ರಾಜ್ಯ ಸುದ್ದಿಗಳು
ದೇವನಹಳ್ಳಿ
ಸರ್ವ ಧರ್ಮಗಳ ಮಹಾನ್ ವ್ಯಕ್ತಿ ಪುರುಷರು, ಸಮಾಜ ಹಿತ ಚಿಂತಕರು, ಸಾಹಿತಿಗಳು ಮತ್ತು ಹಲವು ಮಹಾನ್ ವ್ಯಕ್ತಿಗಳು ಕಂಡುಕೊಂಡಂತಹ ಅತ್ಯ ಅದ್ಭುತವಾದ ವೈಶಿಷ್ಟ ಚಿಂತನೆಗಳೆಂದರೆ ಅದು ವ್ಯಕ್ತಿ ಅಭಿವೃದ್ಧಿ, ಕುಟುಂಬದ ಸರ್ವಾಗೀಣ ಅಭಿವೃದ್ಧಿ ಮತ್ತು ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಯಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳಾ ಗ್ರಾಮಾಭಿವೃದ್ಧಿ ಯೋಜನೆ (ಬಿ.ಸಿ.ಟ್ರಸ್ಟ್)ನ ಬೆಂಗಳೂರು ಗ್ರಾಮಾಂತರ ಜಿಲ್ಲಾ ನಿರ್ದೇಶಕ ಸತೀಶ್ ನಾಯ್ಕ್ ತಿಳಿಸಿದರು.
ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಗ್ರಾಪಂ ಮೊದಲನೇ ಮಹಡಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಶ್ವನಾಥಪುರ ವಲಯ ವತಿಯಿಂದ ಹಮ್ಮಿಕೊಂಡಿದ್ದ ಒಕ್ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ೧೫೦ ವರ್ಷಗಳ ಇತಿಹಾಸ ಹೊಂದಿರುವ ಪರಮ ಪವಿತ್ರವಾದ ಸ್ಥಳ ಧರ್ಮಸ್ಥಳವಾಗಿದೆ. ಆರಂಭದ ಧರ್ಮಾಧಿಕಾರಿಗಳಿಂದ ಈಗಿನ ೨೧ನೇ ಧರ್ಮಾಧಿಕಾರಿ ಪೂಜ್ಯ ಡಾ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಧರ್ಮೋತ್ಥಾನ ಟ್ರಸ್ಟ್ ಮೂಲಕ ಧರ್ಮಕ್ಷೇತ್ರಗಳಾದ ದೇವಸ್ಥಾನ, ಚರ್ಚ್, ಮಸೀದಿ ಮತ್ತು ಪ್ರಾರ್ಥನ ಮಂದಿರಗಳ ಅಭಿವೃದ್ಧಿಯಾಗಬೇಕೆಂಬ ನಿಟ್ಟಿನಲ್ಲಿ ಬಹಳ ಉತ್ಸಾಹದಿಂದ ಒಂದಷ್ಟು ಕೋಟಿಗಟ್ಟಲೇ ಹಣವನ್ನು ದೇವಾಲಯಗಳ ಅಭಿವೃದ್ಧಿಗಾಗಿ ಮೀಸಲಿಡುವ ಕಾರ್ಯವಾಗುತ್ತಿದೆ. ಇದರ ಜತೆಯಲ್ಲಿ ಗ್ರಾಮೀಣ ಭಾಗದಲ್ಲಿರುವ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವ ಸಲುವಾಗಿ ಕೋಟಿಗಟ್ಟಲೇ ಮಕ್ಕಳಿಗೆ ಶಿಕ್ಷಣದ ನೆರವನ್ನು ಮತ್ತು ಅರಿವನ್ನು ಕೊಡುವಂತಹ ಶಿಕ್ಷಣ ಸಂಸ್ಥೆಯಿಂದ ಆಗುತ್ತಿದೆ. ಒಂದಷ್ಟು ಮಕ್ಕಳಿಗೆ ಶಿಕ್ಷಣ ನೆರವು ನೀಡುವ ನಿಟ್ಟಿನಲ್ಲಿ ಸಾಕಷ್ಟು ನೆರವನ್ನು ನೀಡುವ ಕೆಲಸವಾಗುತ್ತಿದೆ. ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಟ್ರಸ್ಟ್‌ಗಳನ್ನು ತೆರೆಯುವ ಮೂಲಕ ಪ್ರಕೃತಿದತ್ತ ವಸ್ತುಗಳನ್ನು ಬಳಸಿಕೊಂಡು ಸ್ವಾಭಾವಿಕವಾಗಿ ಸಹಜವಾಗಿ ಮನುಷ್ಯ ಆರೋಗ್ಯವಂತ ಜೀವನ ಸಾಗಿಸಬೇಕೆಂಬ ಉದ್ದೇಶದಿಂದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಟ್ರಸ್ಟ್‌ಗಳ ಮೂಲಕ ಸಾಕಷ್ಟು ಸೇವೆಯನ್ನು ನಿರಂತರವಾಗಿ ನೀಡುವ ಕಾರ್ಯವಾಗುತ್ತಿದೆ ಎಂದು ಹೇಳಿದರು.
