ಜಿಲ್ಲಾ ಸುದ್ದಿಗಳು
ಶಿರಸಿ
ಜಿಲ್ಲಾದ್ಯಂತ ಇತ್ತೀಚಿನ ಅತೀವೃಷ್ಟಿ ಮಳೆಯಿಂದಾಗಿ ಸುಮಾರು ೧೦ ಸಾವಿರ ಎಕರೆಗೂ ಮಿಕ್ಕಿ ಬೆಳೆನಷ್ಟವಾಗಿದ್ದು, ಸರಕಾರವು ತಾಂತ್ರಿಕ ನೀತಿಯಡಿಯಲ್ಲಿ ನಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರ ಘೋಷಿಸದೇ, ಎಕರೆವಾರು ರೈತರು ಬೆಳೆಸಿದ ಪ್ರದೇಶದ ಅನ್ವಯವಾಗಿ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಬೇಕೆಂದು ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಸರಕಾರಕ್ಕೆ ಅಗ್ರಹಿಸಿದೆ. ಭೂಮಿ ಹಕ್ಕು ಹೋರಾಟಗಾರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಬೆಳೆ ನಷ್ಟಕ್ಕೆ ಉಂಟಾಗಿರುವ ಪ್ರದೇಶಗಳಿಗೆ ಇಂದು ಭೇಟಿ ನೀಡಿದ ಸಂದರ್ಭದಲ್ಲಿ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ನಿಯೋಗವು ಸರಕಾರಕ್ಕೆ ಮೇಲಿನಂತೆ ಅಗ್ರಹಿಸಿತು.
ಜಿಲ್ಲಾದ್ಯಂತ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಾದ ಭತ್ತ, ಅಡಿಕೆ, ಕಾಳುಮೆಣಸು, ಕಬ್ಬು, ಶುಂಠಿ, ಜೋಳ ಮುಂತಾದ ಬೆಳೆಗಳಿಂದ ರೈತರು ತೀವ್ರ ಆರ್ಥಿಕ ನಷ್ಟಕ್ಕೆ ಒಳಗಾಗಿದ್ದು ಸರಕಾರವು ಶೀಘ್ರ ರೈತರ ಸಮಸ್ಯೆಗೆ ಸ್ಫಂದಿಸಬೇಕೆAದು ನಿಯೋಗವು ಸರಕಾರಕ್ಕೆ ಒತ್ತಾಯಿಸಿತು. ಇತ್ತೀಚಿನ ೩ ವರ್ಷದಿಂದ ಅತೀವೃಷ್ಟಿಯಿಂದ ಉಂಟಾದ ಮನೆ ಮತ್ತು ಬೆಳೆಗಳಿಗೆ ಇಂದಿಗೂ ಪರಿಹಾರ ದೊರಕಿಸುವಲ್ಲಿ ಸರಕಾರ ವಿಫಲವಾಗಿರುವುದನ್ನು ನಿಯೋಗವು ತೀವ್ರವಾಗಿ ಖಂಡಿಸಿತು. ನಷ್ಟಕ್ಕೆ ಒಳಗಾಗಿರುವ ಭತ್ತದ ಬೆಳೆಗೆ ಇನ್‌ಪುಟ್ ಸಬ್ಸಿಡಿ ಅಂತ ಗುಂಟೆಗೆ ೬೮ ರೂಪಾಯಿ ಮಾತ್ರ ಕೊಡುವ ನೀತಿಯ ಬದಲಾಗಿ ಅತೀವೃಷ್ಟಿ ಸಂದರ್ಭದಲ್ಲಿ ವಿಶೇಷ ಪ್ಯಾಕೇಜ್ ನೀಡುವ ರೈತಪರ ನೀತಿ ಜಾರಿಗೆ ತರಬೇಕೆಂದು ಸರಕಾರಕ್ಕೆ ನಿಯೋಗವು ಒತ್ತಾಯಿಸಿತು.
ಅತಿಕ್ರಮಣದಾರರಿಗೂ ಪರಿಹಾರ:ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಜಿಪಿಎಸ್ ಕ್ಷೇತ್ರದಲ್ಲಿ ಅತೀವೃಷ್ಟಿಗೆ ಒಳಗಾದ ಬೆಳೆ ನಷ್ಟಕ್ಕೆ ಒಳಗಾಗಿರುವ ಅರಣ್ಯ ಅತಿಕ್ರಮಣದಾರರಿಗೂ ಬೆಳೆನಷ್ಟ ಪರಿಹಾರದ ವ್ಯಾಪ್ತಿಯಲ್ಲಿ ಒಳಪಡಿಸಬೇಕೆಂದು ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಸರಕಾರಕ್ಕೆ ಅಗ್ರಹಿಸಿದರು. ಈ ಸಂದರ್ಭದಲ್ಲಿ ನೆಹರೂ ನಾಯ್ಕ ಬಿಳೂರು, ಗಣೇಶ ನಾಯ್ಕ ಬಿಳೂರು, ಮಂಜು ನಾಯ್ಕ ಬಿಳೂರು, ಸುಜೇಂದ್ರ ನಾಯ್ಕ ಮತ್ತಿಹಳ್ಳ ಅವರು ಉಪಸ್ಥಿತರಿದ್ದರು.
Be the first to comment