ನವದೆಹಲಿ: ಉಸಿರಾಡಲು ಶುದ್ಧ ಗಾಳಿ ಸಿಗದೆ ಜನರು ‘ಆಮ್ಲಜನಕ’ದ ಅಂಗಡಿಗಳ ಹುಡುಕಾಟದಲ್ಲಿದ್ದಾರೆ. ಆಮ್ಲಜನಕ ಮಾರಾಟಕ್ಕಿಟ್ಟಿರುವ ಅಂಗಡಿಯೊಂದು ಈಗಾಗಲೇ ನವದೆಹಲಿಯಲ್ಲಿ ಕಾರ್ಯರಂಭಿಸಿದ್ದು, 15 ನಿಮಿಷ ಶುದ್ಧ ಗಾಳಿ ಸೇವನೆಗೆ ಸಾಲುಗಟ್ಟಿ ನಿಂತಿದ್ದಾರೆ.
ಗಾಳಿಯ ಗುಣಮಟ್ಟ ಅಪಾಯದ ಸ್ಥಿತಿ ತಲುಪಿದ್ದು ದೆಹಲಿಯ ಸುತ್ತಮುತ್ತಲು ಹೊಗೆಮಂಜು ಸಾಮಾನ್ಯವಾಗಿದೆ. ಆರೋಗ್ಯ ತುರ್ತು ಪರಿಸ್ಥಿತಿ ಸೃಷ್ಟಿಯಾಗಿದ್ದು, ಜನರಿಗೆ ‘ಆಕ್ಸಿಜನ್ ಬಾರ್’ ತಕ್ಷಣದ ಪರಿಹಾರವಾಗಿ ಗೋಚರಿಸಿದೆ. ಆಕ್ಸಿ ಪ್ಯೂರ್ ಮಳಿಗೆಯಲ್ಲಿ ಗ್ರಾಹಕರು ನಳಿಕೆಗಳ ಮೂಲಕ ಆಮ್ಲಜನಕ ಹೀರಬಹುದಾಗಿದೆ. ಲ್ಯಾವೆಂಡರ್ ಮತ್ತು ಸುಗಂಧ ಹೊಂದಿರುವ ನಿಂಬೆ ಗರಿಕೆಗಳ ಸುವಾಸನೆಗಳ ಸಹಿತ ಶುದ್ಧ ಗಾಳಿಯು ಇಲ್ಲಿ ಲಭ್ಯವಿದೆ.
ವಾಯು ಮಾಲಿನ್ಯದ ಪರಿಣಾಮ ಕಣ್ಣಿನಲ್ಲಿ ಉರಿ ಮತ್ತು ತುರಿತ, ಮೂಗಿನಲ್ಲಿ ನೀರು ಸುರಿಯುವುದು ಹಾಗೂ ಗಂಟಲು ಊತದಂತಹ ಹಲವು ತೊಂದರೆಗಳನ್ನು ದೆಹಲಿ ಜನ ಈಗಾಗಲೇ ಅನುಭವಿಸುತ್ತಿದ್ದಾರೆ. ಇಂಥ ನಿತ್ಯ ಬಾಧೆಗಳನ್ನು ಪರಿಹರಿಸಿಕೊಳ್ಳಲು ಆಕ್ಸಿಜನ್ ಬಾರ್‌ಗಳ ಮೊರೆ ಹೋಗುವುದು ಅನಿವಾರ್ಯ ಎನ್ನುತ್ತಾರೆ ಉಕ್ರೇನ್ ಮೂಲದ ದೆಹಲಿ ನಿವಾಸಿ ಲಿಸಾ ದ್ವಿವೇದಿ.
ನವದೆಹಲಿಯ ಸೆಲೆಕ್ಟ್ ಸಿಟಿವಾಕ್ ಮಾಲ್‌ನಲ್ಲಿ ಆಕ್ಸಿ ಪ್ಯೂರ್ ಮಳಿಗೆ ಇದೆ. ಇಲ್ಲಿ ಮೂಗಿನ ನಳಿಕೆ ಮೂಲಕ 15 ನಿಮಿಷ ಆಮ್ಲಜನಕ ಸೇವಿಸಲು ₹299 ರಿಂದ ₹499 ನೀಡಬೇಕು. ಏಳು ಬಗೆಯ ಸುಗಂಧ ಮಿಶ್ರಿತ ಆಮ್ಲಜನಕ ಲಭ್ಯವಿದ್ದು, ‘ವಾಯುಮಾಲಿನ್ಯ ವಿಶೇಷ’ವಾಗಿ ನಾಲ್ಕು ಅವಧಿಗೆ ನೀಡುವ ಹಣದಲ್ಲಿ ಐದು ಬಾರಿ ಆಮ್ಲಜನಕ ಸೇವನೆ ಕೊಡುಗೆಯನ್ನು ಆಕ್ಸಿ ಪ್ಯೂರ್ ನೀಡುತ್ತಿದೆ.
