ರಾಜ್ಯ ಸುದ್ದಿಗಳು
ಉತ್ತರಕನ್ನಡ
ಕರ್ನಾಟಕದಲ್ಲಿ ಕಾಂಡ್ಲಾ ವನ ಪ್ರದೇಶದ ವಿಸ್ತೀರ್ಣತೆ ಹೆಚ್ಚಿದ್ದು, ರಾಜ್ಯದಲ್ಲಿ ಉತ್ತರ ಕನ್ನಡ ಜಿಲ್ಲೆ ಅತೀ ಹೆಚ್ಚಿನ ಕಾಂಡ್ಲಾ ಕಾಡುಗಳ ವಿಸ್ತೀರ್ಣತೆ ಪಡೆದಿವೆ.ರಾಜ್ಯದ ಕಾಂಡ್ಲಾ ಕಾಡಿನ ಪ್ರದೇಶವು 2019ರ ನಂತರ 2.57 ಚದರ ಕಿಲೋಮೀಟರ್ (ಸುಮಾರು 257 ಹೆಕ್ಟೇರ್) ಹೆಚ್ಚಳವಾಗಿದೆ. ಎರಡು ವರ್ಷಗಳಲ್ಲಿ ಅತಿಹೆಚ್ಚು ಕಾಂಡ್ಲಾವನ ವಿಸ್ತರಿಸಿದ ರಾಜ್ಯಗಳ ಪೈಕಿ ಕರ್ನಾಟಕವು ಮೂರನೇ ಸ್ಥಾನದಲ್ಲಿದೆ. 1.97 ಚದರ ಕಿಲೋಮೀಟರ್‌ನೊಂದಿಗೆ (197 ಹೆಕ್ಟೇರ್) ಉತ್ತರ ಕನ್ನಡ ಜಿಲ್ಲೆಯು ರಾಜ್ಯದಲ್ಲಿ ಮುಂದಿದೆ.ಕೇಂದ್ರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಈಚೆಗೆ ಬಿಡುಗಡೆ ಮಾಡಿರುವ ‘ಅರಣ್ಯ ಸ್ಥಿತಿಗತಿ ವರದಿ 2021’ರಲ್ಲಿ ಈ ಬಗ್ಗೆ ಉಲ್ಲೇಖವಿದೆ. ದಕ್ಷಿಣ ಕನ್ನಡದಲ್ಲಿ 0.45 ಚದರ ಕಿಲೋಮೀಟರ್ ಮತ್ತು ಉಡುಪಿ ಜಿಲ್ಲೆಯಲ್ಲಿ 0.15 ಚದರ ಕಿಲೋಮೀಟರ್ ಕಾಂಡ್ಲಾ ವನ ವೃದ್ಧಿಯಾಗಿದೆ.
ರಾಜ್ಯದ ಕಾಂಡ್ಲಾ ಅರಣ್ಯವು ಒಟ್ಟು 12.61 ಚದರ ಕಿಲೋಮೀಟರ್ (1,260 ಹೆಕ್ಟೇರ್) ಇದೆ. ಈ ಪೈಕಿ ಉತ್ತರ ಕನ್ನಡದಲ್ಲೇ 10.47 ಚದರ ಕಿಲೋಮೀಟರ್ (1,047 ಹೆಕ್ಟೇರ್) ಒಳಗೊಂಡಿದೆ. ಉಳಿದಂತೆ, ಉಡುಪಿ ಜಿಲ್ಲೆಯಲ್ಲಿ 1.69 ಚದರ ಕಿಲೋಮೀಟರ್ (169 ಹೆಕ್ಟೇರ್) ಹಾಗೂ ದಕ್ಷಿಣ ಕನ್ನಡದಲ್ಲಿ 0.45 (45 ಹೆಕ್ಟೇರ್) ಕಾಂಡ್ಲಾ ವನವಿದೆ. ದೇಶದಲ್ಲಿ ಎರಡು ವರ್ಷಗಳಲ್ಲಿ 1,710 ಹೆಕ್ಟೇರ್‌ಗಳಷ್ಟು ಏರಿಕೆ ಕಾಣುವ ಮೂಲಕ ಪ್ರಸ್ತುತ ಒಟ್ಟು 4.99 ಲಕ್ಷ ಹೆಕ್ಟೇರ್ ಕಾಂಡ್ಲಾ ಸಂಪತ್ತಿದೆ ಎಂದು ವರದಿಯಲ್ಲಿ ವಿವರ ನೀಡಲಾಗಿದೆ.
ಈ ಅಂಕಿ ಅಂಶಗಳಲ್ಲಿ ನೈಸರ್ಗಿಕವಾಗಿ ಬೆಳೆದು ವ್ಯಾಪಿಸಿದ, ಅರಣ್ಯ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳು ನಾಟಿ ಮಾಡಿ ಸಂರಕ್ಷಣೆ ಮಾಡಿದ ಕಾಂಡ್ಲಾ ವನದ ಮಾಹಿತಿಗಳೂ ಒಳಗೊಂಡಿವೆ. ಉತ್ತರ ಕನ್ನಡದ ಕಾರವಾರ, ಕುಮಟಾ ಮತ್ತು ಹೊನ್ನಾವರ ತಾಲ್ಲೂಕುಗಳ ಕೆಲವೆಡೆ ಆಸಕ್ತರು, ಸರ್ಕಾರೇತರ ಸಂಘ ಸಂಸ್ಥೆಗಳು ಕೆಲವು ವರ್ಷಗಳಿಂದ ಪಾಳು ಬಿದ್ದಿರುವ ಗಜನಿ ಭೂಮಿಯಲ್ಲಿ (ಉಪ್ಪು ನೀರಿನ ಪ್ರದೇಶ) ಕಾಂಡ್ಲಾ ಸಂರಕ್ಷಣೆ ಮಾಡುತ್ತಿದ್ದಾರೆ.
ಕರಾವಳಿಯ ವಿವಿಧೆಡೆ ಉಪ್ಪು ನೀರು ಮತ್ತು ಸಿಹಿನೀರು ಮಿಶ್ರಣವಾಗುವ ಹಿನ್ನೀರು ಪ್ರದೇಶಗಳಲ್ಲಿ ಸೀಗಡಿ, ಏಡಿ ಕೃಷಿ ಮಾಡಲಾಗುತ್ತದೆ. ಬಳಿಕ ಆ ಪ್ರದೇಶವನ್ನು ಹಾಗೇ ಬಿಟ್ಟರೆ ಅಲ್ಲಿ ಕಾಂಡ್ಲಾ ಅಭಿವೃದ್ಧಿಯಾಗುತ್ತದೆ. ಇದು ಕೂಡ ಈ ವನ್ಯ ಸಂಪತ್ತಿನ ವಿಸ್ತರಣೆಗೆ ತಕ್ಕಮಟ್ಟಿಗೆ ಸಹಕಾರಿಯಾಗಿದೆ ಎಂದು ಅರಣ್ಯಾಧಿಕಾರಿಗಳು ಅಭಿಪ್ರಾಯ ಪಡುತ್ತಾರೆ.
Be the first to comment