ಶಾಂತಿಯುತವಾಗಿ ಜರುಗಿದ ಪರಿಷತ್ ಚುನಾವಣೆ:ಮತಗಟ್ಟೆಗಳಿಗೆ ಡಿಸಿ ರಾಜೇಂದ್ರ ಭೇಟಿ ಪರಿಶೀಲನೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ: ಅವಳಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಗೆ ಜಿಲ್ಲೆಯಾದ್ಯಂತ ಶುಕ್ರವಾರ ಮತದಾನ ಜರುಗಿದ್ದು, ಜಿಲ್ಲೆಯಲ್ಲಿ ಸ್ಥಾಪಿಸಲಾದ ವಿವಿಧ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಭೇಟಿ ನೀಡಿ ಪರಿಶೀನಲೆ ನಡೆಸಿದರು.

ಜಿಲ್ಲೆಯ ಜಮಖಂಡಿ ತಾಲೂಕಿನ ಯಲ್ಲಟ್ಟಿ, ಹುನ್ನೂರ, ಚಿಮ್ಮಡ, ಬರಕವಿ-ಬನಹಟ್ಟಿ ಸೇರಿದಂತೆ ವಿವಿದೆಡೆ ತೆರಳಿ ಮತದಾನ ಪ್ರಕ್ರಿಯೆಯನ್ನು ಪರಿಶೀಲಿಸಿದರು. ಮತಗಟ್ಟೆಯಲ್ಲಿ ಮತದಾನ್ಕಕೆ ಕಲ್ಪಿಸಲಾದ ವ್ಯವಸ್ಥೆಯನ್ನು ವೀಕ್ಷಿಸಿದರು. ಕೋವಿಡ್ ಮಾರ್ಗಸೂಚಿಯಂತೆ ಪ್ರತಿ ಮತಗಟ್ಟೆ ಎದುರಿಗೆ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತಗಟ್ಟೆಗೆ ಬರುವ ಮತದಾರರ ಸ್ಯಾನಿಟೈಜರ್, ಥರ್ಮಲ್ ಸ್ಕ್ರೀನಿಂಗ್ ಮಾಡುತ್ತಿರುವದನ್ನು ಪರಿಶೀಲಿಸಿದರು.

ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಸಹ ಬಾದಾಮಿ ತಾಲೂಕಿನ ಕಟಗೇರಿ, ಹಲಕುರ್ಕಿ, ನಂದಿಕೇಶ್ವರ, ಪಟ್ಟದಕಲ್ಲ, ಐಹೊಳೆ, ಚಿತ್ತರಗಿ, ರಾಂಪೂರನಲ್ಲಿ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ಪರಿಶೀಲನೆ ಮಾಡಿದರು.

ಮತದಾನ ಬೆಳಿಗ್ಗೆ 8 ರಿಂದ ಪ್ರಾರಂಭಗೊಂಡಿದ್ದು, ಕೇವಲ ಗ್ರಾಮ ಪಂಚಾಯತಿ ಸದಸ್ಯರು, ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರುಗಳಿಗೆ ಮಾತ್ರ ಮತ ಚಲಾವಣೆ ಮಾಡಲು ಅವಕಾಶ ವಿರುವದರಿಂದ ಜಿಲ್ಲೆಯಲ್ಲಿ ಸ್ಥಾಪಿಸಲಾದ ಪ್ರತಿ ಮತಗಟ್ಟೆಯಲ್ಲಿ ಸದ್ದು ಗದ್ದಲವಿಲ್ಲದೇ ಮತದಾನ ಮಾಡುತ್ತಿರುವುದು ಕಂಡುಬಂದಿತು. ಮಾದ್ಯಮ ತಂಡ ವೀಕ್ಷಣೆಗೆ ತೆರಳಿದಾಗ ತಾಲೂಕಿನ ಸೀಮಿಕೇರಿಯಲ್ಲಿ ಬೆಳಿಗ್ಗೆ 10 ಗಂಟೆ ವೇಳೆ ಯಾವುದೇ ಮತದಾರ ಮತ ಚಲಾಯಿಸಿರಲಿಲ್ಲ. ಈ ಮತಗಟ್ಟೆಯಲ್ಲಿ ಚುನಾವಣಾಧಿಕಾರಿಗಳು ಮತದಾರರ ಬರುವಿಕೆಗೆ ಕಾಯುತ್ತಿದ್ದರು.

ಯಡಹಳ್ಳಿ ಗ್ರಾಮಕ್ಕೆ ತೆರಳಿದಾಗ ಮತಗಟ್ಟೆ ನಂ.317ರಲ್ಲಿ ಒಟ್ಟು 15 ಮತಗಳ ಪೈಕಿ 5 ಜನ ಮಾತ್ರ ಮತ ಚಲಾಯಿಸಿದ್ದರು. ಅನಗವಾಡಿ ಗ್ರಾಮ ಪಂಚಾಯತಿ ಸ್ಥಾಪಿಸಲಾದ ಮತಗಟ್ಟೆಯಲ್ಲಿ 16 ಮತದಾರರ ಪೈಕಿ 9, ಜಾನಮಟ್ಟಿಯಲ್ಲಿ 11 ಪೈಕಿ 8 ಹಾಗೂ ಮಧ್ಯಾಹ್ನ ಬೀಳಗಿ ಪಟ್ಟಣ ಪಂಚಾಯತಿಯಲ್ಲಿ ಸ್ಥಾಪಿಸಲಾದ ಮತಗಟ್ಟೆಯಲ್ಲಿ ಒಟ್ಟು 24 ಮತಗಳ ಪೈಕಿ 15 ಮತಗಳು ಚಲಾಯವಣೆಯಾಗಿರುವುದು ಕಂಡುಬಂದಿತು.

ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಸೇರಿ ಈ ಚುನಾವಣೆಗೆ ಬೆಳಿಗ್ಗೆ 10 ಗಂಟೆ ಹೊತ್ತಿಗೆ ಶೇ.10.46 ರಷ್ಟು ಮತದಾನವಾಗಿದ್ದು, 12 ಗಂಟೆಗೆ ಶೇ.41.11 ರಷ್ಟು ಮತದಾನವಾಗಿದ್ದು ಕಂಡುಬಂದಿತು. ಜಿಲ್ಲಾಡಳಿತ ಮತದಾನಕ್ಕೆ ಎಲ್ಲ ರೀತಿಯ ಕ್ರಮಕೈಗೊಂಡಿತ್ತು. ಮತಗಟ್ಟೆಗಳಿಗೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

Be the first to comment

Leave a Reply

Your email address will not be published.


*