ಜಿಲ್ಲಾ ಸುದ್ದಿಗಳು
ಹೊನ್ನಾವರ
ಪಟ್ಟಣದಿಂದ ಕೇವಲ 8 ಕಿಲೋ ಮೀಟರ್ ದೂರದಲ್ಲಿ ಹೊಸಾಕುಳಿ ಗ್ರಾಮವಿದ್ದು, ದಶಕಗಳಿಂದ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಸೇತುವೆ ನಿರ್ಮಿಸಿಕೊಡುವಂತೆ ಮನವಿ ಸಲ್ಲಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರಾದ ಚಿದಂಬರ ನಾಯ್ಕ ಬೇಸರ ವ್ಯಕ್ತಪಡಿಸಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಏಳು ದಶಕಗಳೇ ಕಳೆದರೂ ಇನ್ನೂ ಹೊಳೆಯಲ್ಲಿಯೇ ನಡೆದು ಸಾಗಬೇಕಾದ ದಯನೀಯ ಸ್ಥಿತಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಗ್ರಾಮವೊಂದಕ್ಕೆ ಇದೆ. ತಾಲ್ಲೂಕಿನ ಹೊಸಾಕುಳಿ ಗ್ರಾಮಕ್ಕೆ ಇದುವರೆಗೂ ಸಹ ಸೇತುವೆ (bridge) ಸಂಪರ್ಕವೇ ಇಲ್ಲವಾಗಿದ್ದು, ಪ್ರತಿನಿತ್ಯ ಶಾಲೆಗಳಿಗೆ ತೆರಳುವ ವಿದ್ಯಾರ್ಥಿಗಳು, ಕೆಲಸಕ್ಕೆ ತೆರಳುವ ಗ್ರಾಮಸ್ಥರು, ನದಿಯಲ್ಲಿ ನಡೆದುಕೊಂಡೇ ಸಾಗಬೇಕಾಗಿದೆ. ಗ್ರಾಮದಲ್ಲಿ ಸುಮಾರು 50 ಕುಟುಂಬಗಳು ವಾಸವಿದ್ದು, ಮಳೆಗಾಲದಲ್ಲಂತೂ ಇಡೀ ಗ್ರಾಮ ಹೊರಜಗತ್ತಿನಿಂದ ಸಂಪರ್ಕ ಕಡಿದುಕೊಳ್ಳುತ್ತದೆ. ಅದರಲ್ಲೂ ರೋಗಿಗಳು, ಗರ್ಭಿಣಿ ಮಹಿಳೆಯರನ್ನು ಆಸ್ಪತ್ರೆಗೆ ಸಾಗಿಸಲು ಹೊಳೆಯ ನೀರಿನಲ್ಲಿ ಹೊತ್ತುಕೊಂಡೇ ಸಾಗಬೇಕಾಗಿದ್ದು, ಗ್ರಾಮಕ್ಕೆ ಸೂಕ್ತ ರಸ್ತೆ ವ್ಯವಸ್ಥೆ ಸಹ ಇಲ್ಲವಾಗಿದೆ.
ಹುಟ್ಟಿದಾಗಿನಿಂದ ಸೇತುವೆಯನ್ನೇ ಕಾಣದೇ ಜೀವನ ಸಾಗಿಸಿಕೊಂಡು ಬಂದಿದ್ದು, ಜನಪ್ರತಿನಿಧಿಗಳು ಇನ್ನಾದರೂ ಇತ್ತ ಗಮನಹರಿಸಿ ಸೇತುವೆ ನಿರ್ಮಿಸಿಕೊಡಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಪುಟ್ಟ ಬಾಲಕಿಯೋರ್ವಳು ತಮ್ಮ ಗ್ರಾಮಕ್ಕೆ ಸೇತುವೆ ನಿರ್ಮಿಸಿಕೊಡುವಂತೆ ಕೈಮುಗಿದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್‌ಗೆ ಮನವಿ ಮಾಡಿಕೊಂಡಿದ್ದು, ಮನಕಲಕುವಂತಿದೆ.
ಸರ್ಕಾರ ಈಗಲಾದ್ರೂ ಗ್ರಾಮೀಣ ಭಾಗದ ಸಮಸ್ಯೆ ಏನೆಂದು ಆಲಿಸಿ, ಈ ಬಗ್ಗೆ ಗಮನಹರಿಸಿ ಜನರ ಸಮಸ್ಯೆ ಬಗೆಹರಿಸಬೇಕಿದೆ. ಇಲ್ಲಿನ ಜನರಿಗೆ ಮೂಲಭೂತ ಸೌಕರ್ಯಗಳ ಕೊರತೆ ತೀರಾ ಕೆಳಮಟ್ಟದಲ್ಲಿದೆ. ಪ್ರತಿಯೊಬ್ಬ ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳು, ಹಳ್ಳಿಗಳಿಗೆ ತೆರಳಿ ಇಂತಹ ಶೋಚನೀಯ ಪರಿಸ್ಥಿತಿಯನ್ನು ಮನಗಂಡು ಸಮಸ್ಯೆ ಬಗೆಹರಿಸುವಲ್ಲಿ ಬಹುಮುಖ್ಯ ಪಾತ್ರವಹಿಸಬೇಕಿದೆ. ಮುಂದಿನ ಮಳೆಗಾಲದ ಒಳಗೆ ಸೂಕ್ತ ಸೇತುವೆಯನ್ನು ನಮಗೆ ಕಲ್ಪಿಸುವ ವ್ಯವಸ್ಥೆ ಮಾಡಬೇಕು ಅನ್ನೋದು ಸ್ಥಳೀಯರ ಆಗ್ರಹವಾಗಿದೆ.
Be the first to comment