ವಸತಿ ನಿಲಯಕ್ಕೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಭೇಟಿ: ವಿದ್ಯಾರ್ಥಿಗಳ ಜೊತೆ ಚರ್ಚೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ವಸತಿ‌ ನಿಲಯದ ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿದರು. ಊಟದ ಗುಣಮಟ್ಟ, ಸ್ವಚ್ಛತೆ, ತಮ್ಮನ್ನು ಯಾವ ರೀತಿ ನೋಡಿಕೊಳ್ಳಲಾಗುತ್ತಿದೆ ಎನ್ನುವ ಮಾಹಿತಿ ಪಡೆದುಕೊಂಡು, ಅಧಿಕಾರಿಗಳಿಗೆ ನಿಮ್ಮ ಕುಟುಂಬದ ಸದಸ್ಯರಂತೆ ವಿದ್ಯಾರ್ಥಿಗಳನ್ನು ನೋಡಿಕೊಳ್ಳಬೇಕೆಂದು ಸೂಚಿಸಿದರು.

ಬಾಗಲಕೋಟೆ:ಹುನಗುಂದ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಸಮಾಜಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಂಗಳವಾರ ಭೇಟಿ ನೀಡಿ ಹಾಸ್ಟೆಲ್ ವ್ಯವಸ್ಥೆಯನ್ನು ಪರಿಶೀಲಿಸಿದರು.

ಬಾಲಕರ ವಸತಿನಿಲಯದಲ್ಲಿನ ಕಡತಗಳ,ಊಟದ ಮನೆ, ಅಡುಗೆಮನೆ ಪರಿಶೀಲಿಸಿ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಸಿಗುವ ಸೌಲಭ್ಯಗಳು ಸರಿಯಾಗಿ ಸಿಗುತ್ತಿರುವ ಬಗ್ಗೆ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದುಕೊಂಡರು.

ನಂತರ ಮಕ್ಕಳ ಜೊತೆ ಉಪಹಾರ ಸೇವಿಸಿ ಕುಂದುಕೊರತೆಗಳ ಬಗ್ಗೆ ವಿಚಾರಿಸಿದರು. ವಸತಿನಿಲಯಕ್ಕೆ ಅವಶ್ಯಕವಿರುವ ಕಾಂಪೌಂಡ್ ಮತ್ತು ಹೆಚ್ಚುವರಿ ಕೊಠಡಿಗಳ ಕುರಿತು ಪ್ರಸ್ಥಾವನೆ ಕಳುಹಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಿ ಗ್ರಂಥಾಲಯ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ತಿಳಿಸಿದರು.ವಸತಿ ನಿಲಯ ಪ್ರವೇಶ ಬಯಸಿ ಬರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯವ ವಿದ್ಯಾರ್ಥಿಗಳು ವಸತಿನಿಲಯದ ಪ್ರವೇಶದಿಂದ ವಂಚಿತರಾಗಬಾರದು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ,ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಮಂಜುನಾಥ ಡೊಂಬರ,ತಾಲೂಕಾ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರವಿ ಇದ್ದಲಗಿ,ತಾಲೂಕಾ ಹಿಂದುಳಿದ ಕಲ್ಯಾಣ ಇಲಾಖೆಯ ಅಧಿಕಾರಿ ಗುರು ಖ್ಯಾಡಿ,ಸಿಪಿಐ ಕೆ.ಹೊಸಕೇರಪ್ಪ,ಪುರಸಭೆ ಸದಸ್ಯ ಮಹೇಶ ಬೆಳ್ಳಿಹಾಳ,ವಿದ್ಯಾಧರ ಹುನಗುಂದ,ಕಲ್ಮೇಶ ಭಜಂತ್ರಿ,ಎಸ್.ಎಸ್.ಗಡೇದ,ಮಲ್ಲು ಚೂರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*