ರಾಜ್ಯ ಸುದ್ದಿಗಳು
ದೇವನಹಳ್ಳಿ
ತಾಲೂಕಿನ ಜಾಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರದೇಶನಹಳ್ಳಿ ಗ್ರಾಮದಲ್ಲಿ ಸುಮಾರು ವರ್ಷಗಳಿಂದಲೂ ಗ್ರಾಮದ ಪರಿಶಿಷ್ಟ ಜಾತಿ ಜನಾಂಗದವರಿಗೆ ಸ್ಮಶಾನವಿಲ್ಲದೆ ಪರಿದಾಡುವ ಪರಿಸ್ಥಿತಿ ಇದೆ. ಹೇಳಿ ಕೇಳಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಜಿಲ್ಲಾಡಳಿತ ಭವನದ ಕೂಗಳತೆ ದೂರದಲ್ಲಿರುವ ಅರದೇಶನಹಳ್ಳಿ ಗ್ರಾಮದಲ್ಲಿ ಸಾಕಷ್ಟು ಪ್ರಭಾವಿ ಮುಖಂಡರು ಇದ್ದರೂ ಸಹ ಇಂದಿಗೂ ಗ್ರಾಮದ ಪರಿಶಿಷ್ಟ ಜಾತಿ ಜನಾಂಗದವರಿಗೆ ಶವವನ್ನು ಹೂಳಲು ಸ್ಮಶಾನದ ಜಾಗ ಮತ್ತು ನಿವೇಶನ ರಹಿತರಿಗೆ ನಿವೇಶನ ಕಲ್ಪಿಸುವುದರಲ್ಲಿ ಜಿಲ್ಲಾಡಳಿತ ಮೌನವಹಿಸಿರುವುದು ಈ ಭಾಗದ ಎಸ್‌ಸಿ ಜನಾಂಗದವರ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಮಶಾನದ ಜಾಗಕ್ಕಾಗಿ ಸ್ಥಳೀಯ ಪರಿಶಿಷ್ಟ ಜಾತಿ ಜನಾಂಗದವರು ಸುಮಾರು ವರ್ಷಗಳಿಂದ ಪರದಾಡುತ್ತಿದ್ದು, ಇವರ ಗೋಳು ಕೇಳುವವರಿಲ್ಲದಂತಾಗಿದೆ. ಸ್ವಾತಂತ್ರ್ಯ ಬಂದು ೭೦ ವರ್ಷ ಕಳೆದರೂ ಸಹ ಕೆಲ ಗ್ರಾಮಗಳಲ್ಲಿ ಇಂದಿಗೂ ಸ್ಮಶಾನ ಮತ್ತು ಮೂಲ ಭೂತ ಸೌಕರ್ಯಗಳು ಕಲ್ಪಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಪ್ರತಿ ಗ್ರಾಮಕ್ಕೆ ಸ್ಮಶಾನ ಗುರ್ತಿಸುವ ಯೋಜನೆ ಸರಕಾರ ಜಾರಿಗೊಳಸಿದ್ದರೂ ಕೆಲ ಗ್ರಾಮಗಳಲ್ಲಿ ಸ್ಮಶಾನವೇ ಇಲ್ಲ. ಸರಕಾರದ ಗೋಮಾಳದ ಜಾಗವನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದು, ಇಂದಿಗೂ ಅರದೇಶನಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಜನಾಂಗದವರಿಗೆ ಸರಿಯಾದ ನಿವೇಶನವಾಗಲೀ, ಸ್ಮಶಾನವಾಗಲೀ, ಮೂಲಭೂತ ಸೌಕರ್ಯವಾಗಲೀ ಕಲ್ಪಿಸುವಲ್ಲಿ ಜಿಲ್ಲಾಡಳಿತ ಮೌನ ವಹಿಸಿದ್ದು, ಜನಪ್ರತಿನಿಧಿಗಳ ನಿರ್ಲಕ್ಷ್ಯ ದೋರಣೆ ಎದ್ದುಕಾಣುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೂಡಲೇ ಜಿಲ್ಲಾಧಿಕಾರಿಗಳು, ತಹಶೀಲ್ದಾರ್‌ರವರು, ಕಂದಾಯ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಿ, ಸ್ಥಳ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದರ ಮೂಲಕ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಅರದೇಶನಹಳ್ಳಿ ಗ್ರಾಮದ ಸಮೀಪದಲ್ಲಿರುವ ಬಸವನಪುರ ಗ್ರಾಮದ ಸರ್ವೇ ನಂ.೫೭ರಲ್ಲಿ ನಮ್ಮ ತಾತ ಮುತ್ತಾತನವರ ಕಾಲದಿಂದಲೂ ಇರುವ ಸ್ಮಶಾನದ ಜಾಗದಲ್ಲಿ ಶವವನ್ನು ಹೂಳುತ್ತಾ ಬಂದಿದ್ದೇವೆ. ಇದೀಗ ಸ್ಥಳೀಯ ಪ್ರಭಾವಿಗಳು ಆ ಜಾಗವನ್ನು ಕೃಷಿಯನ್ನಾಗಿ ಮಾರ್ಪಾಟು ಮಾಡಿರುವುದರಿಂದ ಸ್ಮಶಾನದ ಜಾಗಕ್ಕೆ ಕಿರಿಕಿರಿ ಉಂಟಾಗುತ್ತಿದೆ. ಈಗಿರುವ ಸ್ಮಶಾನದ ಜಾಗದಲ್ಲಿ ಶವವನ್ನು ಹೂಳಲು ಬಿಡುತ್ತಿಲ್ಲ. ಊರಿನಲ್ಲಿ ಪರಿಶಿಷ್ಟ ಜಾತಿಯ ಸುಮಾರು ೨೦-೨೫ ಮನೆಗಳಿದ್ದು, ೨೦೦-೨೫೦ ಜನರು ವಾಸಿಸುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ನಮಗೆ ಸೂಕ್ತ ಸ್ಮಶಾನದ ಜಾಗ ಮತ್ತು ನಿವೇಶನ ಕಲ್ಪಿಸಿಕೊಡಬೇಕು.– ಅನುಪಮ | ಗೃಹಿಣಿ, ಅರದೇಶನಹಳ್ಳಿ
ಸುಮಾರು ವರ್ಷಗಳಿಂದ ಜಾಲಿಗೆ ಸರ್ವೆ ನಂ.೫೭ರಲ್ಲಿ ಶವವನ್ನು ಹೂಳುತ್ತಿದ್ದೇವೆ. ಇವಾಗ ಈ ಜಮೀನು ಪೋಡಿ ಮಾಡಿಕೊಂಡು ನಮ್ಮದು ಜಮೀನು, ಸ್ಮಶಾನ ಇಲ್ಲ ಇಲ್ಲ. ನೀವು ಇಲ್ಲಿ ಹೂಳಬೇಡಿ, ಹಾಗೇನಾದರೂ ಮಾಡಿದ್ರೆ ಗಲಾಟೆ ಮಾಡುತ್ತೇವೆ. ಕಂಪ್ಲೇಟ್ ಮಾಡುತ್ತೇವೆ ಅಂತಾರೆ, ಆವಾಗಿನಿಂದಲೂ ಇಲ್ಲಿಯೇ ಶವವನ್ನು ದಫನು ಮಾಡಿಕೊಂಡು ಬರುತ್ತಿದ್ದೇವೆ. ತಹಶೀಲ್ದಾರ್, ಕಂದಾಯ ಅಧಿಕಾರಿಗಳಿಗೂ ಸಹ ಅರ್ಜಿಗಳನ್ನು ಸಲ್ಲಿಸಿದ್ದರೂ ಸಹ ಪ್ರಯೋಜನವಾಗಿಲ್ಲ. ಪ್ರತಿ ಸಲ ಶವ ಹೂಳಬೇಕಾದರೆ ಗಲಾಟೆ ಮಾಡುವ ಸಂದರ್ಭ ಇದೆ. ಗ್ರಾಮ ಪಂಚಾಯಿತಿಗೆ ಅರ್ಜಿ ಕೊಟ್ಟಿದ್ದರೂ ಸಹ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.– ಕುಮಾರ್ | ಗ್ರಾಮಸ್ಥ, ಅರದೇಶನಹಳ್ಳಿ
Be the first to comment