ರಾಜ್ಯ ಸುದ್ದಿಗಳು
ದೇವನಹಳ್ಳಿ
ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆ ಹಿನ್ನಲೆಯಲ್ಲಿ ದೇವನಹಳ್ಳಿ ತಾಲೂಕಿನಾದ್ಯಂತ ಇರುವ ಒಕ್ಕಲಿಗ ಮತದಾರರು ಬೆಳಿಗ್ಗೆ ೭ ರಿಂದಲೇ ಮತಗಟ್ಟೆ ಕೇಂದ್ರದ ಕಡೆಗೆ ಆಗಮಿಸಿ ಮತವನ್ನು ಚಲಾಯಿಸಿದರು.ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪರವಾಗಿ ಬೆಂಬಲಿಗರು ದೇವನಹಳ್ಳಿ ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದ 100 ಮೀಟರ್ ಅಂತರದಲ್ಲಿ ಪೆಂಡಾಲ್‌ಗಳನ್ನು ಹಾಕಿಕೊಂಡು ಮತದಾರರಿಗೆ ಆಯಾ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಮನವಿ ಮಾಡಿದರು. ಇಡೀ ರಸ್ತೆ ವಾಹನ ಸಂಚಾರದಿಂದ ಕೂಡಿರುವುದರಿಂದ ರಸ್ತೆಯಲ್ಲಿ ಕೆಲ ಕಾಲ ವಾಹನಗಳು ನಿಧಾನಗತಿಯಲ್ಲಿ ಸಂಚರಿಸುವಂತೆ ಆಯಿತು. ಒಕ್ಕಲಿಗ ಸಮುದಾಯದ ಮತದಾರರು ಒಬ್ಬೊಬ್ಬರೇ ಮತಗಟ್ಟೆಗೆ ತೆರಳಿ ತಮ್ಮ ಆಯ್ಕೆ ಆಭ್ಯರ್ಥಿಗಳಿಗೆ ಮತದಾನ ಮಾಡಿದರು.
ಒಟ್ಟು ೧೪೧ ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿರುವುದರಿಂದ ಒಬ್ಬರು ೧೫ ಅಭ್ಯರ್ಥಿಗಳಿಗೆ ಮಾತ್ರ ಮತ ಚಲಾವಣೆ ಮಾಡುವ ಅವಕಾಶ ಇದ್ದಿದ್ದರಿಂದ ಮತದಾರರು ಚೀಟಿ ಮೂಲಕ ತಮ್ಮ ಆಯ್ದ ಅಭ್ಯರ್ಥಿಗಳ ಕ್ರಮಸಂಖ್ಯೆಯನ್ನು ಬರೆದುಕೊಂಡು ಮತಗಟ್ಟೆ ಕೇಂದ್ರಕ್ಕೆ ಹೋಗಿ ತಮ್ಮ ಮತವನ್ನು ಚಲಾಯಿಸಿದರು. ಇನ್ನೂ ರಸ್ತೆಯಲ್ಲಿ ಜನರ ಜಂಗುಳಿ ತಪ್ಪಿಸಲು ಸಂಚಾರಿ ಪೊಲೀಸರು ಮತ್ತು ದೇವನಹಳ್ಳಿ ಪೊಲೀಸರನ್ನು ನೇಮಿಸಲಾಗಿತ್ತು. ಕೆಲವು ಕಡೆಗಳಲ್ಲಿ ಬ್ಯಾರಿಗೇಟ್‌ಗಳನ್ನು ಅಳವಡಿಸಲಾಗಿತ್ತು. ಮತಗಟ್ಟೆಗೆ ಕೇವಲ ಮತದಾರರಿಗೆ ಮಾತ್ರ ಪ್ರವೇಶವಿತ್ತು. ಯುವ ಮಹಿಳೆಯರು, ಯುವಕರು ಮತ್ತು ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮತಪ್ರಚಾರದಲ್ಲಿ ತೊಡಗಿಕೊಂಡಿದ್ದು ಗಮನಸೆಳೆಯಿತು. ಬರುವ ಮತದಾರರಿಗೆ ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಈ ಸಂದರ್ಭದಲ್ಲಿ ಮತದಾನ ಕೇಂದ್ರಕ್ಕೆ ಶಾಸಕ ಎಲ್.ಎನ್.ನಾರಾಯಣಸ್ವಾಮಿ ಭೇಟಿ ನೀಡಿ ಮತದಾರರು ಮತ್ತು ಮುಖಂಡರಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿ, ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಹಿನ್ನಲೆಯಲ್ಲಿ ದೇವನಹಳ್ಳಿ ತಾಲೂಕಿನ ಒಕ್ಕಲಿಗ ಬಾಂಧವರು ಆಗಮಿಸಿ ಯಾವುದೇ ಅಹಿತಕರ ಘಟನೆ ಆಗದಂತೆ ತಮ್ಮ ಮತವನ್ನು ಚಲಾಯಿಸಿ, ಉತ್ತಮವಾದ ಅಭ್ಯರ್ಥಿಯನ್ನು ಆಯ್ಕೆ ಮಾಡಿ, ಸಂಘವನ್ನು ಉನ್ನತಮಟ್ಟಕ್ಕೆ ತೆಗೆದುಕೊಂಡು ಹೋಗುವ ಕೆಲಸವನ್ನು ಮಾಡಬೇಕು. ರಾಜ್ಯಮಟ್ಟದಲ್ಲಿರುವ ಒಕ್ಕಲಿಗರ ಸಂಘ ಮತ್ತಷ್ಟು ಬಲಗೊಂಡು ಸಾಮಜದಲ್ಲಿ ಹಿಂದುಳಿದ ವರ್ಗಗಳ, ಬಡವರ ಪರವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
Be the first to comment