ಜಿಲ್ಲಾ ಸುದ್ದಿಗಳು
ಮುಂಡಗೋಡ:
ಕೇಂದ್ರ ಮತ್ತು ರಾಜ್ಯ ಸರಕಾರಗಳು ಸುಫ್ರೀಂ ಕೋರ್ಟನಲ್ಲಿ ಅರಣ್ಯ ಹಕ್ಕು ಕಾಯಿದೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿ ತೀರಸ್ಕಾರವಾಗಿರುವ ಅರಣ್ಯವಾಸಿಗಳನ್ನು ಹಂತ, ಹಂತವಾಗಿ ಒಕ್ಕಲೆಬ್ಬಿಸಲಾಗುವದು ಎಂಬ ಪ್ರಮಾಣ ಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ ಅರಣ್ಯವಾಸಿಗಳು ಅತಂತ್ರವಾಗಿರುವ ಆತಂಕದಲ್ಲಿ ಇರುವುದರಿಂದ, ಅರಣ್ಯವಾಸಿಗಳ ಪರ ಸರಕಾರ ನಿಲುವು ಪ್ರಕಟಿಸಬೇಕೆಂದು ಅಗ್ರಹಿಸಿ ಡಿ. ೨೨ ರಂದು ‘ಬೆಳಗಾವಿ ಚಲೋ’ ಏರ್ಪಡಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.
ಅವರು ಇಂದು ಮುಂಡಗೋಡ ತಾಲೂಕಿನ ವಿವಿಧ ಅರಣ್ಯ ಅತಿಕ್ರಮಣ ಪ್ರದೇಶಕ್ಕೆ ಭೇಟಿಕೊಟ್ಟು, ಡಿ. ೨೨ ಕ್ಕೆ ‘ಬೆಳಗಾವಿ ಚಲೋ’ ಕಾರ್ಯಕ್ರಮದ ಪೂರ್ವಭಾವಿ ಸಭೆ ಜರುಗಿದ ಸಂದರ್ಭದಲ್ಲಿ ಮಾತನಾಡಿದರು.
ಸ್ವತಂತ್ರ ಭಾರತದ ನಂತರದ ಗಂಭೀರ ಸಮಸ್ಯೆಗಳಲ್ಲಿ ಒಂದಾದ ಅರಣ್ಯವಾಸಿಗಳ ಸಮಸ್ಯೆ ಬಗೆಹರಿಸುವ ದಿಶೆಯಲ್ಲಿ ಬಂದಿರುವ ಅರಣ್ಯ ಹಕ್ಕು ಕಾಯಿದೆ ಅನುಷ್ಠಾನದಲ್ಲಿ ಸರಕಾರ ವಿಫಲವಾಗುತ್ತಿರುವದು ವಿಷಾದಕರ ಎಂದು ಅವರು ಹೇಳಿದರು.
ಅತಿಕ್ರಮಣದಾರರ ದಿನನಿತ್ಯ ಸಮಸ್ಯೆ:
ಅರಣ್ಯಾಧಿಕಾರಿಗಳಿಂದ ದೌರ್ಜನ್ಯ ನಿರಂತರ ಜರಗುತ್ತಿದ್ದರೇ, ವನ್ಯ ಜೀವಿಗಳಿಂದ ಬೆಳೆ ರಕ್ಷಣೆಗೆ ಸರಕಾರ ಕಾರ್ಯ ಪ್ರವತ್ತರಾಗದಿರುವದು, ಅತೀವೃಷ್ಠಿಯಿಂದ ವಾಸ್ತವ್ಯ ಇಮಾರತು ದುರಸ್ಥಿಗಳಿಗೆ ಅವಕಾಶ ನೀಡದಿರುವದು, ಬೆಳೆಸಾಲ, ಬೆಳೆ ವಿಮೆಯಿಂದ ಅರಣ್ಯವಾಸಿಗಳನ್ನು ಪರಿಗಣಿಸದೇ ಇರುವದು ಖೇದಕರ ಎಂದು ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ತಾಲೂಕ ವೇದಿಕೆ ಅಧ್ಯಕ್ಷ ಶಿವಾನಂದ ಜೋಗಿ ವಹಿಸಿದ್ದರು. ಸಭೆಯಲ್ಲಿ ಅಲ್ಲಾಭಕ್ಷ ಇಮಾಮಸಾಬ, ಮಹೇಶ ಹುಲಿ, ರಾಮ ಯಂಕ ನಾಯ್ಕ, ಮೌನೇಶಪ್ಪ ಕಮ್ಮಾರ, ವೆಂಕಟೇಶ ಕರ್ಜಗಿ, ಶೈಲಾ ಶೇಟ್ ಮುಂತಾದವರು ಉಪಸ್ಥಿತರಿದ್ದರು.
Be the first to comment