ರಾಷ್ಟ್ರೀಯ ಮತದಾರರ ದಿನಾಚರಣೆ:ಸದೃಡ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಮತದಾನ ಅವಶ್ಯ : ನ್ಯಾ.ದೇಶಪಾಂಡೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:ಸದೃಡ ಪ್ರಜಾಪ್ರಭುತ್ವ ನಿರ್ಮಾಣದಲ್ಲಿ ಮತದಾನದ ಪಾತ್ರ ಅವಶ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ದೇಶಪಾಂಡೆ ಜಿ.ಎಸ್ ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿರುವ ಆಡಿಟೋರಿಯಂ ಹಾಲ್‍ನಲ್ಲಿಂದು ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ನ್ಯಾಯಾಂಗ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜಾತಿ, ಧರ್ಮ ಬೇಧಗಳನ್ನು ಲೆಕ್ಕಿಸದೇ ನಿರ್ಬಯವಾಗಿ ತಮ್ಮ ಹಕ್ಕನ್ನು ಚಲಾಯಿಸಲು ಯುವಕರು ಮುಂದಾಗಬೇಕು ಎಂದರು.

ಉತ್ತಮವಾದ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಪ್ರಜಾಪ್ರಭುತ್ವದಲ್ಲಿ ಮತದಾನದ ಮೂಲಕ ಅವಕಾಶ ಕಲ್ಪಿಸಿದ್ದು, ಮತ ಚಲಾಯಿಸುವುದು ಪ್ರತಿಯೊಬ್ಬರ ಜವಾಬ್ದಾರಿ, ಹಕ್ಕು ಹಾಗೂ ಕರ್ತವ್ಯವಾಗಿದೆ. ದೇಶಕ್ಕೆ ಒಳ್ಳೆಯ ಆಡಳಿತವನ್ನು ತರಲು ಚುನಾವಣೆಯ ಮೂಲಕ ಆಯ್ಕೆ ಮಾಡಲಾಗುತ್ತಿದ್ದು, ಯುವ ಜನತೆ ಮತದಾನದ ಮಹತ್ವವನ್ನು ಅರಿತು ಮತದಾನ ಮಾಡಬೇಕೆಂದು ತಿಳಿಸಿದರು.

2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಂತೋಷ ಸಿ.ಬಿ. ಮಾನತಾಡಿ ಇಂದಿನ ಮತದಾರರು ತಮ್ಮ ಮತವನ್ನು ಯಾವುದೇ ಆಮಿಷಗಳಿಗೆ ಬಲಿಕೊಡದೇ ದೇಶದ ಅಭಿವೃದ್ಧಿಗೆ ಉತ್ತಮ ನಾಯಕರ ಆಯ್ಕೆಗೆ ತಪ್ಪದೇ ಮತ ಚಲಾಯಿಸಬೇಕು. ಮತದಾನ ಮೂಲಭೂತ ಹಕ್ಕಾಗಿದ್ದು, ತಪ್ಪದೇ ಮತ ಚಲಾಯಿಸುವ ಮೂಲಕ ಸದೃಡ ಸರಕಾರ ರೂಪಿಸಬೇಕು. ವಿದ್ಯಾರ್ಥಿಗಳು ಭಾವಿ ಭವಿಷ್ಯದ ಪ್ರಜೆಗಳಾಗುತ್ತಿದ್ದು, ಮತದಾನ ಬಗ್ಗೆ ಜನರಿಗೆ ಸಮರ್ಪಕವಾಗಿ ಬಳಸಿಕೊಳ್ಳಲು ತಿಳುವಳಿಕೆ ಮೂಡಿಸುವ ಕಾರ್ಯವಾಗಬೇಕೆಂದರು.

ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರು ಈ ವರ್ಷದ ಘೋಷವಾಕ್ಯ ನಮ್ಮ ಮತದಾರರನ್ನು ಅಧಿಕಾರಯುಕ್ತ, ಜಾಗರೂಕ, ಸುರಕ್ಷಿತ ಮತ್ತು ಮಾಹಿತಿಯುಕ್ತರನ್ನಾಗಿ ಮಾಡುವುದಾಗಿದೆ. ಯಾವುದೇ ಮತದಾನದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ವಿದ್ಯಾವಂತರು ಮತದಾನದ ಮಹತ್ವವನ್ನು ಅರಿತು ಜಾಗೃತಗೊಂಡು ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ಇದರಿಂದ ಒಳ್ಳೆಯ ಸಮಾಜ ಕಟ್ಟಲು ಸಾಧ್ಯವಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಹೊಸದಾಗಿ ನೊಂದಾಯಿತ ಯುವ ಮತದಾರರಾದ ವಿಜಯ ರಾಠೋಡ, ಉಜ್ವಲ ಝಿಂಗಾಡೆ, ಐಶ್ವರ್ಯ ಚಟ್ಟರಕಿ, ರೋಮಾಣಾ ಬೇಪಾರಿ ಹಾಗೂ ಶಕ್ತಿಪ್ರಸಾದ ರಾಠೋಡ ಅವರಿಗೆ ಸಾಂಕೇತಿಕವಾಗಿ ಮತದಾರರ ಗುರುತಿನ ಚೀಟಿಗಳನ್ನು ವಿತರಿಸಲಾಯಿತು. ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಪ್ರಬಂಧ, ಪೋಸ್ಟರ ಮೇಕಿಂಗ್, ಬಿತ್ತಿಪತ್ರ ಹಾಗೂ ರಸಪ್ರಶ್ನೆ ಸ್ಪರ್ಧೆ ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪಂ ಸಿಇಓ ಟಿ.ಭೂಬಾಲನ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಹುಲ್ಲೂರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ಚುನಾವಣಾ ತಹಶೀಲ್ದಾರ ಎಸ್.ಎಸ್.ನಾಯ್ಕಲ್‍ಮಠ, ತಹಶೀಲ್ದಾರ ಗುರುಸಿದ್ದಯ್ಯ ಹಿರೇಮಠ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು. ಶಿಕ್ಷಣ ಇಲಾಖೆಯ ಸಂಗಮೇಶ ಸಣ್ಣತಂಗಿ ಕಾರ್ಯಕ್ರಮ ನಿರೂಪಿಸಿದರು.

Be the first to comment

Leave a Reply

Your email address will not be published.


*