ಹಕ್ಕುಗಳ ಸಂರಕ್ಷಣೆಗೆ ಪ್ರಾಧಿಕಾರ ಬದ್ದ : ನ್ಯಾ.ದೇಶಪಾಂಡೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ : ದುರ್ಬಲ ವರ್ಗದವರಿಗೆ ಉಚಿತವಾಗಿ ಕಾನೂನು ಸೇವೆ ಹಾಗೂ ನೆರವನ್ನು ನೀಡುವ ಮೂಲಕ ಅವುಗಳ ಸಂರಕ್ಷಣೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಬದ್ದವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎಸ್.ದೇಶಪಾಂಡೆ ಹೇಳಿದರು.

ತಾಲೂಕಿನ ಸೀಮಿಕೇರಿ ಗ್ರಾಮದ ವಾಲ್ಮೀಕಿ ಸಮುದಾಯ ಭವನದಲ್ಲಿ ಶನಿವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಕೀಲರ ಸಂಘ ಹಾಗೂ ಸೀಮಿಕೇರಿ ಗ್ರಾ.ಪಂ ಸಹಯೋಗದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಹಮ್ಮಿಕೊಂಡ ಗಾಂಧೀಜಯಂತಿ ಆಚರಣೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತಮ ಸಮಾಜ ನಿರ್ಮಾಣಕ್ಕೆ ಕಾನೂನಿನ ಅರಿವು ಅಗತ್ಯವಾಗಿದ್ದು, ಜನಸಾಮಾನ್ಯರಿಗೆ ಕಾನೂನಿನ ಬಗ್ಗೆ ಅರಿವನ್ನುಂಟು ಮಾಡುವ ನಿಟ್ಟಿನಲ್ಲಿ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸರ್ವರಿಗೂ ಕಾನೂನು ಸೇವೆಯನ್ನು ಒದಗಿಸುವುದು ಪ್ರಾಧಿಕಾರದ ಉದ್ದೇಶವಾಗಿದ್ದು, ಪರಿಶಿಷ್ಟ ಜಾತಿ, ಪಂಗಡ, ಮಹಿಳೆ, ಮಕ್ಕಳು, ಕಾರ್ಮಿಕರು, ಗುಂಪು ಘರ್ಷಣೆ, ಗಲಭೆ, ಪ್ರವಾಹ, ಭೂಕಂಪ, ಕೈಗಾರಿಕೆ ವಿನಾಶ ಮುಂತಾದವುಗಳಿಗೆ ತುತ್ತಾದವರು, ದೌರ್ಜನ್ಯಕ್ಕೆ ಒಳಗಾದವರು ಸೇರಿದಂತೆ ವಾರ್ಷಿಕ ಆದಾಯ 3 ಲಕ್ಷ ರೂ.ಗಳ ಒಳಗೆ ಇರುವ ಎಲ್ಲ ವರ್ಗದ ಜನರಿಗೆ ಉಚಿತ ಕಾನೂನು ಸಲಹೆ ಮತ್ತು ನೆರವನ್ನು ನೀಡಲಾಗುತ್ತಿದ್ದು, ಇದರ ಉಪಯೋಗ ಪಡೆದುಕೊಳ್ಳಲು ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಹುಲ್ಲೂರ ಮಾತನಾಡಿ ಪ್ರಾಧಿಕಾರ ಇರುವ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲ. ಕಾನೂನಿನ ಅರಿವು ಅಗತ್ಯವಾಗಿದೆ. ಹಕ್ಕುಗಳು ಉಲ್ಲಂಘನೆಯಾಗದಂತೆ ಸಂರಕ್ಷಿಸುವ ಕೆಲಸವಾಗಬೇಕು. ಹಕ್ಕುಗಳನ್ನು ಪಡೆಯಲು ಪ್ರಾಧಿಕಾರಕ್ಕೆ ಅರ್ಜಿ ನೀಡಿದರೆ ಸಾಕು ಯಾವುದೇ ಶುಲ್ಕವಿಲ್ಲದೇ ನ್ಯಾಯ ಒದಗಿಸಲಾಗುತ್ತದೆ. ಬಡವರಿಗಾಗಿಯೇ ಉಚಿತವಾಗಿ ಕಾನೂನು ನೆರವು ನೀಡುವ ದೃಷ್ಠಿಯಿಂದ ಪ್ರಾಧಿಕಾರ ರಚಿಸಲಾಗಿದೆ. ಹಕ್ಕುಗಳನ್ನು ಪಡೆಯಲು ಉಚಿತ ನೆರವು ಒದಗಿಸಲಾಗುತ್ತದೆ ಎಂದು ತಿಳಿಸಿದರು.

