ರಾಜ್ಯ ಸುದ್ದಿಗಳು
ಬೆಂಗಳೂರು
ವಾಹನ ಸವಾರರೇ ಎಚ್ಚರ… ಎಚ್ಚರ… ನಗರದಲ್ಲಿ ಡಜನ್‌ಗಟ್ಟಲೇ ಗುಂಡಿಗಳು ಇವೆ. ಸ್ವಲ್ಪ ಯಾಮಾರಿದರೂ ಯಮರಾಯನ ಆತಿಥ್ಯ ಸ್ವೀಕರಿಸುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ. ದೇವನಹಳ್ಳಿ ಪಟ್ಟಣ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ೭ರ ಕೆಂಪೇಗೌಡ ವೃತ್ತದಿಂದ ರಾಣಿಸರ್ಕಲ್ ವರೆಗೆ ರಸ್ತೆ ಡಾಂಬರೀಕರಣ ಕಾಣದೆ ಅಡ್ಡಾದಿಡ್ಡಿಯಾಗಿ ಬೃಹತ್ ಗಾತ್ರದ ಗುಂಡಿಗಳು ಬಿದ್ದಿದ್ದು, ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಅವಘಡ ಗ್ಯಾರಂಟಿ.ಮಳೆಯಿಂದಾಗಿ ಗುಂಡಿಗಳದ್ದೇ ಮೇಲುಗೈ:- ಈಗಾಗಲೇ ಹಲವಾರು ಬಾರಿ ಸಂಬಂಧಪಟ್ಟ ಇಲಾಖೆಗಳಿಗೆ ರಸ್ತೆಡಾಂಬರೀಕರಣ ಮಾಡುವಂತೆ ನಾಗರೀಕರ ವಲಯ ಒತ್ತಾಯ ಮಾಡುತ್ತಲೇ ಬರುತ್ತಿದೆ. ಇದರ ಭಾಗವಾಗಿ ಇತ್ತೀಚೆಗಷ್ಟೇ ಜಿಲ್ಲಾಧಿಕಾರಿಗಳು ಸಹ ಭೇಟಿ ನೀಡಿ ರಾಷ್ಟ್ರೀಯ ಹೆದ್ದಾರಿ, ಪುರಸಭೆ ಮತ್ತು ಪಿಡಬ್ಲ್ಯೂಡಿ ಇಲಾಖೆಗಳಿಗೆ ಮಳೆ ನಿಂತ ನಂತರ ಕೂಡಲೇ ರಸ್ತೆ ದುರಸ್ಥಿಗೊಳಿಸಬೇಕು ಎಂದು ಸೂಚನೆ ಸಹ ನೀಡಿರುತ್ತಾರೆ. ಎಚ್ಚೆತ್ತುಕೊಂಡ ಇಲಾಖೆಗಳು ಆ ಸಂದರ್ಭದಲ್ಲಿ ಅಲ್ಪಸ್ವಲ್ಪ ಗುಂಡಿಗಳನ್ನು ಕಲ್ಲುಮಣ್ಣಿನಿಂದ ತುಂಬಿದ್ದರು. ಇದೀಗ ಸತತವಾಗಿ ಸುರಿಯುತ್ತಿರುವ ಮಳೆಗೆ ಕಲ್ಲುಮಣ್ಣು ಚೆಲ್ಲಾಪಿಲ್ಲಿಯಾಗಿ ರಸ್ತೆಯುದ್ದಕ್ಕೂ ಚಾಚಿಕೊಂಡಿವೆ. ದ್ವಿಚಕ್ರ ವಾಹನ ಸವಾರರು ಆಯಾ ತಪ್ಪಿದರೆ ಆಸ್ಪತ್ರೆಗೆ ಸೇರುವುದಂತೂ ಖಚಿತ.
