ಸುಮಾರು 50 ಎಕರೆ ಸರ್ಕಾರಿ ಪಡಾ ಜಮೀನನ್ನು ಅತಿಕ್ರಮಣ ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ

ವರದಿ-ರಾಜು ಮಾಸ್ತಿ ಹಳ್ಳ ಕುಮಟಾ

ಜಿಲ್ಲಾ ಸುದ್ದಿಗಳು 

ಕುಮಟಾ

ತಾಲೂಕಿನ ನಾಗೂರು ಗ್ರಾಮದಲ್ಲಿ ಸುಮಾರು 50 ಎಕರೆ ಸರ್ಕಾರಿ ಪಡಾ ಜಮೀನನ್ನು ಅತಿಕ್ರಮಣ ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರವೇ ಸ್ವಾಭಿಮಾನಿ ಬಣದ ನೇತೃತ್ವದಲ್ಲಿ ಮಿರ್ಜಾನ್ ಗ್ರಾಪಂ ಜನಪ್ರತಿನಿಧಿಗಳು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

CHETAN KENDULI

 ಈ ವೇಳೆ ಕರವೇ ಸ್ವಾಭಿಮಾನ ಬಣ ಜಿಲ್ಲಾ ಅಧ್ಯಕ್ಷ ರಾಜು ಮಾಸ್ತಿಹಳ್ಳ ಮಾತನಾಡಿ ಮಿರ್ಜಾನ ಹೋಬಳಿಯ ಖಂಡಗಾರ ಮಜರೆಯಲ್ಲಿ ಸುಮಾರು 50 ಎಕರೆ ಸರ್ಕಾರಿ ಪಡಾ ಜಮೀನು ಅತಿಕ್ರಮಣವಾಗಿದ್ದರೂ ಅರಣ್ಯ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಅತಿಕ್ರಮಣ ಜಾಗದಲ್ಲಿದ್ದ ಸಾಗವಾನಿ , ಬೀಟೆ , ಮತ್ತಿ , ಇತರೆ ಬೆಲೆ ಬಾಳುವ ಸುಮಾರು ಸಾವಿರಕ್ಕೂ ಅಧಿಕ ಮರಗಳನ್ನು ಕಡಿದು ಸಾಗಿಸಲಾಗಿದ್ದು ಇಂದಿಗೂ ಆ ಜಾಗದಲ್ಲಿ ಕಡಿದ ಮರಗಳ ಬುಡಗಳು ಕಾಣಸಿಗುತ್ತವೆ.ಇಂತಹ ಅನಧಿಕೃತ ಅತಿಕ್ರಮಣ ನಡೆದರೂ ಸಹ ಅರಣ್ಯ ಇಲಾಖೆ ಯಾವುದೇ ರೀತಿಯ ಕ್ರಮಕೈಗೊಳ್ಳದೆ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.ಆದರೆ ಕರವೇ ಸ್ವಾಭಿಮಾನಿ ಬಣದ ತಂಡ, ವಿಷಯವನ್ನು ಕಂದಾಯ ಇಲಾಖೆಗೆ ತಿಳಿಸಿದ್ದು ಇಲಾಖಾ ಅಧಿಕಾರಿಗಳು ಅತಿಕ್ರಮಣ ಮಾಡಿದ್ದ ಜಾಗಕ್ಕೆ ಹಾಕಲಾದ ತಂತಿ ಬೇಲಿಯನ್ನು ತೆಗೆದು ಹಾಕಿದ್ದರು.ಈ ವೇಳೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ ಮಿರ್ಜಾನ್ ನಾಡಕಛೇರಿಯ ಕಂದಾಯ ನಿರೀಕ್ಷಕರಾದ ಅಣ್ಣಯ್ಯ ಲಂಬಾಣಿಯವನ್ನು ವರ್ಗಾವಣೆ ಮಾಡಲು ಕಾಣದ ಕೈಗಳು ಹುನ್ನಾರ ನಡೆಸುತ್ತಿದ್ದು, ಒಂದುವೇಳೆ ವರ್ಗಾವಣೆ ಮಾಡಿದ್ದಲ್ಲಿ ಕರವೇ ಸ್ವಾಭಿಮಾನಿ ಬಣದಿಂದ ಪ್ರತಿಭಟನೆ ನಡೆಸಲಾಗುವುದು ಎಚ್ಚರಿಕೆ ಎಂದರು.

