ಕನ್ನಡ ಸಾಹಿತ್ಯ ಜನರ ಮನ ಮುಟ್ಟಲಿ: ಸಚ್ಚಿದಾನಂದ ಮಹಾಸ್ವಾಮಿಗಳು

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು 

ಬೆಳಗಾವಿ

ಕನ್ನಡ ಸಾಹಿತ್ಯ ಜನರ ಮನ ಮುಟ್ಟಲಿ ಎಂದು ರಾಮದುರ್ಗ ತಾಲೂಕಿನ ಕಟಕೋಳದ ಕುಮಾರೇಶ್ವರ ವಿರಕ್ತಮಠದ ಶ್ರೀ ಮ.ನಿ.ಪ್ರ.ಸ್ವ ಸಚ್ಚಿದಾನಂದ ಮಹಾಸ್ವಾಮಿಗಳು ಹೇಳಿದರು. ಕಟಕೋಳ ಗ್ರಾಮದ ಸಾಹಿತ್ಯಾಸಕ್ತರ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಪುನರಾಯ್ಕೆಯಾದ ಶ್ರೀಮತಿ ಮಂಗಳಾ ಶ್ರೀಶೈಲ ಮೆಟಗುಡ್ ಅವರಿಗೆ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನಿಂದ ವಿನೂತನ ಕಾರ್ಯಮಗಳನ್ನು ಹಮ್ಮಿಕೊಂಡು ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸಲಿ ಎಂದು ಅವರು ಅಭಿಪ್ರಾಯಪಟ್ಟರು.

CHETAN KENDULI

ಸನ್ಮಾನ ಸ್ವೀಕರಿಸಿ ಮಾತನಾಡಿದ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಂಗಲಾ ಶ್ರೀಶೈಲ ಮೆಟಗುಡ್ಡ ಕನ್ನಡ ಮನಸ್ಸುಗಳು ಕನ್ನಡದ ಸೇವೆಗಾಗಿ ಮತ್ತೊಮ್ಮೆ ಅವಕಾಶ ಮಾಡಿಕೊಟ್ಟಿದ್ದು ತನು ಮನ ಧನದಿಂದ ಕನ್ನಡದ ಸೇವೆ ಸಲ್ಲಿಸುತ್ತೇನೆ ಎಂದು ಹೇಳಿದರು. 

ಸಹಸ್ರಮಾನ ರತ್ನ ಪ್ರಶಸ್ತಿ ವಿಜೇತರಾದ ಟಿ.ಪಿ ಮನೋಳಿ ಮಾತನಾಡಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಬೆಳಗಾವಿ ಜಿಲ್ಲೆಯ ಕೊಡುಗೆ ಅಪಾರವಾಗಿದೆ ಎಂದು ಅಭಿಪ್ರಾಯಪಟ್ಟರು. ರಾಮದುರ್ಗ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಅಭಿಯಾನ ಕೈಗೊಂಡು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ಮಾಡುವುದರ ಮೂಲಕ ಕನ್ನಡದ ಮನಸ್ಸುಗಳನ್ನು ಒಗ್ಗೂಡಿಸುವಂತೆ ಸಲಹೆ ನೀಡಿದರು. ತಾಲೂಕಿನಲ್ಲಿ ನಡೆಯುವ ಎಲ್ಲ ಸಾಹಿತ್ಯಿಕ ಚಟುವಟಿಕೆಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. 

ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಮಾತನಾಡಿ ಜಿಲ್ಲೆಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕವಿಗೋಷ್ಠಿಗಳನ್ನು ಏರ್ಪಡಿಸಿ ಹೊಸ ಕವಿಗಳನ್ನು ನಾಡಿಗೆ ಪರಿಚಯಿಸುವ ಕಾರ್ಯ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆಯಬೇಕು ಎಂದು ಹೇಳಿದರು. ಶಿಕ್ಷಕರಾದ ಎನ್.ಜಿ ಗಂಗಾಳದ ಮಾತನಾಡಿ ಮಕ್ಕಳಲ್ಲಿ ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸುವುದರ ಮೂಲಕ ಸಾಹಿತ್ಯದ ಅಭಿರುಚಿ ಮೂಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಾಂತಾ ಮನೋಳಿ, ಮುರಿಗೆಪ್ಪ ನೀಲಾಕಾರಿ, ಬಾಳಯ್ಯ ಹಿರೇಮಠ ಹಾಗೂ ಕಟಕೋಳ ಗ್ರಾಮದ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*