ಮಾತಾಡ್ ಮಾತಾಡ್ ಕನ್ನಡ ಅಭಿಯಾನ:ಜಿಲ್ಲಾಡಳಿತ ಭವನದಲ್ಲಿ ಮೊಳಗಿದ ಕನ್ನಡ ಗೀತ ಗಾಯನ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಕನ್ನಡ ಬಳಕೆಯ ಪ್ರತಿಜ್ಞಾವಿಧಿ ಸ್ವೀಕಾರ
ಇದೇ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಎನ್.ಹೇಮಾವತಿ ಅವರು ದೈನಂದಿನ ವ್ಯವಹಾರಗಳಲ್ಲಿ ಕನ್ನಡ ಭಾಷೆಯನ್ನು ಬಳಸುವ ಕುರಿತು ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಆಡಳಿತ, ಪತ್ರವ್ಯವಹಾರ ಸೇರಿದಂತೆ ಪ್ರತಿ ಸಂದರ್ಭದಲ್ಲೂ ಕನ್ನಡವನ್ನೇ ಬಳಸುವುದರ ಜತೆಗೆ ಕನ್ನಡ ನಾಡಿನಲ್ಲಿ ವಾಸಿಸುವ ಕನ್ನಡೇತರ ಭಾಷಿಕರಿಗೆ ಪ್ರೀತಿಯಿಂದ ಕನ್ನಡವನ್ನು ಕಲಿಸುವುದಾಗಿ ಎಲ್ಲರೂ ಪ್ರತಿಜ್ಞೆಯನ್ನು ಸ್ವೀಕರಿಸಿದರು.

ಜಿಲ್ಲೆಯಾದ್ಯಂತ ಸಂಭ್ರಮಿಸಿದ ಗೀತ ಗಾಯನ
ಜಿಲ್ಲೆಯಾದ್ಯಂತ ಲಕ್ಷ ಕಂಠಗಳ ಗೀತ ಗಾಯನ ಜರುಗಿತು. ಐತಿಹಾಸಿಕ ಸ್ಥಳಗಳಾದ ಬಾದಾಮಿ ಪಟ್ಟದಕಲ್ಲ, ಐಹೊಳೆ ದೇವಾಲಯಗಳ ಸಮುಚ್ಚಯದ ಆವರಣಗಳಲ್ಲಿ ಕೆಂಪು ಹಳದಿ ಬಾವುಟಗಳು ಮುಗಿಲೆತ್ತರಕ್ಕೆ ಹಾರಿಸುವ ಮೂಲಕ ಕನ್ನಡಾಭಿಮಾನವನ್ನು ಅನಾವರಣಗೊಳಿಸಿದರು. ಅಲ್ಲದೇ ಕೂಡಲಸಂಗಮ, ನಗರದ ಬಸವೇಶ್ವರ ವೃತ್ತ, ಜಮಖಂಡಿ ಪೋಲೋ ಆವರಣ, ಮುಧೋಳ ರನ್ನ ಕ್ರೀಡಾಂಗಣ ಸೇರಿದಂತೆ ವಿಶ್ವವಿದ್ಯಾಲಯ, ವಿವಿಧ ಶಾಲಾ-ಕಾಲೇಜು ಆವರಣಗಳಲ್ಲಿ ಕನ್ನಡ ಗೀತ ಗಾಯನ ಮೊಳಗಿಸಲಾಯಿತು.

ಬಾಗಲಕೋಟೆ : ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ಹಮ್ಮಿಕೊಂಡ ಲಕ್ಷ ಕಂಠಗಳ ಗೀತ ಗಾಯನ ಕಾರ್ಯಕ್ರಮ ಜಿಲ್ಲಾಡಳಿತ ಭವನದ ಮುಖ್ಯ ಆವರಣದಲ್ಲಿ ಗುರುವಾರ ಸಂಭ್ರಮದಿಂದ ನಡೆಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ ಸಾಮೂಹಿಕ ಕನ್ನಡ ಗೀತ ಗಾಯನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹಾಗೂ ಕನ್ನಡ ಪರ ಸಂಘಟನೆಗಳು ಪಾಲ್ಗೊಂಡು ಕನ್ನಡ ಕಳೆಗಟ್ಟುವಂತೆ ಮಾಡಿದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ ನೇತೃತ್ವದ ತಂಡ ನಾಡಗೀತೆ ಹಾಡುವುದರೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡು ಮೊದಲಿಗೆ ಕನ್ನಡದ ಶ್ರೇಷ್ಠತೆಯನ್ನು ಸಾರುವ ಡಾ.ಕುವೆಂಪುರವರ ಬಾರಿಸು ಕನ್ನಡ ಡಿಂಡಿಮವ, ಎರಡನೇದಾಗಿ ಡಾ.ಕೆ.ಎಸ್.ನಿಸಾರ ಅಹಮದ್‍ರವರ ಜೋಗದ ಸಿದಿ ಬೆಳಕಿನಲಿ ಹಾಗೂ ಮೂರನೇಯದಾಗಿ ಹಂಸಲೇಖರವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡಲನ್ನು ಸಾಮೂಹಿಕವಾಗಿ ಹಾಡಲಾಯಿತು.

ಕನ್ನಡ ಗೀತ ಗಾಯನ ಪ್ರಸ್ತುತ ಪಡಿಸುತ್ತಿದ್ದಂತೆ ಈಡೀ ಜಿಲ್ಲಾಡಳಿತ ಭವನದಲ್ಲಿ ಕನ್ನಡ ಕಳೆಗಟ್ಟಿತು. ಸಾವಿರಕ್ಕೂ ಹೆಚ್ಚು ಜನ ಹಾಡುವ ಮೂಲಕ ನಾಡು-ನುಡಿಯ ಪ್ರೇಮವನ್ನು ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ ಕನ್ನಡ ನಾಡು-ನುಡಿ ಸಾರುವ ಇತರೆ ಗೀತೆ ಗಾಯನ ಸಹ ಮೊಳಗಿದವು. ಶಿರೂರಿನ ಜಾನಪದ ಕಲಾವಿದೆ ಗುರಮ್ಮ ಸಂಕೀನ ಅವರು ತಮ್ಮ ಸ್ವರಚಿತ ಹಾಡನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದುಕೊಟ್ಟರು.

Be the first to comment

Leave a Reply

Your email address will not be published.


*