ಎಸ್‍ಸಿಪಿ, ಟಿಎಸ್‍ಟಿ ಪ್ರಗತಿ ಪರಿಶೀಲನಾ ಸಭೆ:ಅನುದಾನ ಸಂಪೂರ್ಣ ಬಳಕೆಯಾಗಲಿ : ಡಿಸಿ ರಾಜೇಂದ್ರ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ ಬಿಡುಗಡೆಯಾದ ಅನುದಾನವನ್ನು ನಿಗದಿತ ಅವಧಿಯಲ್ಲಿ ಖರ್ಚು ಮಾಡುವ ಮೂಲಕ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಎಸ್‍ಸಿಪಿ, ಟಿಎಸ್‍ಟಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಿಡುಗಡೆಯಾದ ಅನುದಾನ ಲ್ಯಾಪ್ಸ್ ಆಗದಂತೆ ಕ್ರಮವಹಿಸಬೇಕು. ಮುಂದಿನ ಸಭೆಯಲ್ಲಿ ನೂರರಷ್ಟು ಪ್ರಗತಿಯಾಗಿರಬೇಕೆಂದು ಅಧಿಕಾರಿಗಳು ಸೂಚಿಸಿದರು. ತಾಲೂಕಾ ಮಟ್ಟದಲ್ಲಿಯೂ ಕಡ್ಡಾಯವಾಗಿ ಸಭೆಗಳನ್ನು ಜರುಗಿಸಲು ತಿಳಿಸಿದ ಅವರು ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಕೆಲವೊಂದು ಯೋಜನೆಗಳಲ್ಲಿ ಕಡಿಮೆ ಪ್ರಗತಿ ಸಾಧಿಸಿದ್ದು, ಬಿಡುಗಡೆಯಾಗಿ ಖರ್ಚು ಮಾಡಿದ ನಂತರ ಉಳಿದ ಅನುದಾನವನ್ನು ಖರ್ಚು ಭರಿಸಲು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ಭಾರತಿ ಬಣಕಾರ ಅವರು ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮದಡಿ ಎಸ್‍ಸಿಪಿ ಅಡಿ ಶೇ74 ರಷ್ಟು, ಟಿಎಸ್‍ಪಿ ಅಡಿ 63 ರಷ್ಟು ಪ್ರಗತಿಯಾಗಿರುವುದಾಗಿ ತಿಳಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಬಿರಾದಾರ ಅವರು ಧನಸಹಾಯ ಮತ್ತು ಫೀ ಮರುಪಾವತಿ ಯೋಜನೆಯಡಿ ವಿಶೇಷ ಘಟಕ ಯೋಜನೆಯಡಿ ಹಾಗೂ ಗಿರಿಜಯ ಉಪಯೋಜನೆಯಡಿ ಶೇ,100 ಪ್ರಗತಿ ಸಾಧಿಸಿರುವುದಾಗಿ ತಿಳಿಸಿದರು.

ವಿವಿಧ ಇಲಾಖೆಯಡಿ ಒಟ್ಟಾರೆಯಾಗಿ ವಿಶೇಷ ಘಟಕ ಯೋಜನೆಯಡಿ ನಿಗದಿ ಪಡಿಸಿದ ಅನುದಾನ 94 ಕೋಟಿ ರೂ.ಗಳ ಪೈಕಿ 67.73 ಕೋಟಿ ರೂ. ಬಿಡುಗಡೆಯಾಗಿದ್ದು, ಅದರಲ್ಲಿ 39.73 ಕೋಟಿ ರೂ.ಗಳಷ್ಟು ಖರ್ಚು ಮಾಡಲಾಗಿದೆ. ಅದೇ ರೀತಿಯ ಗಿರಿಜನ ಉಪಯೋಜನೆಯಡಿ ನಿಗದಿಪಡಿಸಿದ 37.14 ಕೋಟಿ ರೂ.ಗಳ ಅನುದಾನ ಪೈಕಿ 24.04 ಕೋಟಿ ಬಿಡುಗಡೆಯಾಗಿದ್ದು, ಅದರಲ್ಲಿ 16.81 ಕೋಟಿ ರೂಗಳಷ್ಟು ಖರ್ಚು ಮಾಡಲಾಗಿರುವುದಾಗಿ ಸಭೆಗೆ ತಿಳಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಅಮರೇಶ ನಾಯಕ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಕೃಷಿ ಇಲಾಖೆಯ ಉಪನಿದೇಶಕ ಕೊಂಗವಾಡ, ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನೀಯರ್ ಪ್ರಶಾಂತ ಗಿಡದಾನಪ್ಪಗೋಳ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಾಹುಲ್‍ಕುಮಾರ ಬಾವಿದಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಪತ್ರಾಂಕಿತ ವ್ಯವಸ್ಥಾಪಕ ಆರ್.ವಿ.ಚವ್ಹಾಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*