ಇದು ರೇಷನ್ ಅಕ್ಕಿನಾ….. ಅಥವಾ ಪ್ಲಾಸ್ಟಿಕ್ ಅಕ್ಕಿನಾ….!!! ನೀರಿನಲ್ಲಿ ತೇಲುತ್ತಿವೆ, ಬೆಂಕಿ ಹಚ್ಚಿದರೆ ಹೊತ್ತಿ ಉರಿಯುತ್ತವೆ…!

ವರದಿ: ಸುಚಿತ್ರಾ ನಾಯ್ಕ, ಹೊನ್ನಾವರ

ಜಿಲ್ಲಾ ಸುದ್ದಿಗಳು 

ಅಂಕೋಲ:

CHETAN KENDULI

ತಾಲೂಕಿನ ಅಗಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಡಿತರ ವ್ಯವಸ್ಥೆಯಡಿ ನೀಡಲಾದ (ರೇಶನ್) ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿಯೂ ಮಿಶ್ರಣಗೊಂಡಿದೆ. ಎಂಬ ಅನುಮಾನ ವ್ಯಕ್ತಪಡಿಸಿದ ಸಾರ್ವಜನಿಕರು , ಗ್ರಾಪಂ ಎದುರು ಜಮಾವಣೆಗೊಂಡು ಪ್ಲಾಸ್ಟಿಕ್ ಅಕ್ಕಿ ಪೂರೈಕೆ ಸಂಶಯದ ವಿರುದ್ಧ ಸ್ಪಷ್ಟನೆ ನೀಡುವಂತೆ ಆಗ್ರಹಿಸಿದ್ದಾರೆ.

ಸುದ್ದಿ ತಿಳಿಯುತ್ತಲೇ ಆಹಾರ ನಿರೀಕ್ಷಕರು ಹಾಗೂ ತಂಡದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ತಹಶೀಲ್ದಾರ ಹಾಗೂ ಸಂಬಂಧಿಸಿದ ಹಿರಿಯ ಅಧಿಕಾರಿಗಳ ಸೂಚನೆ ಹಿನ್ನೆಲೆಯಲ್ಲಿ ಅಕ್ಕಿ ಮಾದರಿ ಸಂಗ್ರಹಿಸಿ, ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲು ಸಿಧ್ಧತೆ ಕೈಗೊಂಡಿದ್ದಾರೆ ಎನ್ನಲಾಗಿದೆ.

ಕೆಲವು ದಿನಗಳ ಹಿಂದೆ ನೀಡಲಾಗಿದ್ದ ರೇಶನ್ ಅಕ್ಕಿಯನ್ನು ಹಲವರು ಒಯ್ದು ಊಟಕ್ಕೆ ಬಳಕೆ ಮಾಡಿದ್ದಾರೆ. ಆದರೆ ಆ ಅಕ್ಕಿ ಜೊತೆ ಸ್ವಲ್ಪ ಪ್ರಮಾಣದಲ್ಲಿ ಬೇರೆ ರೀತಿ ಇರುವ ಅಕ್ಕಿಯನ್ನೇ ಹೋಲುವ ಬಣ್ಣ ಮತ್ತು ಗಾತ್ರದಲ್ಲಿ ಸ್ವಲ್ಪ ಬೇರೆ ಎನಿಸುವ ವಸ್ತು ದೊರಕಿದ್ದು ಇದು ನೈಸರ್ಗಿಕ ಅಕ್ಕಿಯೇ ಅಥವಾ ಪ್ಲಾಸ್ಟಿಕ್ ಅಕ್ಕಿಯೇ ಎನ್ನುವ ಅನುಮಾನ ಕೆಲವರಲ್ಲಿ ಕಾಡಿದಂತಿದೆ. ಅವು ನೀರಿನಲ್ಲಿ ತೇಲುತ್ತಿವೆ, ಬೆಂಕಿ ಹಚ್ಚಿದರೆ ಹೊತ್ತಿ ಉರಿಯುತ್ತಿದೆ ಎಂಬ ಇತರೆ ರೀತಿಯ ಪರೀಕ್ಷೆಗಳನ್ನು ಕೆಲವರು ಸ್ವತಃ ಕೈಗೊಂಡು ಪ್ಲಾಸ್ಟಿಕ್ ಅಕ್ಕಿ ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.

ಅಂಕೋಲಾ ಹೊರತುಪಡಿಸಿ ಬೇರೆ ತಾಲೂಕುಗಳಲ್ಲಿಯೂ ಬಿಸಿಯೂಟದ ಅಕ್ಕಿ ಜೊತೆ ಈ ರೀತಿಯ ಮಿಶ್ರಣದ ಅಕ್ಕಿಯು ಸೇರಿದೆ ಎನ್ನಲಾಗಿದ್ದು , ಅದನ್ನು ಸೇವಿಸಿದವರಿಗೆ ಯಾವುದೇ ರೀತಿಯ ಹಾನಿಯಾದ ವರದಿಯಾಗಿಲ್ಲ.

