ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ದೌರ್ಜನ್ಯ ಪ್ರಕರಣದಡಿ ಪ್ರಸಕ್ತ ಸಾಲಿನಲ್ಲಿ ನವೆಂಬರ ಅಂತ್ಯದವರೆಗೆ 37 ಪ್ರಕರಣಗಳಿಗೆ ಒಟ್ಟು 1.22 ಕೋಟಿ ರೂ.ಗಳಷ್ಟು ಪರಿಹಾರಧನ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಜರುಗಿದ ಜಿಲ್ಲಾ ಮಟ್ಟದ ಜಾಗೃತಿ ನಿಯಂತ್ರಣ ಹಾಗೂ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರಸಕ್ತ ಸಾಲಿಗೆ 1.25 ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿದ್ದು, ಹಿಂದಿನ ಶಿಲ್ಕು 10.68 ಲಕ್ಷ ರೂ. ಸೇರಿ ಒಟ್ಟು 1.35 ಕೋಟಿ ರೂ.ಗಳಲ್ಲಿ 1.22 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಸ್ವೀಕೃತವಾದ 47 ಪ್ರಕರಣದಡಿ 37 ಪ್ರಕರಣಗಳಿಗೆ ಪರಿಹಾರಧನ ವಿತರಿಸಿರುವುದಾಗಿ ತಿಳಿಸಿದರು.
ಪ್ರಸಕ್ತ ವರ್ಷದಲ್ಲಿ ಜಿಲ್ಲಾ ಹಾಗೂ ತಾಲೂಕಾ ಮಟ್ಟದಲ್ಲಿ ಜಾಗೃತಿ ಉಸ್ತುವಾರಿ ಸಮಿತಿ ಸಭೆ ಜರುಗಿಸಿರುವ ಬಗ್ಗೆ ಮಾಹಿತಿ ಪಡೆದರು. ಪರಿಹಾರಧನ ವಿತರಣೆಗೆ ಅನುದಾನ ಕೊರತೆ ಇದ್ದಲ್ಲಿ ಅನುದಾನ ತರಿಸಿಕೊಳ್ಳಲು ಕ್ರಮವಹಿಸುವಂತೆ ಸಮಾಹ ಕಲ್ಯಾಣ ಇಲಾಖೆಯ ಉಪನಿರ್ದಶಕ ಮಹೇಶ ಪೋತದಾ ಅವರಿಗೆ ಸೂಚಿಸಿದರು. ಕಳೆದ ಸಾಲಿನಲ್ಲಿ ಪುರಸಭೆ, ನಗರಸಭೆಗಳಲ್ಲಿ ಮೀಸಲಿರಿಸಲಾದ ಎಸ್‍ಎಫ್‍ಸಿ ಅನುದಾನ ಸಮರ್ಪಕೆಯಾಗಿರುವ ಬಗ್ಗೆ ಸಭೆಯಲ್ಲಿ ಕೇಳಿದಾಗ ಅದಕ್ಕೆ ಪ್ರತಿಕ್ರಿಯಿಸಿದ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಮಾಯನ್ನಗೌಡ ಅವರು ನವೆಂಬರ ಅಂತ್ಯಕ್ಕೆ ಎಸ್‍ಸಿ ಅನುದಾನದಲ್ಲಿ ಶೇ.90.38, ಎಸ್‍ಟಿ ಅನುದಾನದಲ್ಲಿ ಶೇ.90.26 ರಷ್ಟು ಪ್ರಗತಿ ಸಾಧಿಸಿರುವುದಾಗಿ ತಿಳಿಸಿದರು.
ಪರಿಶಿಷ್ಟ ಜಾತಿಯ ಎಸ್.ಎಫ್.ಸಿ ಅನುದಾನ ಹಾಗೂ ಶೇ.24.10 ಅನುದಾನಕ್ಕೆ ಸಂಬಂಧಿಸಿದ ಗುಳೇದಗುಡ್ಡ ಪುರಸಭೆ ಮತ್ತು ರಬಕವಿ ನಗರಸಭೆ ಯಾವುದೇ ಹಣ ಖರ್ಚು ಮಾಡದಿರುವದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್ ಜಾತಿ ಮಾಡಿ ಕ್ರಮವಹಿಸಲು ತಿಳಿಸಿದರು. ಅಂಬೇಡ್ಕರ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯಡಿ ಕೊರೆಯಲಾದ ಬೋರವೆಲ್‍ಗಳಿಗೆ ವಿದ್ಯುದ್ದೀಕರಣಕ್ಕೆ ಬಾಕಿ ಉಳಿದಿದ್ದು, ಪ್ರಗತಿ ಹಂತದಲ್ಲಿ ಇರುವುದಾಗಿ ಅಂಬೇಡ್ಕರ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಸಭೆಗೆ ತಿಳಿಸಿದರು.
ದೌರ್ಜನ್ಯ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಸಮುದಾಯದ ಜನ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಗ್ರಾಮಗಳಲ್ಲಿ ಹಮ್ಮಿಕೊಳ್ಳಲು ತಿಳಿಸಿದರು. ಇದಕ್ಕಾಗಿ ಸಮಿತಿಯ ನಾಮನಿರ್ದೇಶಿತ ಸದಸ್ಯರ ಸಲಹೆ ಪಡೆಯಲು ತಿಳಿಸಿದರು. ಮೊರಾರ್ಜಿ ವಸತಿ ಶಾಲೆಗಳಲ್ಲಿ ಒಟ್ಟು 148 ದೇವದಾಸಿ ಮಕ್ಕಳಿಗೆ ಪ್ರವೇಶಾತಿ ನೀಡಿರುವುದಾಗಿ ಸಭೆಯಲ್ಲಿ ತಿಳಿಸಲಾಯಿತು.
ಸಭೆಯಲ್ಲಿ ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರಾದ ಡಾ.ಎಂ.ಎಚ್.ಚಲವಾದಿ, ಬಸವಂತ ಮೇತ್ರಿ, ಶಶಿಧರ ಮೀಸಿ, ಸತ್ಯಪ್ಪ ಮಾದರ, ಶಿವು ಮಣ್ಣೂರ, ಮಾರುತಿ ರಂಗಣ್ಣವರ, ಪರಶುರಾಮ ಬಸವ್ವಗೋಳ, ಕುಮಾರಸ್ವಾಮಿ ಹಿರೇಮಠ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಮಾಯನ್ನಗೌಡ, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿವಾಹಕ ಅಭಿಯಂತರ ಕುಂಬಾರ, ಸರಕಾರಿ ಅಭಿಯೋಜಕ ಎಸ್.ಎಂ.ಹಂಜಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
Be the first to comment