲಾಗಿದೆ. ಈ ಬಗ್ಗೆ ಅನುಮಾನಗೊಂಡು ಜಿಲ್ಲಾ ಪಂಚಾಯತಿಗೆ ಮಾಹಿತಿ ಹಕ್ಕಿನಡಿ ಕೇಳಿದಾಗ ಮಾವಳ್ಳಿ-2ಕ್ಕೆ ನೀಡಿದ ಆದೇಶ ಪ್ರತಿಯನ್ನು ತಿದ್ದಿ, ಮಾವಳ್ಳಿ-1 ಎಂದು ನಮೂದಿಸಿ ಕಾರ್ಯದರ್ಶಿಯು ಅರ್ಜಿದಾರರಿಗೆ ನೀಡಿದ್ದು, ಇದು ಗಂಭೀರ ಅಪರಾಧವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮೇಲಾಧಿಕಾರಿಗಳ ಆದೇಶ ಇಲ್ಲದೇ ತಾಲೂಕು ಪಂಚಾಯತಿ ಕಟ್ಟಡಕ್ಕೆ ಗ್ರಾಮ ಪಂಚಾಯತಿ ಅನುದಾನ ಬಳಸಿ ಅಧಿಕಾರ ದುರುಪಯೋಗ ಪಡಿಸಿಕೊಂಡ ಆಡಳಿತಾಧಿಕಾರಿ ಹಾಗೂ ಪಿಡಿಓಗಳ ಮೇಲೂ ಇಲಾಖೆಯ ನಿಯಮಾನುಸಾರ ಕ್ರಮ ಜರುಗಿಸಬೇಕು ಎಂದು ಅರ್ಜಿದಾರ ಸತೀಶ ನಾಯ್ಕ, ಸ್ಥಳೀಯರಾದ ವಸಂತ ನಾಯ್ಕ, ಉದಯ ನಾಯ್ಕ, ಜಟ್ಟಪ್ಪ ನಾಯ್ಕ, ಕೃಷ್ಣ ನಾಯ್ಕ ಆಗ್ರಹಿಸಿದ್ದಾರೆ.
ಮಾಧವ ನಾಯಕ (ಜನಪರ ವೇದಿಕೆ ಅಧ್ಯಕ್ಷ) :
ಗ್ರಾಮ ಪಂಚಾಯತಿ ಆಸ್ತಿ ಅಲ್ಲದ ತಾಲೂಕು ಪಂಚಾಯತಿ ಮಳಿಗೆಗೆ ಗ್ರಾಮ ಪಂಚಾಯತಿ ಅನುದಾನ ಬಳಸಿದ್ದು ಸರಿಯಾದ ಕ್ರಮವಲ್ಲ. ತಮ್ಮ ತಪ್ಪನ್ನು ಸಮರ್ಥಿಸಿಕೊಳ್ಳಲು ಮಾವಳ್ಳಿ-1 ಗ್ರಾಪಂ ಕಾರ್ಯದರ್ಶಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಆದೇಶವನ್ನು ತಿದ್ದುಪಡಿ ಮಾಡಿ ಮಾಹಿತಿ ಹಕ್ಕಿಗೆ ನೀಡಿರುವುದು ಅಪರಾಧವಾಗಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು.
Be the first to comment