ವಕೀಲರ ಸಂಘದ ಅದ್ಯಕ್ಷ ವಿ.ಬಿ.ಚೌಕಿಮಠ ಮಾತನಾಡಿ ಪ್ರತಿಯೊಬ್ಬರಿಗೂ ಅನ್ಯಾಯವಾದಲ್ಲಿ ಅದನ್ನು ಪ್ರತಿಭಟಿಸುವ ಹಾಗೂ ಹಕ್ಕು ಪಡೆಯಲು ಕಾನೂನಿ ಅರಿವು ಮುಖ್ಯವಾಗುತ್ತದೆ. ಸರಕಾರ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಿದ್ದು, ಪ್ರತಿಯೊಬ್ಬರಿಗೂ ಮುಟ್ಟಿದಾಗ ಮಾತ್ರ ರೂಪಿಸಿದ ಯೋಜನೆ ಯಶಸ್ವಿಯಾಗುತ್ತದೆ. ಮಗು ಹುಟ್ಟಿದ ಮೇಲೆ ಹೆಸರು ಬರಿಸಬೇಕು. ಸತ್ತ ಮೇಲೆಯು ಹೆಸರು ಬರೀಸುವ ಕೆಲಸವಾದಾಗ ಮಾತ್ರ ನಿಮಗೆ ಸಿಗುವ ಸವಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ತಮ್ಮ ಹಕ್ಕುಗಳಿಗೆ ಚ್ಯುತಿ ಹಾಗೂ ಅನ್ಯಾಯವಾದಲ್ಲಿ ಪ್ರಾಧಿಕಾರದ ಮೊರೆ ಹೋದಲ್ಲಿ ಉಚಿವರಾಗಿ ನೆರವು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿ.ಪಂ ಉಪಕಾರ್ಯದರ್ಶಿ ಅರಮೇಶ ನಾಯಕ ಮಾತನಾಡಿ ಉತ್ತಮ ಜೀವನಕ್ಕೆ ಕಾನೂನುಗಳ ಅರಿವು ಅಗತ್ಯವಾಗಿದೆ. ಸರ್ವರಿಗೂ ಕಾನೂನು ಒದಗಿಸುವ ನಿಟ್ಟಿನಲ್ಲಿ ತಾಲೂಕಾ, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ರಚನೆ ಮಾಡಲಾಗಿದೆ. ಈ ಪ್ರಾಧಿಕಾರದ ಮೂಲಕ ಉಚಿತ ಕಾನೂನು ಸೇವೆ ಒದಗಿಸಲಾಗುತ್ತಿದ್ದು, ಜನಸಾಮಾನ್ಯರು ಇದರ ಉಪಯೋಗ ಪಡೆದುಕೊಳ್ಳಲು ತಿಳಿಸಿದರು.

ಕಾರ್ಯಕ್ರಮದಲ್ಲಿ ಸೀಮಿಕೇರಿ ಗ್ರಾಮ ಪಂಚಾಯತ ಅಧ್ಯಕ್ಷೆ ಕವಿತಾ ಹೊರಕೇರಿ, ತಹಶೀಲ್ದಾರ ಗುರುಸಿದ್ದಯ್ಯ ಹಿರೇಮಠ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪೂರ, ಗ್ರಾ.ಪಂ ಉಪಾದ್ಯಕ್ಷ ಪಾಂಡಪ್ಪ ಸುನಗದ ಸೇರಿದಂತೆ ಇತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*