ಜಿಲ್ಲಾ ಸುದ್ದಿಗಳು
ಬಾಗಲಕೋಟೆ: ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಅಸಂಘಟಿತ ವರ್ಗಗಳ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕಾರ್ಮಿಕರ ದತ್ತಾಂಶವನ್ನು ಸಿದ್ದಪಡಿಸಲು ಇ-ಶ್ರಮ್ ಪೋರ್ಟಲ್‍ನಲ್ಲಿ ಜಿಲ್ಲೆಯ ಎಲ್ಲ ಸಿ.ಎಸ್.ಸಿ ಕೇಂದ್ರಗಳಲ್ಲಿ ಉಚಿತವಾಗಿ ನೋಂದಣಿ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಅಸಂಘಟಿತ ಕಾರ್ಮಿಕರ ನೋಂದಣಿಗಾಗಿ ಕೇಂದ್ರ ಸರಕಾರ ಅಭಿವೃದ್ದಿ ಪಡಿಸಿರುವ ಸಮಗ್ರ ರಾಷ್ಟ್ರೀಯ ಡೇಟಾಬೇಸ್ ಸಿದ್ದಪಡಿಸಲು ನಿಟ್ಟಿನಲ್ಲಿ ಜರುಗಿದ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಆಧಾರ ಸಂಖ್ಯೆಗೆ ಜೋಡಣೆಯಾದ ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ದತ್ತಾಂಶವನ್ನು ಸಿದ್ದಪಡಿಸಲು ಕಾರ್ಮಿಕ ಹಾಗೂ ಉದ್ಯೋಗ ಮಂತ್ರಾಲಯವು ಇ-ಶ್ರಮ ಪೋರ್ಟಲ್ (www.eshram.gov.in) ಅಭಿವೃದ್ದಿ ಪಡಿಸಿದೆ ಎಂದು ತಿಳಿಸಿದರು.
ಯಾವ ವರ್ಗದವರಿಗೆ ಸೌಲಭ್ಯ
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು, ಕೃಷಿ ಕಾರ್ಮಿಕರು, ಮೀನುಗಾರರು, ಆಶಾ ಕಾರ್ಯಕರ್ತೆಯರು, ಮನೆಗೆಲಸ ಕಾರ್ಮಿಕರು, ಚಾಲಕರು, ಟೈಲರ್‍ಗಳು, ಬೀದಿಬದಿ ವ್ಯಾಪಾರಿಗಳು, ಸಣ್ಣ ಮತ್ತು ಅತೀ ಸಣ್ಣ ರೈತರು, ಪಶು ಸಂಗೋಪನಗಾರರು, ನೇಕಾರರು, ಬಡಗಿ ಕೆಲಸಗಾರರು, ಪೋಟೋಗ್ರಾಫರ್, ಕ್ಷೌರಿಕ, ತರಕಾರಿ, ಹಣ್ಣು ಮಾರಾಟಗಾರರು, ಪತ್ರಿಕಾ ಮಾರಾಟಗಾರರು, ಕೂಲಿ ಕಾರ್ಮಿಕರು (ನರೇಗಾ), ಅಂಗಡಿ ವ್ಯಾಪಾರಿಗಳು, ಚರ್ಮ ಕೈಗಾರಿಕಾ ಕಾರ್ಮಿಕರು, ಆನ್‍ಲೈನ್ ಸೇವಾ ಕಾರ್ಮಿಕರು, ಹೋಟೆಲ್ ಕಾರ್ಮಿಕರು, ಬೇಕರಿ ವ್ಯಾಪಾರಸ್ಥರು, ವಲಸೆ ಕಾರ್ಮಿಕ, ಮೆಕ್ಯಾನಿಕ್ ಕಾರ್ಮಿಕರು ಸೌಲಭ್ಯ ಪಡೆಯಬಹುದಾಗಿದೆ ಎಂದು ತಿಳಿಸಿದರು.
