ಫಿಲ್ಮಿ ಸ್ಟೈಲ್ ನಲ್ಲಿ ಹಿರಿಯ ಅಧಿಕಾರಿ ಅಪಹರಣ ಯತ್ನ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಕೃತ್ಯದಲ್ಲಿ ಪೊಲೀಸ್ ಇಲಾಖೆಯಿಂದ ವಜಾಗೊಂಡ ಪೇದೆಯೊಬ್ಬ ಭಾಗಿಯಾಗಿರುವ ಶಂಕೆಯಿದೆ. ಗೋಗಿಯವರ ಮನೆಯ ಸಿಸಿಟಿವಿಯಲ್ಲಿ ಅಪರಿಚಿತನೊಬ್ಬ ಮನೆ ಬಳಿ ಸುಳಿದಾಡಿದ ದೃಶ್ಯ ದಾಖಲಾಗಿದೆ.

ಬಾಗಲಕೋಟೆ: ಜಿಲ್ಲೆಯ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಂಕರಲಿಂಗ ಗೋಗಿಯವರನ್ನು ಫಿಲ್ಮಿ ಸ್ಟೈಲ್ ನಲ್ಲಿ ಅಪಹರಿಸಲು ಶುಕ್ರವಾರ ದುಷ್ಕರ್ಮಿಗಳು ನಡೆಸಿದ ಯತ್ನ ವಿಫಲವಾಗಿದೆ.

ನವನಗರದ 55ನೇ ಸೆಕ್ಟರ್ ನ ಮನೆಯಿಂದ ಗೋಗಿಯವರು ಕಚೇರಿಗೆ ತೆರಳುವ ವೇಳೆ ಘಟನೆ ನಡೆದಿದೆ. ಗೋಗಿಯವರು ತಮ್ಮ ಕಾರಿನಲ್ಲಿ ಕಚೇರಿಗೆ ಹೊರಡುತ್ತಿದ್ದಂತೆ ಮನೆ ಸಮೀಪದ ಕ್ರಾಸ್‌ನಲ್ಲಿ ನಾಲ್ವರು ಇನ್ನೋವಾ ಕಾರಿನಲ್ಲಿ ಅಡ್ಡಗಟ್ಟಿದ್ದಾರೆ.

ಮತ್ತೊಂದು ಕಾರಿನಲ್ಲಿದ್ದ ಗೋಗಿ ಅವರನ್ನು ಕೆಳಗಿಳಿಸಿದ ದುಷ್ಕರ್ಮಿಗಳು ಇನ್ನೋವಾ ಕಾರ್‌ ಒಳಗೆ ತಳ್ಳುವ ಯತ್ನ ಮಾಡಿದ್ದಾರೆ. ಅಧಿಕಾರಿ ಹಾಗೂ ದುಷ್ಕರ್ಮಿಗಳ ಮಧ್ಯೆ ನೂಕಾಟ, ತಳ್ಳಾಟ ನಡೆದಿದೆ. ಅಷ್ಟರಲ್ಲಿ ಗೋಗಿಯವರ ಚಾಲಕ ಮಹೇಶ್ ದುಷ್ಕರ್ಮಿಯೊಬ್ಬನ ಮೊಬೈಲ್ ಕಿತ್ತುಕೊಂಡಿದ್ದಾರೆ. ಇತ್ತ ಮೊಬೈಲ್ ಕಸಿದುಕೊಳ್ಳಲು ದುಷ್ಕರ್ಮಿ ಮುಂದಾಗುತ್ತಿದ್ದಂತೆ ಗೋಗಿ ಕಾರ್‌ನಲ್ಲಿ ಕುಳಿತಿದ್ದಾರೆ. ಅಪಹರಣ ಯತ್ನ ವಿಫಲವಾಗುತ್ತಿದ್ದಂತೆ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಗೋಗಿ ತಕ್ಷಣ ನವನಗರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

ದುಷ್ಕರ್ಮಿಗಳು ಹಲವು ದಿನಗಳಿಂದ ಅಪಹರಣಕ್ಕೆ ಸಂಚು ನಡೆಸಿದ್ದರು ಎನ್ನಲಾಗಿದೆ. ಇತ್ತೀಚೆಗಷ್ಟೇ ಅಪರಿಚಿತನೊಬ್ಬ ಅಧಿಕಾರಿ ಮನೆಗೆ ಭೇಟಿ ನೀಡಿ ಸಾಹೇಬರು ಆಫೀಸಿಗೆ ಹೋಗಿದ್ದಾರಾ ಎಂದು ವಿಚಾರಿಸಿದ್ದ. ಅಪಹರಣಕ್ಕೆ ಯತ್ನಿಸುವ ಮೊದಲು ಅಪರಿಚಿತನೊಬ್ಬ ಅಧಿಕಾರಿ ಕಾರು ಚಾಲಕನ ಬಳಿ ಸರ್ ಆಫೀಸಿಗೆ ಹೋಗುತ್ತಿದ್ದಾರಾ ? ಎಂದು ವಿಚಾರಿಸಿದ್ದಾನೆ.

ಕೃತ್ಯದಲ್ಲಿ ಪೊಲೀಸ್ ಇಲಾಖೆಯಿಂದ ವಜಾಗೊಂಡ ಪೇದೆಯೊಬ್ಬ ಭಾಗಿಯಾಗಿರುವ ಶಂಕೆಯಿದೆ. ಗೋಗಿಯವರ ಮನೆಯ ಸಿಸಿಟಿವಿಯಲ್ಲಿ ಅಪರಿಚಿತನೊಬ್ಬ ಮನೆ ಬಳಿ ಸುಳಿದಾಡಿದ ದೃಶ್ಯ ದಾಖಲಾಗಿದೆ.

ಅಧಿಕಾರಿಯನ್ನು ಅಪಹರಿಸಿ ದೊಡ್ಡ ಮೊತ್ತ ದೋಚಲು ಯತ್ನಿಸಿರಬಹುದು ಎನ್ನಲಾಗುತ್ತಿದೆ. ಈವರೆಗೆ ಅಧಿಕಾರಿಗಳ ಅಪಹರಣದಂತಹ ಘಟನೆ ಜಿಲ್ಲೆಯಲ್ಲಿ ನಡೆದಿರಲಿಲ್ಲ. ಇದೇ ಮೊದಲ ಬಾರಿ ನಡೆದಿರುವ ಕೃತ್ಯ ಅಧಿಕಾರಿ ಸಮೂಹದಲ್ಲಿ ಆತಂಕಕ್ಕೆ ಕಾರಣವಾಗಿದೆ.

Be the first to comment

Leave a Reply

Your email address will not be published.


*