ಜಿಲ್ಲೆಯಾದ್ಯಂತ ಗ್ರಾಮ-1 ಸೇವೆ ಅನುಷ್ಠಾನ : ಡಿಸಿ ರಾಜೇಂದ್ರ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗ್ರಾಮ-1 ಸೇವೆಗಳನ್ನು ಫೆಬ್ರವರಿ ಅಂತ್ಯಕ್ಕೆ ಜಿಲ್ಲೆಯಾದ್ಯಂತ ಪ್ರಾರಂಭಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಗ್ರಾಮ-1 ಯೋಜನೆಯ ಸೇವೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗ್ರಾಮೀಣ ಭಾಗದ ಜನರು ವಿವಿಧ ಸರಕಾರಿ ಸೇವೆಗಳನ್ನು ಪಡೆಯಲು ತಹಶೀಲ್ದಾರರ ಕಚೇರಿಗೆ ಅಲೆದಾಡುವದನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಈ ಯೋಜನೆಯನ್ನು ಕರ್ನಾಟಕ-1 ಮಾದರಿಯಲ್ಲಿ ಜಾರಿಗೆ ತಂದಿದ್ದು, ಈ ಯೋಜನೆಯಿಂದ ತಮ್ಮ ತಮ್ಮ ಗ್ರಾಮಗಳಿಂದಲೇ 750 ಕ್ಕೂ ಹೆಚ್ಚು ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದರು.

ಗ್ರಾಮ-1 ಯೋಜನೆಯುವ ಕಂದಾಯ ಇಲಾಖೆಗೆ ಸಂಬಂಧಿಸಿದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಹಣಿ, ವಿವಿಧ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕ್ವಾರಿ ಯೋಜನೆ ಅನುಮೋದನೆ, ಆರೋಗ್ಯ ಇಲಾಖೆಯ ಆಯುಷ್ಮಾನ ಕಾರ್ಡ, ಕಾರ್ಮಿಕ ಇಲಾಖೆ, ಕೃಷಿ, ತೋಟಗಾರಿಕೆ, ಸಹಕಾರ, ರೇಷ್ಮೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಒಟ್ಟು 750ಕ್ಕೂ ಹೆಚ್ಚು ಆನ್‍ಲೈನ್ ಮೂಲಕ ನೀಡುವ ಸೇವೆಗಳನ್ನು ತಮ್ಮ ತಮ್ಮ ಗ್ರಾಮಗಳಿಂದಲೆ ಪಡೆಯಬಹುದಾಗಿದೆ ಎಂದರು.

ಸಕಾಲ, ಸೇವಾ ಸಿಂಧು ಯೋಜನೆಗಳ ಸೇವೆ, ಸಾರ್ವಜನಿಕರ ಕುಂದುಕೊರತೆಗಳ ಸ್ವೀಕಾರ ಮತ್ತು ಮಾಹಿತಿ ಹಕ್ಕು ಕಾಯ್ದೆಯಡಿ ಆನ್‍ಲೈನ್ ಪೋರ್ಟಲ್‍ನಲ್ಲಿ ಅರ್ಜಿಗಳ ಸಲ್ಲಿಕೆಗೆ ಅವಕಾಶ ಕಲ್ಪಿಸಿಸಲಾಗಿದೆ. ಈ ಯೋಜನೆ ಫೆಬ್ರವರಿ ಅಂತ್ಯಕ್ಕೆ ಜಿಲ್ಲೆಯಾದ್ಯಂತ ಪ್ರಾರಂಭಿಸಲು ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳುವಂತೆ ಆಯಾ ತಾಲೂಕಿನ ತಹಶೀಲ್ದಾರರಿಗೆ ಸೂಚಿಸಿದರು. ಈ ಯೋಜನೆ ಅನುಷ್ಠಾನದ ಮೇಲ್ವಿಚಾರಣೆಗೆ ಜಿಲ್ಲಾ ಮತ್ತು ತಾಲೂಕಾ ಮಟ್ಟದಲ್ಲಿ ಕಾರ್ಯಪಡೆಯನ್ನು ಸಹ ರಚಿಸಲಾಗಿದೆ. ಜಿಲ್ಲಾ ಮಟ್ಟದ ಕಾರ್ಯಪಡೆಗೆ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿದ್ದು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಹ ಅಧ್ಯಕ್ಷರಾಗಿರುತ್ತಾರೆ. ತಾಲೂಕಾ ಕಾರ್ಯಪಡೆಯಲ್ಲಿ ತಹಶೀಲ್ದಾರ ಅಧ್ಯಕ್ಷರಾಗಿದ್ದು, ಕಾರ್ಯನಿರ್ವಾಹಕ ಅಧಿಕಾರಿಗಳು ಸಹ ಅಧ್ಯಕ್ಷರಾಗಿರುತ್ತಾರೆ ಎಂದು ತಿಳಿಸಿದರು.

ಜಿಲ್ಲಾ ಮತ್ತು ತಾಲೂಕಾ ಮಟ್ಟದ ಕಾರ್ಯಪಡೆಗೆ ಮೇಲ್ವಿಚಾರಣೆಯ ಜವಾಬ್ದಾರಿ ವಹಿಸಿದ್ದು, ಗ್ರಾಮ-1 ಸೇವಾ ಕೇಂದ್ರದಿಂದ ಬಂದ ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ವಿಲೆಗೆ ಕ್ರಮವಹಿಸಬೇಕು. ಇದರ ಜೊತೆಗೆ ಗ್ರಾಮ-1 ಕೇಂದ್ರಗಳ ತಪಾಸಣೆ ನಡೆಸುವ ಮೂಲಕ ಸೇವೆಗಳ ವಿಲೇವಾರಿ ಖಚಿತಪಡಿಸಿಕೊಳ್ಳಲಾಗುತ್ತದೆ. ಗ್ರಾಮೀಣ ಭಾಗದ ಜನರಿಗೆ ಒಂದೇ ಸೂರಿನಡಿ ಹಲವು ಸಮರ್ಪಕ ಸೇವೆಗಳನ್ನು ಒದಗಿಸಲು ಎಲ್ಲ ರೀತಿಯ ಕ್ರಮಕೈಗೊಳ್ಳಲು ಸೂಚಿಸಿದರು.

ಸಭೆಯಲ್ಲಿ ಜಿ.ಪಂ ಸಿಇಓ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಮಖಂಡಿ ಉಪವಿಭಾಗಾಧಿಕಾರಿ ಸಿದ್ದು ಹುಲ್ಲೊಳ್ಳಿ, ಕೃಷಿ ಇಲಾಖೆಯ ಉಪನಿರ್ದೇಶಕ ಕೊಂಗವಾಡ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ವಾ.ಕ.ರಾ.ರ.ಸಾ.ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ ಅಮ್ಮನವರ, ಜಿಲ್ಲಾ ಕಾರ್ಮಿಕ ಅಧಿಕಾರಿ ಬಿ.ಆರ್.ಜಾದವ ಸೇರಿದಂತೆ ಆಯಾ ತಾಲೂಕಿನ ತಹಶೀಲ್ದಾರರು ಹಾಗೂ ಗ್ರಾಮ-1 ಯೋಜನೆಯ ಜಿಲ್ಲಾ ವ್ಯವಸ್ಥಾಪಕ ಸ್ವಾಗತ ಗುಡಗುಡಿ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*