ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರಕಾರಿ ಸೌಲಭ್ಯ ಸಿಗುವಂತಾಗಬೇಕು : ತಹಶೀಲ್ದಾರ್ ಅನಿಲ್‌ಕುಮಾರ್ ಅರೋಲಿಕರ್ ಜಾಲಿಗೆ ಗ್ರಾಪಂನಲ್ಲಿ ಜಿಲ್ಲಾಧಿಕಾರಿ ನಡೆ-ಹಳ್ಳಿ ಕಡೆ ಕಾರ್ಯಕ್ರಮ

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಸಮಾಜದ ಕಟ್ಟೆಕಡೆಯ ವ್ಯಕ್ತಿಗೂ ಸರಕಾರದ ಸೌಲಭ್ಯ ಸಿಗುವಂತಾಗಬೇಕು. ಸರಕಾರದ ವಿವಿಧ ಸೌಲಭ್ಯಗಳನ್ನು ಇಲಾಖಾವಾರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಯಾರು ಸಹ ಸೌಲಭ್ಯದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಜಿಲ್ಲಾಧಿಕಾರಿ ನಡೆ-ಹಳ್ಳಿ ಕಡೆ ಕಾರ್ಯಕ್ರಮವನ್ನು ಇಡೀ ರಾಜ್ಯದಾದ್ಯಂತ ಮಾಡಲಾಗುತ್ತಿದೆ ಎಂದು ತಹಶೀಲ್ದಾರ್ ಅನಿಲ್‌ಕುಮಾರ್ ಅರೋಲಿಕರ್ ತಿಳಿಸಿದರು. 

CHETAN KENDULI

ದೇವನಹಳ್ಳಿ ತಾಲೂಕಿನ ಜಾಲಿಗೆ ಗ್ರಾಪಂ ಆವರಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮದ ಶ್ರೀ ರಾಮ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಸರಕಾರದ ಬಹು ನಿರೀಕ್ಷಿತ ಕಾರ್ಯಕ್ರಮದಲ್ಲಿ ಈ ಕಾರ್ಯಕ್ರಮವೂ ಸಹ ವಿನೂತನ ಕಾರ್ಯಕ್ರಮ ಇದಾಗಿದೆ. ಇದು ರಾಜ್ಯದಾದ್ಯಂತ ಪ್ರತಿ ಮೂರನೇ ಶನಿವಾರ ಪಂಚಾಯಿತಿ ಮಟ್ಟದಲ್ಲಿ ನಡೆಯುವಂತಹ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದ ಮೂಲ ಉದ್ದೇಶ ಎಲ್ಲರಿಗೂ ಸಹ ಸರಕಾರದ ಮೂಲ ಸವಲತ್ತುಗಳು ಸಿಗುವಂತಾಗಬೇಕು. ಯಾರು ಸಹ ವಂಚಿತರಾಗಬಾರದು. ಸರಕಾರದ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ದೊರೆಯುವಂತಾಗಬೇಕು. ಇದರಿಂದ ವಂಚಿತರಾದವರಿಗೆ ಸರಿಯಾದ ಭರವಸೆಯೊಂದಿಗೆ ನಿಮ್ಮಜೊತೆ ನಾವಿದ್ದೇವೆ ಎಂದು ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಅವರ ಸಮಸ್ಯೆಗಳಿಗೆ ಪರಿಹರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಗ್ರಾಮದ ವಿವಿಧ ಸಮಸ್ಯೆಗಳನ್ನು ಆಲಿಸುವುದು, ಎಲ್ಲಾ ಇಲಾಖೆಗಳಿಂದ ಸಿಗುವ ಸೌಲಭ್ಯಗಳ ಬಗ್ಗೆ ಜನರಿಗೆ ಮನದಟ್ಟು ಮಾಡುವಂತಹದ್ದು, ಫಲಾನುಭವಿಗಳಿಗೆ ಸವಲತ್ತು ವಿತರಿಸುವುದು. ಈಗಾಗಲೇ ಈ ಭಾಗದಲ್ಲಿ ಹಕ್ಕುಪತ್ರಗಳನ್ನು ನೀಡಲಾಗಿದೆ. ಜತೆಗೆ ಪಿಂಚಣಿ ಅದಾಲತ್ ಸಹ ಮಾಡಲಾಗಿದೆ. ಈ ದಿನವೂ ಸಹ ಪಿಂಚಣಿಯ ಫಲಾನುಭವಿಗಳಿಗೆ ಪಿಂಚಣಿ ಪತ್ರ ನೀಡಲಾಗುತ್ತಿದೆ ಎಂದರು. 