ಅಭಿವೃದ್ಧಿ ಮಾತ್ರ ಶೂನ್ಯ:- ಒಂದು ಪಟ್ಟಣವೆಂದರೆ, ಅಲ್ಲಿ ಮೂಲ ಸೌಕರ್ಯ ಇರಲೇ ಬೇಕು. ಇಲ್ಲವೆಂದರೆ ಅದು ಪಟ್ಟಣ ಎನಿಸಿಕೊಳ್ಳುವುದಿಲ್ಲ. ಹೇಳಿಕೇಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಜಿಲ್ಲಾಡಳಿತ ಭವನ ಹೊಂದಿರುವ ದೇವನಹಳ್ಳಿ ತಾಲೂಕಿನಲ್ಲಿ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಪ್ರಾಣ ಲೆಕ್ಕಿಸದೆ ಸಂಚಾರ: ಮೂಲಸೌಕರ್ಯಗಳಲ್ಲಿ ಒಂದಾದ ರಸ್ತೆಯ ಅಭಿವೃದ್ಧಿ ಸುಮಾರು ವರ್ಷಗಳಿಂದ ಕನಸಾಗಿಯೇ ಇದೆ. ಇತ್ತ ದೇವನಹಳ್ಳಿ-ದೊಡ್ಡಬಳ್ಳಾಪುರ ಮಾರ್ಗದ ರಾಷ್ಟ್ರೀಯ ಹೆದ್ದಾರಿ ೨೦೭ರಲ್ಲಿ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ಆ ರಸ್ತೆಯಲ್ಲಿಯೂ ಸಹ ಡಜನ್‌ಗಟ್ಟಲೇ ಬ್ಲಾಕ್ ಸ್ಪಾಟ್‌ಗಳಿವೆ. ರಾತ್ರಿ ವೇಳೆಯಂತೂ ಈ ರಸ್ತೆಗಳಲ್ಲಿ ಸಂಚರಿಸುವುದೆಂದರೆ ಪ್ರಾಣವನ್ನು ಮುಷ್ಟಿಯಲ್ಲಿಟ್ಟುಕೊಂಡು ಹೋಗುವಂತೆ ಆಗಿದೆ. ನಗರದ ಹೃದಯ ಭಾಗದಲ್ಲಿರುವ ಹೊಸಬಸ್ ನಿಲ್ದಾಣದಿಂದ ಸೂಲಿಬೆಲೆ ರಸ್ತೆ ಮಾರ್ಗದಲ್ಲಿಯೂ ಸಹ ಇದೇ ಗೋಳು. ಕೇಳುವವರಿಲ್ಲದೆ, ಸಾರ್ವಜನಿಕರ ಸುಗಮ ಸಂಚಾರಕ್ಕೆ ರಸ್ತೆ ರಾಕ್ಷಸನಂತೆ ಎದ್ದುಕಾಣುತ್ತಿದೆ.
ಅನುದಾನ ಕೊರತೆ ನೆಪ: ಕಳೆದ ತಿಂಗಳಿನಲ್ಲಿ ಗುಂಡಿ ತಪ್ಪಿಸಲು ಹೋದಂತಹ ದ್ವಿಚಕ್ರ ವಾಹನ ಸವಾರರೊಬ್ಬರು ಆಯ ತಪ್ಪಿ ಕೆಸರಿನಲ್ಲಿ ಎದ್ದುಬಿದ್ದು ಹೋಗಿದ್ದಾರೆ. ವಯಸ್ಸಾದವರಿಗಂತೂ ಈ ರಸ್ತೆಯಲ್ಲಿ ಸಂಚಾರ ಕನಸಷ್ಟೇ, ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಈ ರಸ್ತೆ ಬಗ್ಗೆ ಕೇಳಿದರೆ, ಒಂದೆ ನೆಪ ಅನುದಾನದ ಕೊರತೆ ಎಂದು ಹೇಳುತ್ತಾರೆ. ಇಷ್ಟಕ್ಕೂ ಅನುದಾನ ಎಲ್ಲಿ ಹೋಗುತ್ತಿದೆ. ತೆರಿಗೆ ಹಣ ಯಾರ ಪಾಲಾಗುತ್ತಿದೆ. ಏನೇನು ಅಭಿವೃದ್ಧಿ ಪಡಿಸುತ್ತಿದ್ದಾರೆ ಎಂಬುವುದೇ ಸಾರ್ವಜನಿಕರ ಪ್ರಶ್ನೆಗೆ ಸಿಗದ ಉತ್ತರದಂತಾಗಿದೆ. ಹಳೇ ಬಸ್ ನಿಲ್ದಾಣದಲ್ಲಿ ನೋ ಸಿಗ್ನಲ್:- ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಹಳೇ ಬಸ್ ನಿಲ್ದಾಣದ ಮೂಲಕ ಬಜಾರ್ ರಸ್ತೆಗೆ ಹಲವಾರು ಕಡೆಗಳಿಂದ ಗ್ರಾಹಕರು ಬರುತ್ತಿರುತ್ತಾರೆ. ಇಲ್ಲಿ ಯಾವುದೇ ಸಿಗ್ನಲ್ ಇಲ್ಲದಿರುವುದರಿಂದ ಯದ್ವತದ್ವ ವಾಹನಗಳು ಸಂಚರಿಸುತ್ತಿರುತ್ತವೆ. ವಯಸ್ಸಾದವರು ಓಡಾಡಲು ಆಗುತ್ತಿಲ್ಲ. ನಾಮಫಲಕವೂ ಸಹ ಅಳವಡಿಸಿಲ್ಲ. ಬಸ್ ನಿಲ್ದಾಣದ ಜಾಗದಲ್ಲಿ ಯಾವುದೇ ಮೂಲ ಸೌಕರ್ಯವಿಲ್ಲ. ಇದರಿಂದ ಜನರು ತತ್ತರಿಸುವಂತೆ ಆಗಿದೆ.
