ಜಿಲ್ಲಾ ಸುದ್ದಿಗಳು
ಬಾಗಲಕೋಟೆ: ಕೋವಿಡ್ ಮಹಾಮಾರಿ ತಡೆಗೆ ಜಿಲ್ಲೆಯಾದ್ಯಂತ ಹಮ್ಮಿಕೊಂಡ ಲಸಿಕಾಕರಣದಲ್ಲಿ ಮೊದಲ ಡೋಜ್ ಲಸಿಕೆಯಲ್ಲಿ ಬಾಗಲಕೋಟೆ ಜಿಲ್ಲೆ ಶೇ.100 ರಷ್ಟು ಗುರಿ ಸಾಧಿಸಿದೆ. ಸಾಧನೆಗೆ ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ ಅಭಿನಂದಿಸಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಶುಕ್ರವಾರ ಕೋವಿಡ್-19 ಹರಡದಂತೆ ಕ್ರಮ ಹಾಗೂ ಲಸಿಕಾಕರಣದಲ್ಲಿ ಸಾಧಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಾಗಲಕೋಟೆ ಜಿಲ್ಲೆಗೆ ಒಟ್ಟು 13,62,231 ಕೋವಿಡ್ ಮೊದಲ ಲಸಿಕೆ ಗುರಿ ನೀಡಲಾಗಿತ್ತು. ಈ ಗುರಿ ಸಾಧನೆಗೆ ಶ್ರಮಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಇತರೆ ಇಲಾಖೆಗಳ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರ ಕಾರ್ಯವನ್ನು ಕಳಸದ ಶ್ಲಾಘನೆ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಹಾಗೂ ಜಿ.ಪಂ ಸಿಇಓ ಟಿ.ಭೂಬಾಲನ್ ಅವರು ಸಹ ಗುರಿ ತಲುಪಿಸುವಲ್ಲಿ ಕಾಲ ಕಾಲಕ್ಕೆ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಇದರ ಫಲವಾಗಿ ಇಂದು ಕೋವಿಡ್ ಲಸಿಕಾಕರಣದಲ್ಲಿ ಶೇ.100 ಸಾಧಿಸಲು ಸಾಧ್ಯವಾಗಿದೆ. ಲಸಿಕಾಕರಣ ಪ್ರಗತಿಯಲ್ಲಿ ಬಾಗಲಕೋಟೆ ಜಿಲ್ಲೆ ರಾಜ್ಯಕ್ಕೆ 4 ಸ್ಥಾನದಲ್ಲಿರುವುದಾಗಿ ತಿಳಿಸಿದರು. ಎರಡನೇ ಡೋಸ್ ಲಸಿಕೆಯಲ್ಲಿಯೂ ಶೇ.78.21 ರಷ್ಟು ಪ್ರಗತಿ ಸಾಧಿಸಿದ್ದು, ಶೇ.100 ರಷ್ಟು ಪೂರ್ಣಗೊಳಿಸಲು ತಿಳಿಸಿದರು. ಕೋವಿಡ್ ಲಸಿಕೆ ಪೂರೈಕೆಯಲ್ಲಿ ಏನಾದರು ತೊಂದರೆ ಇದ್ದಲ್ಲಿ ಸರಿಪಡಿಸುವುದಾಗಿ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ಮಾತನಾಡಿ ಡಿಸೆಂಬರ 16ಕ್ಕೆ ಕೋವಿಡ್ ಮೊದಲ ಡೋಸ್ ಲಸಿಕೆಯಲ್ಲಿ ಶೇ.100 ಸಾಧನೆ ಮಾಡಿಲಾಗಿದ್ದು. ಒಟ್ಟು 13,62,231 ಜನರಿಗೆ ಮೊದಲ ಡೋಸ್ ಲಸಿಕೆ ನೀಡುವ ಮೂಲಕ ಗುರಿ ತಲುಪಲಾಗಿದೆ. ಅಲ್ಲದೇ 10,65,265 ಜನರಿಗೆ ಎರಡನೇ ಡೋಸ್ ನೀಡುವ ಮೂಲಕ ಶೇ.78.21 ರಷ್ಟು ಪ್ರಗತಿ ಸಾಧಿಸಿದ್ದು, 17,107 ಜನರಿಗೆ ಮಾತ್ರ ಬಾಕಿ ಇರುತ್ತದೆ. ಅದು ಕೂಡಾ ಶೇ.100ಕ್ಕೆ ತಲುಪಲಿದೆ. ಜಿಲ್ಲೆಯಲ್ಲಿ 74,600 ಡೋಸ್ ಕೋವಿಶಿಲ್ಡ, 36,450 ಕೋವ್ಯಾಕ್ಸಿನ್ ಲಸಿಕೆ ಸಂಗ್ರಹವಿರುವುದಾಗಿ ಸಭೆಗೆ ತಿಳಿಸಿದರು.
ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮಾತನಾಡಿ ಜಿಲ್ಲೆಯಲ್ಲಿ ಕೋವಿಡ್‍ನಿಂದ ಮೃತಪಟ್ಟ ಬಿಪಿಎ ಕಾರ್ಡ ಇದ್ದವರಿಗೆ 1.50 ಲಕ್ಷ ರೂ.ಗಳ ಪರಿಹಾರ ನೀಡಲಾಗುತ್ತಿದ್ದು, ಎಪಿಎಲ್ ಕಾರ್ಡ ಇದ್ದವರಿಗೆ 50 ಸಾವಿರ ರೂ.ಗಳ ಪರಿಹಾರವನ್ನು ಸರಕಾರ ಘೋಷಿಸಿದ್ದು, ಈ ಪೈಕಿ ಜಿಲ್ಲೆಯಲ್ಲಿ ಈಗಾಗಲೇ 141 ಬಿಪಿಎಲ್ ಹಾಗೂ 123 ಎಪಿಎಲ್ ಕಾರ್ಡ ಹೊಂದಿದವರಿಗೆ ಪರಿಹಾರಧನವನ್ನು ನೀಡಿರುವುದಾಗಿ ತಿಳಿಸಿದರು. ಈಗಾಗಲೇ ತುಳಸಿಗೇರಿ ಮಾರುತೇಶ್ವರ ದೇವಸ್ಥಾನದ ಕಾರ್ತಿಕೋತ್ಸವವನ್ನು ದರ್ಶನಕ್ಕೆ ಮಾತ್ರ ಸೀಮಿತಗೊಳಿಸಿ ಉಳಿದ ಎಲ್ಲ ಕಾರ್ಯಗಳಿಗೆ ನಿಷೇಧಿಸಿ ಆದೇಶ ಹೊರಡಿಸಿರುವುದಾಗಿ ತಿಳಿಸಿದರು.
ಸಭೆಯಲ್ಲಿ ಜಿ.ಪಂ ಸಿಇಓ ಟಿ.ಭೂಬಾಲನ್, ಯುಕೆಪಿ ವಿಶೇಷ ಜಿಲ್ಲಾಧಿಕಾರಿ ಸೋಮಲಿಂಗ ಗೆನ್ನೂರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಉಪ ವಿಭಾಗಾಧಿಕಾರಿ ಎಂ.ಗಂಗಪ್ಪ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಆಯಾ ತಾಲೂಕಿನ ತಹಶೀಲ್ದಾರರು ಉಪಸ್ಥಿತರಿದ್ದರು.
Be the first to comment