ಪರಮ ಪವಿತ್ರವಾದಂತಹ ಪುಣ್ಯಕ್ಷೇತ್ರದಲ್ಲಿ ೧೯೮೨ರಲ್ಲಿ ಎತ್ತರದ ಏಕ ಶಿಲಾ ಬಾಹುಬಲಿ ಪ್ರತಿಷ್ಠ ಮಹೋತ್ಸವದ ಸವಿ ನೆನಪಿಗಾಗಿ ಪರಮ ಪೂಜ್ಯ ದಂಪತಿಗಳು ಆರಂಭಿಸಿದ ಅತ್ಯಾದ್ಭುತಂತಹ ಟ್ರಸ್ಟ್ ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯಾಗಿದೆ. ಈ ಸಂಸ್ಥೆ ಬೃಹದಾಕಾರವಾಗಿ ಬೆಳೆದ ಹೆಮ್ಮರವಾಗಿದೆ. ಪ್ರತಿ ಜನರಿಗೆ ಹಣ್ಣು ಮತ್ತು ನೆರಳು ನೀಡುವ ಕಾರ್ಯ ಮುಂದುವರೆಸಿಕೊಂಡು ಬರುತ್ತಿದೆ. ಗ್ರಾಮೀಣ ಭಾಗದ ಮಹಿಳೆಯರ ಸಬಲೀಕರಣಕ್ಕೆ ಸಾಕಷ್ಟು ಯೋಜನೆಗಳನ್ನು ರೂಪಿಸಿ, ಸದೃಢ ಸಮಾಜ ನಿರ್ಮಾಣ ಮಾಡುವ ಕಾಯಕವನ್ನು ಮಾಡುತ್ತಾ ಬಂದಿದೆ. ಶಿಸ್ತು ಮತ್ತು ಸಂಯಮದಿಂದ ಯೋಜನೆಗಳ ಅನುಷ್ಠಾನ ಕಾಲಕಾಲಕ್ಕೆ ಫಲಾನುಭವಿಗಳ ಕೈ ಸೇರುತ್ತಿದ್ದು, ಆರ್ಥಿಕವಾಗಿ ಮುಂಬರಲು ಇಂತಹ ಕಾರ್ಯಕ್ರಮಗಳು ಪ್ರತಿ ವಲಯ ಕ್ಷೇತ್ರಗಳಲ್ಲಿ ನಡೆಯುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ವಿಶ್ವನಾಥಪುರ ವಲಯದ ೧೨ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಗಳು, ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಮಾಹಿತಿ ಕಾರ್ಯಗಾರದಲ್ಲಿ ಮಾಹಿತಿ ನೀಡಿದರು. ಪಿಯುಸಿಯಲ್ಲಿ ಗರಿಷ್ಠ ಅಂಕ ಪಡೆದ ಒಕ್ಕೂಟದ ಸದಸ್ಯರ ೫ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ೧ಸಾವಿರ ರೂ.ಗಳ ವಿದ್ಯಾರ್ಥಿ ವೇತನವನ್ನು ೪೦ಸಾವಿರ ರೂ.ಗಳವರೆಗೆ ಸುಜ್ಞಾನ ಶಿಷ್ಯ ವೇತನವನ್ನು ನೀಡಿದರು. ಈ ವೇಳೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಅಕ್ಷತಾರೈ, ತರಬೇತಿ ಮೇಲ್ವೀಚಾರಕ ಕುಮಾರ್, ವಿಶ್ವನಾಥಪುರ ವಲಯ ಮೇಲ್ವೀಚಾರಕ ಧನಂಜಯ್, ಮಹಿಳಾಸದಸ್ಯರು, ಪದಾಧಿಕಾರಿಗಳು ಇದ್ದರು.
Be the first to comment