ಆಕ್ಸಿಜನ್ ಮಾರಾಟದಿಂದ ಲಾಭ ಮಾಡಿಕೊಳ್ಳುತ್ತಿಲ್ಲ. ಆದರೆ, ದೆಹಲಿಯ ವಿಮಾನ ನಿಲ್ದಾಣದಲ್ಲಿ ಹಾಗೂ ಮುಂಬೈ ಮತ್ತು ಬೆಂಗಳೂರಿನಲ್ಲಿ ಆಕ್ಸಿಜನ್ ಬಾರ್ ತೆರೆಯುವ ಉದ್ದೇಶವಿದೆ ಎಂದು ಆಕ್ಸಿ ಪ್ಯೂರ್ ಮಾಲೀಕ ಆರ್ಯವಿರ್ ಕುಮಾರ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
‘ಶುದ್ಧ ಗಾಳಿಯನ್ನು ದುಡ್ಡು ಕೊಟ್ಟು ಕೊಳ್ಳಬೇಕೆ?’ ಎಂದು ಕೇಳುವವರಿಗೆ ಆರ್ಯವಿರ್ ಪ್ರಶ್ನೆ ಮುಂದಿಟ್ಟಿದ್ದು, ‘ನೀವು 20 ವರ್ಷಗಳ ಹಿಂದೆ ನೀರಿಗೆ ಹಣ ನೀಡದಿದ್ದರೂ, ಈಗ ಬಾಟಲಿಯಲ್ಲಿ ಶುದ್ಧ ಕುಡಿಯುವ ನೀರಿಗೆ ಹಣ ನೀಡಿ ಪಡೆಯುತ್ತಿಲ್ಲವೇ?’ ಎಂದಿದ್ದಾರೆ.
15 ನಿಮಿಷಗಳ ವರೆಗೆ ಶುದ್ಧ ಗಾಳಿ ಸೇವನೆ ಮಾಡಿದರೆ ಸಾಕೇ? ಅಥವಾ ಇದು ಕೇವಲ ಮಾನಸಿಕ ವಿಚಾರವೇ ಎಂಬುದಕ್ಕೆ ಉತ್ತರವಿಲ್ಲ. ಆದರೆ, ಶುದ್ಧ ಗಾಳಿ ಪಡೆಯುತ್ತಿದ್ದೇವೆ ಎಂಬ ಭಾವನೆ ಉತ್ಸಾಹ ಮೂಡಿಸುತ್ತದೆ ಎನ್ನುತ್ತಾರೆ ಲಿಸಾ.
4.6 ಕೋಟಿ ಜನರಿಗೆ ಆಶ್ರಯ ನೀಡಿರುವ ದೇಶದ ರಾಜಧಾನಿಯಲ್ಲಿ ವಾಯು ಮಾಲಿನ್ಯದಿಂದಾಗಿ ಪ್ರಾಥಮಿಕ ಶಾಲೆಗಳ ಕಾರ್ಯನಿರ್ವಹಣೆಯನ್ನು ಎರಡನೇ ಬಾರಿಗೆ ನಿಲ್ಲಿಸಲಾಗಿದೆ.
ಎಲ್ಲಿಯವರೆಗೂ ಈ ಪರಿಸ್ಥಿತಿ ಮುಂದುವರಿಯಲಿದೆ ಎಂಬುದಕ್ಕೆ ಸರ್ಕಾರದ ಬಳಿ ಸ್ಪಷ್ಟ ಉತ್ತರವಿಲ್ಲ. ಆರೋಗ್ಯ ಸಚಿವರು ಕ್ಯಾರೆಟ್ ಸೇವನೆ ಮೂಲಕ ಹಾನಿಕಾರಕ ಪರಿಣಾಮಗಳಿಂದ ತಪ್ಪಿಸಿಕೊಳ್ಳಿ ಎಂದು ಸಲಹೆ ನೀಡಿದ್ದರೆ, ಮತ್ತೊಬ್ಬ ಹಿರಿಯ ಮುಖಂಡ ಮಳೆ ಬರಿಸಲು ದೇವರಿಗೆ ಮೊರೆ ಹೋಗಿ ಎಂದಿದ್ದಾರೆ. ಪಟಾಕಿ ಸಿಡಿಸುವುದು, ನಿರ್ಮಾಣ ಕಾಮಗಾರಿಗಳಿಂದ ಏಳುವ ದೂಳು, ರೈತರು ಮುಂದಿನ ಬೆಳೆಗಳ ತಯಾರಿಗೆ ಕೊಯ್ಲು ಮಾಡಿದ ನಂತರ ಉಳಿಯುವ ತ್ಯಾಜ್ಯವನ್ನು ಸುಡುವುದರಿಂದ ಮೇಲೇಳುವ ಹೊಗೆದೂಳು ದೇಶದ ನಗರಗಳ ವಾತಾವರಣವನ್ನು ಆವರಿಸಿಕೊಳ್ಳುತ್ತಿದೆ.
Be the first to comment