ಮೀನುಗಾರರ ಸಾಲ ಮನ್ನಾ ಗೊಂದಲ, ಮೂಗಿಗೆ ತುಪ್ಪ ಸವರಿತಾ ರಾಜ್ಯ ಸರಕಾರ ?

ವರದಿ:: ಪ್ರಶಾಂತ ಕುಮಾರ‌ ಉಡುಪಿ


       ಮೀನುಗಾರಿಕೆ


ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಮೀನುಗಾರರಿದ್ದಾರೆ. ಮೀನುಗಾರಿಕಾ ಚಟುವಟಿಕೆಗಳಿಗಾಗಿ ರಾಜ್ಯ ಸರಕಾರ ಹಲವು ವರ್ಷಗಳಿಂದಲೂ ಶೇ.2ರ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತಿತ್ತು. ಆದ್ರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧಿಕಾರವಧಿಯಲ್ಲಿ ಶೂನ್ಯ ಬಡ್ಡಿದರದಲ್ಲಿ ಸಾಲವಿತರಿಸಲು ಆದೇಶ ಹೊರಡಿಸಲಾಗಿತ್ತು. ಹೀಗಾಗಿಯೇ ಮೀನುಗಾರ ಮಹಿಳೆಯರು ಗುಂಪುಗಳನ್ನು ರಚಿಸಿಕೊಂಡು ತಲಾ 50,000 ರೂಪಾಯಿಯಂತೆ ಸಾಲ ಪಡೆದಿದ್ದಾರೆ. 2017-18 ಮತ್ತು 2018-19ನೇ ಸಾಲಿನಲ್ಲಿ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಒಟ್ಟು 23,507 ಮೀನುಗಾರರು ವಾಣಿಜ್ಯ ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಂದ ಸುಮಾರು 60 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ. ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ 2017-18 ಮತ್ತು 2018-19ನೇ ಸಾಲಿನಲ್ಲಿ ಮಾರ್ಚ್ 31ರ ವರೆಗೆ ಪಡೆದಿರೋ 50,000 ರೂಪಾಯಿ ವರೆಗಿನ ಸಾಲವನ್ನು ಮನ್ನಾ ಮಾಡಿ ಆದೇಶ ಹೊರಡಿಸಿದ್ದರು. 


ಅದರಂತೆಯೇ ಮೀನುಗಾರರು ತಮ್ಮ ಸಾಲ ಪಾವತಿ ಮಾಡುವುದನ್ನು ನಿಲ್ಲಿಸಿದ್ದಾರೆ. ಆದ್ರೆ ಸರಕಾರ ಮಾಡಿದ ಎಡವಟ್ಟು ಇದೀಗ ಮೀನುಗಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. 2018ರ ಡಿಸೆಂಬರ್ ಅಂತ್ಯದವರೆಗೆ ಶೇ.2ರ ಬಡ್ಡಿದರದಲ್ಲಿ ಮೀನುಗಾರರಿಗೆ ಸಾಲ ವಿತರಿಸಲಾಗಿದೆ.ಸರಕಾರದ ಹೊಸ ಆದೇಶದಂತೆ 2019ರ ಜನವರಿ ನಂತರ ಶೂನ್ಯ ಬಡ್ಡಿದರದಲ್ಲಿ ಸರಕಾರ ಸಾಲ ವಿತರಿಸಲಾಗುತ್ತಿದೆ. ಆದರೆ ಸರಕಾರದ ಸಾಲಮನ್ನಾ ಆದೇಶದಲ್ಲಿ ಶೇ.2ರ ಬಡ್ಡಿದರಲ್ಲಿ ಪಡೆದ ಸಾಲ ಅಂತಾ ಬರೆಯಲಾಗಿದ್ದು, ಶೂನ್ಯ ಬಡ್ಡಿದರದಲ್ಲಿ ಪಡೆದ ಸಾಲ ಅನ್ನೋದನ್ನು ಆದೇಶದಲ್ಲಿ ನಮೂದು ಮಾಡಿಲ್ಲ. ಹೀಗಾಗಿ ಅಧಿಕಾರಿಗಳು, ಬ್ಯಾಂಕುಗಳು, ಮೀನುಗಾರರ ಸಹಕಾರಿ ಸಂಘಗಳು ಸಾಲ ಮರುಪಾವತಿ ಮಾಡುವಂತೆ ಮೀನುಗಾರರ ಮೇಲೆ ಒತ್ತಡ ಹೇರುತ್ತಿವೆ.
ಇನ್ನೊಂದೆಡೆ 2017 -18ರ ಸಾಲಿನಲ್ಲಿ ಮೀನುಗಾರರು ಪಡೆದಿರೋ ಸಾಲದಲ್ಲಿ ಕೇವಲ 3 ರಿಂದ 4 ಕಂತುಗಳಷ್ಟೇ ಬಾಕಿ ಉಳಿದಿದೆ. ಆದರೆ 2019ರ ಜನವರಿಯಿಂದ ಮಾರ್ಚ್ ಅಂತ್ಯದ ವರೆಗೆ ನೀಡಲಾಗಿರೋ ಶೂನ್ಯ ಬಡ್ಡಿದರದ ಸಾಲದ ಮೊತ್ತವೇ ಜಾಸ್ತಿಯಿದೆ. ಸರಕಾರ 60 ಕೋಟಿ ರೂಪಾಯಿ ಸಾಲಮನ್ನಾ ಮಾಡಿದೆ. ಆದರೆ ಇದರಲ್ಲಿ ಶೂನ್ಯ ಬಡ್ಡಿದರದಲ್ಲಿ ಪಡೆದ ಸಾಲವೂ ಒಳಗೊಂಡಿದೆಯಾ ? ಇಲ್ಲಾ ಕೇವಲ ಶೇ.2ರ ಬಡ್ಡಿದರದಲ್ಲಿ ಪಡೆದ ಸಾಲವಷ್ಟೇ ಮನ್ನಾ ಆಗಲಿದ್ಯಾ ಅನ್ನೋ ಗೊಂದಲಕ್ಕೆ ಪರಿಹಾರ ಸಿಕ್ಕಿಲ್ಲ. ಒಂದೊಮ್ಮೆ ಶೇ.2ರ ಬಡ್ಡಿದರದಲ್ಲಿ ಪಡೆದ ಸಾಲವಷ್ಟೇ ಮನ್ನಾ ಆಗೋದಾದ್ರೆ 2019ರ ಮಾರ್ಚ್ ಅಂತ್ಯದ ವರೆಗಿನ ಸಾಲ ಮನ್ನಾ ಅಂತಾ ಆದೇಶದಲ್ಲಿ ನಮೂದಿಸಿದ್ಯಾಕೆ ಅನ್ನೋದು ನೊಂದ ಮೀನುಗಾರರ ಪ್ರಶ್ನೆ. ದುರಂತವೆಂದ್ರೆ ಶೂನ್ಯ ಬಡ್ಡಿದರದಲ್ಲಿ ಮೀನುಗಾರರಿಗೆ ಸಾಲ ನೀಡಿದ್ದರೂ ಕೂಡ ಶೇ.2 ರ ಬಡ್ಡಿದರವನ್ನು ಮೀನುಗಾರರಿಂದ ಬ್ಯಾಂಕುಗಳು ವಸೂಲಿ ಮಾಡಿವೆ.

