ರಾಜ್ಯ ಸುದ್ದಿಗಳು
ತುಮಕೂರು
ಅಲೆಮಾರಿ ಸಮುದಾಯದ ವ್ಯಕ್ತಿಯ ಜೊತೆಗೆ ಅನುಚಿತವಾಗಿ ವರ್ತಿಸಿ, ಬೆದರಿಕೆ ಹಾಕಿದ ಆರೋಪದ ಮೇರೆಗೆ ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ತೇಜಸ್ವಿನಿ ವಿರುದ್ಧ ಎಫ್ಐಆರ್ ದಾಖಲಾಗಿದೆ.ಚಿಕ್ಕನಾಯಕನಹಳ್ಳಿ ತಾಲೂಕಿನ ಕೇದಿಗೆಹಳ್ಳಿಪಾಳ್ಯ ಗ್ರಾಮದ ಗುಂಡು ತೋಪಿನಲ್ಲಿ 11 ಅಲೆಮಾರಿ ಕುಟುಂಬಗಳು ವಾಸವಾಗಿದ್ದ ಗುಡಿಸಲುಗಳು ವ್ಯಾಪಕ ಮಳೆಯಿಂದಾಗಿ ಸಂಪೂರ್ಣ ಜಲಮಯವಾಗಿತ್ತು.ಹೀಗಾಗಿ, ಸರ್ಕಾರದ ವತಿಯಿಂದ ಚಿಕ್ಕನಾಯಕನಹಳ್ಳಿ ಶ್ರೀ ಶಕ್ತಿ ಭವನದಲ್ಲಿ ಗಂಜಿ ಕೇಂದ್ರ ತೆರೆಯಲಾಗಿತ್ತು. ಈ ಗಂಜಿ ಕೇಂದ್ರದಲ್ಲಿ 11 ಅಲೆಮಾರಿ ಕುಟುಂಬದವರು ಆಶ್ರಯ ಪಡೆದಿದ್ದರು. 14 ದಿನಗಳ ನಂತರ ಗಂಜಿ ಕೇಂದ್ರ ಖಾಲಿ ಮಾಡುವಂತೆ ತಹಶೀಲ್ದಾರ್ ತೇಜಸ್ವಿನಿ ಸೂಚಿಸಿದ್ದರು
ಆದರೆ, ಇದಕ್ಕೊಪ್ಪದ ಅಲೆಮಾರಿ ಸಮುದಾಯದ ಪರಮೇಶ್ ಎಂಬ ವ್ಯಕ್ತಿ ತಮಗೆ ಪರಿಹಾರ ನೀಡುವಂತೆ ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಮಾಡಿದ್ದರು. ತಮ್ಮ ಕಚೇರಿಗೆ ಬಂದ ಪರಮೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ತಹಶೀಲ್ದಾರ್, ನಿನ್ನೆ ಮೇಲೆ ರೌಡಿಶೀಟರ್ ಕೇಸ್ ಹಾಕುತ್ತೇವೆ. ಜೊತೆಗೆ ನಿನ್ನ ತಂದೆ ವೆಂಕಟೇಶಯ್ಯನವರ ಆಧಾರ್ ಕಾರ್ಡ್ ಬ್ಲಾಕ್ ಲಿಸ್ಟ್ಗೆ ಸೇರಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರಲ್ಲದೇ, ಪರಮೇಶ್ ಹಾಗೂ ಕುಟುಂಬವನ್ನು ಕಚೇರಿಯಿಂದ ಹೊರಗೆ ದಬ್ಬುವಂತೆ ಸಿಬ್ಬಂದಿಗೆ ಸೂಚನೆ ನೀಡಿದ್ದರು.
2021ರ ಡಿಸೆಂಬರ್ 3ರಂದು ಈ ಘಟನೆ ನಡೆದಿದ್ದು, ತಹಶೀಲ್ದಾರ್ ತೇಜಸ್ವಿನಿ ವಿರುದ್ಧ ಚಿಕ್ಕನಾಯಕನಹಳ್ಳಿ ಪೊಲೀಸರಿಗೆ ಪರಮೇಶ್ ದೂರು ನೀಡಿದ್ದರು. ಈ ವೇಳೆ ದೂರು ಸ್ವೀಕರಿಸದೇ ಪೊಲೀಸರು ಸಬೂಬು ಹೇಳಿದ್ದರು. ಬಳಿಕ ಪರಮೇಶ್ ಐಜಿ ಹಾಗೂ ಎಸ್ಪಿ, ಎಸ್ಸಿ-ಎಸ್ಟಿ ಸೇಲ್ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ದೂರು ಸ್ವೀಕರಿಸದ ಚಿಕ್ಕನಾಯಕನಹಳ್ಳಿ ಪೊಲೀಸರು ಹಾಗೂ ತಹಶೀಲ್ದಾರ್ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಿಸಲಾಗಿದೆ.
Be the first to comment