ತೋವಿವಿಯ 13ನೇ ಸಂಸ್ಥಾಪನಾ ದಿನಾಚರಣೆ:ತೋಟಗಾರಿಕೆ ಬೆಳೆಯಿಂದ ರೈತರ ಬಾಳು ಸಮೃದ್ದಿ : ಶಂಕರ‌ ಬಿದರಿ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ : ಕೃಷಿ ಪ್ರಧಾನ ನಮ್ಮ‌ ದೇಶದಲ್ಲಿ ಶ್ರಮವಹಿಸಿ ದುಡಿದರು ಆರ್ಥಿಕವಾಗಿ ಸಬಲರಾಗುತ್ತಲ್ಲ. ಚಿಕ್ಕ ಚಿಕ್ಕ ಜಮೀನಿನಲ್ಲಿಯೇ ತೋಟಗಾರಿಕೆ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸಬಲರಾಗಬೇಕೆಂದು ನಿವೃತ್ತ ಮಹಾ ನಿರ್ದೇಶಕ ಶಂಕರ ಬಿದರಿ ಹೇಳಿದರು.



ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ನೂತನ ಸಭಾಭವನದಲ್ಲಿ ಹಮ್ಮಿಕೊಂಡ 13ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತೋಟಗಾರಿಕೆ ವಿವಿಯಲ್ಲ‌ ಪದವಿ ಪಡೆದ ವಿದ್ಯಾರ್ಥಿಗಳು ರೈತರ ಜಮೀನಿನತ್ತ ತಮ್ಮ ನಡಿಗೆ ಪ್ರಾರಂಭಿಸಿ ಹಳೆಯ ಕಾಲದ ಪದ್ದತಿಯಿಂದ ಕೃಷಿ ಮಾಡುತ್ತಿರುವ ರೈತರನ್ನು ತೋಟಗಾರಿಕೆ ತೋಟಗಾರಿಕೆಯತ್ತ ಗಮನ ಹರಿಸಿ ಇದರಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿಸಬೇಕೆಂದರು.

ವೈದ್ಯಕೀಯ, ಇಂಜಿನೀಯರಿಂಗ್ ಮುಗುಸಿ ಪ್ರಸಿದ್ದ ವೈದ್ಯ, ಪ್ರಸಿದ್ದ ಇಂಜಿನೀಯರ್ ಆಗುವಂತೆ ನೀವು ಕೂಡಾ ಮಾದರಿಯ ರೈತರಾಗಿ ಅನ್ನದಾತರಾಗಬೇಕು. ನಿಮ್ಮಲ್ಲಿರುವ ಕೌಶಲ್ಯತೆಯನ್ನು ಉಪಯೋಗಿಸಿಕೊಂಡು ವಿವಿಧ ಅವಿಷ್ಕಾರಗಳ ಮೂಲಕ ತೋಟಗಾರಿಕೆಯನ್ನು ಅಭಿವೃದ್ಧಿ ಪಡಿಸಬೇಕು ಎಂದರು.

ಮೊದಲು ನಮ್ಮ‌ ಪ್ರಯತ್ನದಿಂದ‌ ಮೇಲೆ ಬರಬೇಕು. ನಾವು ಆರ್ಥಿಕವಾಗಿ , ಸಾಮಾಜಿಕವಾಗಿ ಮುಂದೆ ಬಂದಾಗ ದೇಶ ತನ್ನಿಂದ ತಾನೆ ಮುಂದು ಬರುತ್ತದೆ. ಕೇವಲ ಮುಖ್ಯಮಂತ್ರಿ. ಮಂತ್ರಿಗಳು, ಶಾಸಕರು, ಸಂಸದರು, ಅಧಿಕಾರಿಗಳಿಂದ ಇಡೀ‌‌ ದೇಶ ಸುಧಾರಿಸಲು ಆಗುವದಿಲ್ಲ ಎಂದ ಅವರು ಸರಕಾರ‌ ಅಕ್ಕಿ ಕೊಟ್ಟ ಮಾತ್ರಕ್ಕೆ ನೀವು ದುಡಿಯಬೇಡಿ ಅಂಥ ಎಲ್ಲೂ ಹೇಳಿಲ್ಲ. ನಿಮ್ಮ‌ ದುಡಿತದ‌ ಜೊತೆಗೆ ಸರಕಾರದ‌ ಸಣ್ಣ ಪ್ರಯತ್ನ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು‌ ಎಂದರು.

ಜಗತ್ತಿನ ಚಿಕ್ಕ ಚಿಕ್ಕ ರಾಜ್ಯಗಳಾದ ದುಬೈ, ಇಸ್ರೇಲ್ ನಮ್ಮ ಜಿಲ್ಲೆಯ ಎರಡು ತಾಲೂಕಿನಷ್ಟಿವೆ. ಅಲ್ಲಿ ಸಮೃದ್ದ ತೋಟಗಾರಿಕೆಗೆ ಹೆಸರಾಗಿವೆ. ಚಿಕ್ಕ ರಾಷ್ಟ್ರಗಳು ಇಷ್ಟೊಂದು ಪ್ರಗತಿಯಲ್ಲರಬೇಕಾದರೆ ದೊಡ್ಡ ರಾಷ್ಟ್ರ ಕೃಷಿ ಪ್ರಧಾನವಾದ ನಮ್ಮ ದೇಶ ಯಾಕೆ ಆಗುತ್ತಿಲ್ಲ. ಇಲ್ಲಿ ಇಚ್ಚಾಶಕ್ತಿಯ ಕೊರತೆ ಇದೆ.ಒಬ್ಬರಿಗೊಬ್ಬರು ಅವಲಂಬಿತರಾಗಿ ದುಡಿದಾಗ ಅಭಿವೃದ್ಧಿ ಸಾದ್ಯವೆಂದರು.