ಆಹಾರ ನಿರೀಕ್ಷಕ ಸಂತೋಷ ಯಳಗದ್ದೆ, ಆಹಾರ ಇಲಾಖೆಯ ಉಪ ನಿರ್ದೇಶಕರಿಗೆ ವಿಡಿಯೋ ಕಾಲ್ ಮಾಡಿ ಮಾಹಿತಿ ನೀಡಿದರು. ಈ ವೇಳೆ ಮಾತನಾಡಿದ ಉಪನಿರ್ದೇಶಕರು ಬಿಸಿಯೂಟಕ್ಕೆ ನೀಡುವ ಅಕ್ಕಿ ಸಹ ಇದೇ ರೀತಿ ಇರುತ್ತದೆ. ರೇಷನ್ ಅಕ್ಕಿ ಮತ್ತು ಬಿಸಿಯೂಟದ ಅಕ್ಕಿ ಒಂದೇ ಗೋದಾಮಿನಲ್ಲಿ ಸಂಗ್ರಹಿಸಿಟ್ಟ ಕಾರಣ ಕೆಲ ಚೀಲಗಳು ಅದಲಿ ಬದಲಿ ಆಗಿರಬಹುದು. ಶುಕ್ರವಾರ ತಾವೇ ಖುದ್ದಾಗಿ ಬಂದು ಪರಿಶೀಲಿಸುತ್ತೇವೆ ಎಂದರು. ಪೌಷ್ಟಿಕಾಂಶ ಕೊರತೆ ಇರುವ ಮಕ್ಕಳಲ್ಲಿ ವಿಟಮಿನ್, ಕಬ್ಬಿಣಾಂಶ,ಪೋಲಿಕ್ ಆಸಿಡ್ ಮೊದಲಾದ ಪೋಷಕಾಂಶಗಳನ್ನು ಒದಗಿಸಲು ಭಾರತೀಯ ಆಹಾರ ನಿಗಮದಿಂದ ಬಿಸಿಯೂಟದ ಅಕ್ಕಿಯಲ್ಲಿ ಈ ರೀತಿ ಮಿಶ್ರಣ ಮಾಡಿ ನೀಡಲಾಗುತ್ತಿದೆ ಎಂಬ ಮಾಹಿತಿ ಇದೆ.

ನೀರಿನಲ್ಲಿ ತೇಲುತ್ತದೆ (ಹಗುರ ) ಅದಕ್ಕಾಗಿ ಇದು ಪ್ಲಾಸ್ಟಿಕ್ ಅಕ್ಕಿ ಎಂದು ಕೆಲವರು ತಪ್ಪಾಗಿ ಭಾವಿಸಿರುವ ಸಾಧ್ಯತೆಯೂ ಇದೆ ಅಂತೆಯೇ ಪ್ಲಾಸ್ಟಿಕ್ ಅಕ್ಕಿ ಆಗಿರುವುದರಿಂದಲೇ ಬೆಂಕಿ ಹಾಕಿದಾಗ ಹೊತ್ತಿಕೊಳ್ಳುತ್ತದೆ ಎನ್ನುವ ಅಭಿಪ್ರಾಯ ಕೆಲವರದ್ದು.ಒಟ್ಟಿನಲ್ಲಿ ತಾಲೂಕಿನಲ್ಲಿ ಸದ್ದು ಮಾಡಿದ ಪ್ಲಾಸ್ಟಿಕ್ ಅಕ್ಕಿ ವಿಚಾರಕ್ಕೆ ಸಂಬಂಧಿಸಿದಂತೆ ಆಯಾ ಇಲಾಖೆಗಳು, ಮತ್ತು ಮುಖ್ಯಸ್ಥರು ಜನಸಾಮಾನ್ಯರಲ್ಲಿರುವ ಆತಂಕ ದೂರ ಮಾಡಬೇಕಿದೆ.

ಈ ಸಂದರ್ಭದಲ್ಲಿ ಅಗಸೂರು ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಚಂದ್ರ ನಾಯ್ಕ,ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಾಲಚಂದ್ರ ನಾಯಕ , ಪ್ರಮುಖರಾದ ಗೋಪಾಲ್ ನಾಯಕ ಅಡ್ಲೂರು,ತುಳಸು ಗೌಡ, ಪುಟ್ಟು ಗೌಡ ಸೇರಿದಂತೆ ಸ್ಥಳೀಯ ಮುಖಂಡರು ನಾಗರಿಕರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*