ನಗರದಲ್ಲಿ ಎಲ್ಲೆಲ್ಲಿ ಎಷ್ಟೇಷ್ಟು ಗುಂಡಿಗಳು?ಪಟ್ಟಣದ ಟಿಪ್ಪುಸರ್ಕಲ್‌ನಿಂದ ಹೊಸಬಸ್ ನಿಲ್ದಾಣದವರೆಗೆ ಸುಮಾರು 20ಕ್ಕೂ ಹೆಚ್ಚು ಗುಂಡಿಗಳುಹೊಸಬಸ್ ನಿಲ್ದಾಣದಿಂದ ಹಳೇ ಬಸ್ ನಿಲ್ದಾಣದವರೆಗೆ 50ಕ್ಕೂ ಹೆಚ್ಚು ಗುಂಡಿಗಳುಹಳೇ ಬಸ್ ನಿಲ್ದಾಣದಿಂದ ವಿಜಯಪುರ ವೃತ್ತದವರೆಗೆ 70ಕ್ಕೂ ಹೆಚ್ಚು ಗುಂಡಿಗಳುವಿಜಯಪುರ ವೃತ್ತದಿಂದ ರಾಣಿಸರ್ಕಲ್ ವರೆಗೆ 50ಕ್ಕೂ ಹೆಚ್ಚು ಗುಂಡಿಗಳುವಿಜಯಪುರ ವೃತ್ತದಲ್ಲಿಯೇ ಬೃಹತ್ ಗಾತ್ರದ 2-3 ಗುಂಡಿಗಳುಹೊಸಬಸ್ ನಿಲ್ದಾಣದಿಂದ ಸೂಲಿಬೆಲೆ ರಸ್ತೆ ಮಾರ್ಗದಲ್ಲಿ ಸುಮಾರು 20ಕ್ಕೂ ಹೆಚ್ಚು ಗುಂಡಿಗಳು___ಪಟ್ಟಣ ಪ್ರದೇಶದೊಳಗೆ ಸಂಚರಿಸುವುದು ಬಲು ಕಷ್ಟ. ಅಡ್ಡಾದಿಡ್ಡಿಯಾಗಿ ಗುಂಡಿಗಳದ್ದೇ ಕಾರುಬಾರು. ಗುಂಡಿ ತಪ್ಪಿಸಲು ಹೋದರೆ ಅನಾಹುತಕ್ಕೆ ದಾರಿಯಾಗುತ್ತದೆ. ಗುಂಡಿಯಲ್ಲಿ ಇಳಿಸಿದರೆ ಪ್ರಾಣಕ್ಕೆ ಕುತ್ತು. ಯತೇಚ್ಛಗುಂಡಿ ಪ್ರದೇಶಗಳಲ್ಲಿ ಯಾವುದೇ ಜಾಗೃತಿ ಫಲಕಗಳಿಲ್ಲ. ದಿನನಿತ್ಯ ಕಣ್ಣಿಗೆ ಕಾಣದೆ ಸುಮಾರು ೫-೧೦ ಮಂದಿ ಗಾಯಗೊಳ್ಳುತ್ತಿದ್ದಾರೆ. ಸರಕಾರದ ಅಧೀನದಲ್ಲಿರುವ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. – ಬಿ.ನಾಗರಾಜ್ | ರಾಜ್ಯಾಧ್ಯಕ್ಷರು, ಪ್ರಜಾವಿಮೋಚನಾ ಬಹುಜನ ಸಮಿತಿ
Be the first to comment