ಬಾಗಲಕೋಟೆ ತೋಟಗಾರಿಕೆಗೆ ಪ್ರಸಿದ್ದಿ ಪಡೆದಿದ್ದು, ಅವಳಿ ಜಿಲ್ಲೆಗಳಾದ ದಾಳಿಂಬೆ, ಚಿಕ್ಕು, ಲಿಂಬೆ, ದ್ರಾಕ್ಷಿ ಹಾಗೂ ಬಾಳೆ ಹಣ್ಣುಗಳು ವಿಶೇಷ‌ ಸ್ಥಾನಮಾನ ಪಡೆದಿವೆ. ಇಲ್ಲಿ ಬೆಳೆದ ಹಣ್ಣಿನ ಬೆಳೆಗಳನ್ನು ಮಾರುಕಟ್ಟೆಗೆ ತಲುಪಿಸುವ ಅನುಭವ ರೈತರಿಗಿಲ್ಲದೇ ದಲ್ಲಾಳಿಗಳ ಪಾಲಾಗುತ್ತಿದೆ ಎಂದರು.

 

ಈಗ ಸಾರಿಗೆ ವ್ಯವಸ್ಥೆ ಸರಿಯಾಗಿದ್ದು, ರೈತರು ತಾವು ಬೆಳೆದ ಹಣ್ಣುಗಳನ್ನು ಸರಿಯಾಗಿ ಪ್ಯಾಕ್ ಮಾಡಿ‌ ಬೆಂಗಳೂರು, ಹೈದ್ರಾಬಾದ್, ಗೋವಾ, ಪುಣೆ, ಹುಬ್ಬಳಿಯಂತಹ ನಗರಗಳಿಗೆ ಕೇವಲ 10 ರಿಂದ 12 ಗಂಟೆಯೊಳಗಾಗಿ ಮಾರುಕಟ್ಟೆಗೆ ತಲುಪಿಸಿ ಅಲ್ಲಿ ಸಿಗುವ ಹೆಚ್ಚಿನ ಬೆಲೆ ಪಡೆದು ಆರ್ಥಿಕವಾಗಿ ಪ್ರತಿಹೊಂದಬೇಕೆಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮುಖಮಂತ್ರಿಗಳ ಕಾರ್ಯದರ್ಶಿ ಡಾ.ಗಿರೀಶ ಹೊಸೂರ ಮಾತನಾಡಿ ಅವಳಿ ಜಿಲ್ಲೆಗಳಾದ ಬಾಗಲಕೋಟೆ-ವಿಜಯಪೂರದಲ್ಲಿ ತೋಟಗಾರಿಕೆ ಬೆಳೆಗಳನ್ನು ಅಧಿಕವಾಗಿ ಬೆಳೆಯುತ್ತಿದ್ದು, ಇಲ್ಲಿನ ಭೂಮಿ ಹಾಗೂ ನೀರಿನ ಗುಣಧರ್ಮದಿಂದ ಉಕೃಷ್ಟವಾದ ಹಣ್ಣುಗಳು ದೊರೆಯುತ್ತಿದ್ದು, ರೈತರು ಸರಕಾರದ ಯೋಜನೆಗಳನ್ನು ಬಳಸಿಕೊಂಡು ಹಣ್ಣಿನಿಂದ ತಂಪು ಪಾನಿಯಗಳನ್ನು ತಯಾರಿಸುವ ಘಟಕ ಸ್ಥಾಪಿಸಿ ಕೈಗಾರಿಕೆ ಕೂಡಾ ಬೆಳೆಯುವಂತೆ ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ತೋಟಗಾರಿಕೆ ವಿವಿಯ ಪ್ರಭಾರಿ ಕುಲಪತಿ ಡಾ.ಎಂ.ಎಸ್.ಕುಲಕರ್ಣಿ ಮಾತನಾಡಿದರು. ಪ್ರಾರಂಭದಲ್ಲು ತೋಟಗಾರಿಕೆಯ ವಿವಿಧ ಹಣ್ಣುಗಳ ಪ್ರದರ್ಶನವನ್ನು ವೀಕ್ಷಿಸಿದರು.

ಕಾರ್ಯಕ್ರಮದಲ್ಲಿ ತೋವಿವಿಯ ವ್ಯವಸ್ಥಾಪನಾ ಮಂಡಳಿಯ ಸದಸ್ಯರಾದ ಡಾ.ಎಂ.ಶಿವಮೂರ್ತಿ, ಬಿ.ಸುಮಿತ್ರಾದೇವಿ, ಡಾ.ಬಿ.ಟಿ.ಪ್ರಕಾಶ, ಡಾ.ಟಿ.ಬಿ.ಅಳ್ಳೊಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಡಾ.ಎಸ್.ಟಿ.ಅಥಣಿ ಸ್ವಾಗತಿಸಿದರೆ, ಡಾ.ಎನ್.ತಮ್ಮಯ್ಯ ವಂದಿಸಿದರು. ಡಾ.ವಸಂತ ಗಾಣಿಗೇರ ನಿರೂಪಿಸಿದರು.

Be the first to comment

Leave a Reply

Your email address will not be published.


*