ಗ್ರಾಪಂ ಅಧ್ಯಕ್ಷೆ ದೀಪ್ತಿ ವಿಜಯ್‌ಕುಮಾರ್ ಮಾತನಾಡಿ, ಗ್ರಾಪಂನಲ್ಲಿ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಸಂತೋಷದ ಸಂಗತಿಯಾಗಿದೆ. ದೂರದ ತಾಲೂಕು ಕಚೇರಿಗೆ ಹೋಗಿ ತಿರುಗಾಡುವ ಈ ಭಾಗದ ಜನರಿಗೆ ಇಲ್ಲಿಯೇ ದಂಡಾಧಿಕಾರಿಗಳು ಸಿಗುತ್ತಿದ್ದಾರೆ. ಜತೆಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವಂತಹ ಸ್ಮಶಾನಗಳ ಜಾಗವನ್ನು ಸರ್ವೆ ಮಾಡಿಕೊಡಬೇಕು. ಸುಮಾರು ದಿನಗಳಿಂದ ಪ್ರತಿ ಗ್ರಾಮದಲ್ಲಿ ಸ್ಮಶಾನದ ಜಾಗವನ್ನು ಗುರ್ತಿಸಿಕೊಡಬೇಕು ಎಂದು ಮನವಿ ಮಾಡಿದರು. ಗ್ರಾಪಂ ಉಪಾಧ್ಯಕ್ಷ ಎಚ್.ಬಾಲಸುಬ್ರಮಣ್ಯ ಮಾತನಾಡಿ, ಜಾಲಿಗೆ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಸರಕಾರಿ ಶಾಲೆಗಳ ಉನ್ನತೀಕರಣ ಮತ್ತು ಅಭಿವೃದ್ಧಿಗೊಳಿಸಿಕೊಡಬೇಕು. ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗುತ್ತಿದೆ. ಅದಕ್ಕೆ ಕಡಿವಾಣ ಹಾಕಿಕೊಡಬೇಕು. ಗ್ರಾಪಂ ವ್ಯಾಪ್ತಿಯಲ್ಲಿ ಕೆರೆಗಳ ಅಭಿವೃದ್ಧಿ ಮಾಡಿಕೊಡಬೇಕು ಎಂದು ತಹಶೀಲ್ದಾರ್ ಅವರಿಗೆ ಮನವಿ ಮಾಡಿದರು. 

ಇದೇ ಸಂದರ್ಭದಲ್ಲಿ ದೇವನಹಳ್ಳಿ ತಾಲೂಕಿನ ಸರಕಾರಿ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗಳಲ್ಲಿ ದೊರೆಯುವ ಸೌಲಭ್ಯಗಳನ್ನು ಜನರಿಗೆ ತಿಳಿಸಿಕೊಟ್ಟರು. ಮಳಿಗೆಗಳ ಮೂಲಕ ಆರೋಗ್ಯ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ, ಪೋಷನ್ ಅಭಿಯಾನ್, ಶಿಕ್ಷಣ ಇಲಾಖೆಗಳ ಸೌಲಭ್ಯಗಳು ಮತ್ತು ಯೋಜನೆಗಳನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿತ್ತು. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಲಿಖಿತ ರೂಪದಲ್ಲಿ ತಹಶೀಲ್ದಾರ್ ಅವರಿಗೆ ಮತ್ತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಅಹವಾಲು ಸಲ್ಲಿಸಿದರು. ಈ ವೇಳೆಯಲ್ಲಿ ತಾಪಂ ಇಒ ಎಚ್.ಡಿ.ವಸಂತಕುಮಾರ್, ಡಿವೈಎಸ್‌ಪಿ ಟಿ.ರಂಗಪ್ಪ, ವಿಶ್ವನಾಥಪುರ ಪೊಲೀಸ್ ಠಾಣೆ ಪಿಎಸ್‌ಐ ವೆಂಕಟೇಶ್, ನಾಡ ಕಚೇರಿ ಉಪತಹಶೀಲ್ದಾರ್ ಚೈತ್ರ, ಗ್ರಾಮದ ಹಿರಿಯ ಮುಖಂಡ ಶ್ರೀರಾಮಣ್ಣ, ಗ್ರಾಪಂ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಪಂ ಸಿಬ್ಬಂದಿಗಳು, ಗ್ರಾಮಸ್ಥರು, ಇದ್ದರು.

Be the first to comment

Leave a Reply

Your email address will not be published.


*