ರಾಜ್ಯ ಸುದ್ದಿಗಳು
ಹುಬ್ಬಳ್ಳಿ:
ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳಿಂದ ವಶಕ್ಕೆ ಪಡೆದ ಮಾದಕ ವಸ್ತುವನ್ನು ಪೊಲೀಸರೇ ಮಾರಾಟ ಮಾಡುತ್ತಿದ್ದ ಗಂಭೀರ ಆರೋಪ ಕೇಳಿ ಬಂದಿದ್ದಲ್ಲದೇ, ಗಾಂಜಾ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದಾರೆ ಎಂಬ ಗಂಭೀರ ಆರೋಪದಡಿ ಎಪಿಎಂಸಿ-ನವನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸೇರಿದಂತೆ ಏಳು ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಿ ಪೊಲೀಸ್ ಆಯುಕ್ತ ಲಾಭೂರಾಮ್ ಆದೇಶ ಹೊರಡಿಸಿದ್ದಾರೆ.
ಎಪಿಎಂಸಿ – ನವನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ವಿಶ್ವನಾಥ ಚೌಗಲೆ, ಎಎಸ್‌ಐ ಕರಿಯಪ್ಪಗೌಡ, ಕಾನ್ಸ್ಟೇಬಲ್ಗಳಾದ ವಿಕ್ರಮ್ ಪಾಟೀಲ, ನಾಗರಾಜ, ಶಿವರಾಜ ಕುಮಾರ ಮೇತ್ರಿ ಹಾಗೂ ಗೋಕುಲ ರಸ್ತೆ ಠಾಣೆಯ ಮಹಿಳಾ ಕಾನ್ಸ್ಟೇಬಲ್ ದಿಲ್ಯಾದ, ಹೊನ್ನಪ್ಪನವರ ಎಂಬುವರನ್ನು ಅಮಾನತು ಮಾಡಲಾಗಿದೆ.
ಗಾಂಜಾ ಮಾರಾಟಗಾರರ ಕುರಿತು ಎಪಿಎಂಸಿ ಠಾಣೆ ಸಿಬ್ಬಂದಿಗೆ ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದರು. ಇದರ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದುಕೊಂಡು ಒಂದೂವರೆ ಕೆಜಿ ಗಾಂಜಾ ವಶಕ್ಕೆ ಪಡೆದಿದ್ದರು. ಆದರೆ, ಈ ಕುರಿತು ಪ್ರಕರಣ ದಾಖಲಿಸದ ಪೊಲೀಸರು, ಆರೋಪಿಗಳಿಂದ ಹಣ ಪಡೆದು ಕೇಸ್ ಕೈಬಿಟ್ಟಿದ್ದರು. ಜೊತೆಗೆ ವಶಪಡಿಸಿಕೊಂಡಿದ್ದ ಗಾಂಜಾವನ್ನು ತಾವೇ ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಈ ಹಿನ್ನೆಲೆಯಲ್ಲಿ ಡಿಸಿಪಿ ಕೆ.ರಾಮರಾಜನ್ ಅವರಿಗೆ ಪ್ರಕರಣದ ಕುರಿತು ತನಿಖೆ ಮಾಡಲು ಪೊಲೀಸ್ ಆಯುಕ್ತರು ಸೂಚಿಸಿದ್ದರು. ಡಿಸಿಪಿ ಸಲ್ಲಿಸಿದ ವರದಿಯ ಆಧಾರದ ಮೇಲೆ ಆಯುಕ್ತರು ಇನ್ಸ್ಪೆಕ್ಟರ್ ಸೇರಿ ಏಳು ಮಂದಿ ಪೊಲೀಸರನ್ನು ಅಮಾನತುಗೊಳಿಸಿದ್ದಾರೆ.
Be the first to comment