ನೋಂದಣಿಂದಾಗುವ ಪ್ರಯೋಜನ
ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಯೋಜನೆ, ದತ್ತಾಂಶವು ಸರ್ಕಾರಕ್ಕೆ ಅಸಂಘಟಿತ ಕಾರ್ಮಿಕರಿಗೆ ವಿಶೇಷ ನೀತಿಗಳು ಹಾಗೂ ಯೋಜನೆಗಳನ್ನು ರೂಪಿಸಲು, 1 ವರ್ಷದ ಅವಧಿಗೆ ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನೆಯಡಿ ಅಪಘಾತದಿಂದ ಮರಣ ಹೊಂದಿದಲ್ಲಿ ಅಥವಾ ಶಾಶ್ವತ ದುರ್ಬಲತೆ ಹೊಂದಿದಲ್ಲಿ 2 ಲಕ್ಷ ರೂ. ಹಾಗೂ ಭಾಗಶಃ ಅಂಗವೈಕಲ್ಯಕ್ಕೆ 1 ಲಕ್ಷ ರೂ. ಪರಿಹಾರ ಪಡೆಯಬಹುದಾಗಿದೆ. ರಾಷ್ಟ್ರೀಯ ವಿಪತ್ತು, ಕೋವಿಡ್ ಸಾಂಕ್ರಾಮಿಕ ಪಿಡುಗಿನಂತಹ ಪರಿಸ್ಥಿತಿಯಲ್ಲಿ ಅರ್ಹ ಕಾರ್ಮಿಕರಿಗೆ ನೆರವು ಪಡೆಯಲು ಸಹಾಯಕಾರಿಯಾಗಿದೆ ಎಂದು ತಿಳಿಸಿದರು.
ಸಿ.ಎಸ್.ಸಿ ಕೇಂದ್ರಗಳಲ್ಲಿ ಉಚಿತ ನೋಂದಣಿ
ಜಿಲ್ಲೆಯಲ್ಲಿರುವ 452 ಸಾಮಾನ್ಯ ಸೇವಾ ಕೇಂದ್ರ (ಸಿ.ಎಸ್.ಸಿ)ಗಳಿಗೆ ಭೇಟಿ ನೀಡಿ ಉಚಿತವಾಗಿ ನೋಂದಾಯಿಸಬಹುದಾಗಿದೆ. ನೋಂದಣಿಗೆ 16 ರಿಂದ 59 ವಯೋಮಿತಿ ಹೊಂದಿದವರಾಗಿರಬೇಕು. ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಆಧಾರ ಕಾರ್ಡ, ಆಧಾರ ಸಂಖ್ಯೆಗೆ ಜೋಡಣೆಯಾದ ಮೊಬೈಲ್ ನಂಬರ, ಬ್ಯಾಂಕ್ ಖಾತೆ ವಿವರ ಅವಶ್ಯವಾಗಿ ತೆಗೆದುಕೊಂಡು ಹೋಗಬೇಕು. ನೋಂದಣಿಗೆ ಡಿಸೆಂಬರ 31 ಕೊನೆಯ ದಿನವಾಗಿದೆ ಎಂದು ತಿಳಿಸಿದರು.
ಆಯಾ ಇಲಾಖೆಯಡಿ ಬರುವ ಅಸಂಘಟಿತ ವಲಯಗಳಲ್ಲಿ ಬರುವ ವಿವಿಧ ವರ್ಗದ ಕಾರ್ಮಿಕರ ನೋಂದಣಿಗೆ ಕ್ರಮವಹಿಸಬೇಕು. ಅಲ್ಲದೇ ವಿವಿಧ ಕಾರ್ಮಿಕರ ಹಾಗೂ ಅಸಂಘಿಟಿತ ವಲಯದ ಸಂಘಟನೆಗಳ ಸಹಕಾರ ಸಹ ಅಗತ್ಯವಾಗಿದೆ. ಕಾರ್ಮಿಕ ಮಕ್ಕಳ ಶಿಕ್ಷಣಕ್ಕೆ ಸರಕಾರ ಸಾಕಷ್ಟು ಸೌಲಭ್ಯಗಳಿದ್ದು, ಇದರ ಪ್ರಯೋಜನ ಪಡೆಯಲು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಬೆಳಗಾವಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಎಂ.ಬಿ.ಅನಸಾರಿ, ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಜಿಲ್ಲಾ ಕಾರ್ಮಿಕ ಅಧಿಕಾರಿ ಬಿ.ಆರ್.ಜಾದವ, ಲೋಕೋಪಯೋಗಿ ಮುಖ್ಯ ಇಂಜಿನೀಯರ್ ಪ್ರಶಾಂತ ಗಿಡದಾನಪ್ಪಗೋಳ, ಬಿಟಿಡಿಎ ಪುನರ್ವಸತಿ ಆಯುಕ್ತರು ಗಣಪತಿ ಪಾಟೀಲ, ನಗರಸಭೆ ಪೌರಾಯುಕ್ತ ಮುನಿಷಾಮಪ್ಪ, ಜಿಲ್ಲಾ ಬಾಲಕಾರ್ಮಿ ಸಂಸ್ಥೆಯ ಯೋಜನಾ ನಿರ್ದೇಶಕ ಸುಧಾಕರ ಬಡಿಗೇರ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
Be the first to comment