ಕೈಚೆಲ್ಲಿ ಕುಳಿತ ಮೀನುಗಾರಿಕಾ ಸಚಿವರು
ಮೀನುಗಾರರ ಸಾಲ ಮನ್ನಾ ಕುರಿತು ಎದ್ದಿರೋ ಗೊಂದಲವನ್ನು ನಿವಾರಿಸುವಂತೆ ಮೀನುಗಾರರು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆಯಲ್ಲಿ ಸಚಿವರು ಆದೇಶದಲ್ಲಿ ಗೊಂದಲ ಇರುವುದು ನಿಜ. ಆದೇಶ ಹೊರಡಿಸುವಾಗ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ. ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಶೂನ್ಯ ಬಡ್ಡಿದರದಲ್ಲಿ ಸಾಲ ಪಡೆದವರ ಸಾಲವೂ ಮನ್ನಾ ಮಾಡುವ ಕುರಿತು ಹೊಸ ಆದೇಶ ಹೊರಡಿಸುವಂತೆ ಹೇಳುತ್ತೇನೆ ಅನ್ನೋ ಭರವಸೆಯನ್ನು ನೀಡಿದ್ದಾರೆ. ಆದರೆ ಹೊಸ ಆದೇಶ ಬರುವವರೆಗೆ ಸಾಲ ಮರುಪಾವತಿ ಮಾಡಬೇಕೇ ? ಬೇಡವೇ ಅನ್ನೋ ಗೊಂದಲವನ್ನು ನಿವಾರಿಸಿಲ್ಲ. 

ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ ಮೀನುಗಾರರು
ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ರೆ,. ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿಯೂ ಬಿಜೆಪಿ ಶಾಸಕರೇ ಆರಿಸಿಬಂದಿದ್ದಾರೆ. ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ 6 ವಿಧಾಸಭಾ ಕ್ಷೇತ್ರಗಳ ಪೈಕಿ 4 ಬಿಜೆಪಿ ಶಾಸಕರಿದ್ದಾರೆ. ಇಷ್ಟೊಂದು ಸಂಖ್ಯೆಯಲ್ಲಿ ಆಡಳಿತ ಪಕ್ಷದ ಶಾಸಕರೇ ಅಧಿಕಾರದಲ್ಲಿದ್ದರೂ ಕೂಡ ಮೀನುಗಾರರನ್ನು ಕಡೆಗಣಿಸಲಾಗುತ್ತಿದೆಯೆಂಬ ಆರೋಪ ಮೀನುಗಾರರ ವಲಯದಲ್ಲಿ ಕೇಳಿಬರುತ್ತಿದೆ. ಇದೀಗ ಮೀನುಗಾರರ ಅನುಕೂಲಕ್ಕಾಗಿ ಸಾಲಮನ್ನಾ ಯೋಜನೆ ಘೋಷಿಸಿದ್ದು, ಸರಕಾರ ಜಾಹೀರಾತುಗಳಿಗೆ ಕೋಟಿ ಕೋಟಿ ರೂಪಾಯಿ ವಿನಿಯೋಗಿಸುತ್ತಿದೆ. ಆದರೆ ಸಾಲಮನ್ನಾ ಯೋಜನೆಯಲ್ಲಿರೋ ಗೊಂದಲ ನಿವಾರಣೆ ಮಾಡೋದಕ್ಕೆ ಇಂದಿಗೂ ಮನಸ್ಸು ಮಾಡದಿರೋದು ವಿಪರ್ಯಾಸವೇ ಸರಿ. ಸಾಲಮನ್ನಾ ಯೋಜನೆಯಲ್ಲಿರೋ ಗೊಂದಲಗಳಿಗೆ ತೆರೆ ಎಳೆಯದೇ ಹೋದ್ರೆ ಹೋರಾಟಕ್ಕಿಳಿಯೋದಕ್ಕೆ ಮೀನುಗಾರರು ಸಜ್ಜಾದಂತಿದೆ. 

Be the first to comment

Leave a Reply

Your email address will not be published.


*