ಕರವೇ ಸ್ವಾಭಿಮಾನ ಬಣ ತಾಲೂಕು ಅಧ್ಯಕ್ಷ ಮಂಜುನಾಥ ಮರಾಠಿ ಮಾತನಾಡಿ ಜನಸಾಮಾನ್ಯರು ಉರುವಲು ಕಟ್ಟಿಗೆಗಾಗಿ ಒಣಗಿದ ಸಣ್ಣ ಮರವನ್ನು ಕಡಿದರೂ ಅವರ ಮೇಲೆ ದರ್ಪ ತೋರಿ, ಪ್ರಕರಣ ದಾಖಲಿಸುವ ಅರಣ್ಯ ಇಲಾಖೆಯ ಅಧಿಕಾರಿಗಳು ಈ ವಿಷಯಲ್ಲಿ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದನ್ನು ಗಮನಿಸಿದರೆ , ಇಲಾಖೆಯ ಅಧಿಕಾರಿಗಳ ಮೇಲೆ ಶಂಕೆ ಮೂಡುವಂತಾಗಿದೆ ಎಂದರು.ಈ ಸಂಬಂಧ ಮಿರ್ಜಾನ್ ಕಂದಾಯ ಇಲಾಖೆಯ ಅಧಿಕಾರಿ ಸ್ಥಳ ಪರಿಶೀಲನೆ ಮಾಡಿ , ಅತಿಕ್ರಮಣವನ್ನು ತೆರವಗೊಳಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಆ ಕಾರಣಕ್ಕೆ ಅವರನ್ನು ವರ್ಗಾವಣೆಗೊಳಿಸಲು ಕೆಲವರು ಪ್ರಬಲ ಹುನ್ನಾರ ನಡೆಸಿರುವ ಮಾಹಿತಿ ಕೂಡ ಲಭಿಸಿದೆ. ಹಾಗಾಗಿ ದಕ್ಷ ಅಧಿಕಾರಿಯನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡಬಾರದು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

 ಮನವಿಯನ್ನು ಕುಮಟಾ ತಹಸೀಲ್ದಾರ್‌ ವಿವೇಕ ಶೇಣ್ಣಿ ಅವರು ಸ್ವೀಕರಿಸಿ , ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಮಿರ್ಜಾನ್ ಗ್ರಾಪಂ ಅಧ್ಯಕ್ಷ ಪರಮೇಶ್ವರ ಪಟಗಾರ , ಗ್ರಾಪಂ ಸದಸ್ಯರಾದ ಮಂಜುನಾಥ ಹರಿಕಾಂತ , ಪರಶು ಸಾವೇರಾ ಫರ್ನಾಂಡೀಸ್ , ವಕೀಲ ನಾಗರಾಜ ಹೆಗಡೆ , ಕರವೇ ಸ್ವಾಭಿಮಾನಿ ಬಣದ ಈಶ್ವರ ಉಪ್ಪಾರ , ರಿತೇಶ ಉಪ್ಪಾರ , ಮಾರುತಿ ಆನೆಗುಂದಿ , ಕೆ ಎನ್ ಮಂಜು , ಶಿವಶಂಕರ ಮುಕ್ರಿ , ರಾಜೀವ ಗೌಡ , ಮೋಹನ ಪಟಗಾರ ಇತರರು ಇದ್ದರು.

Be the first to comment

Leave a Reply

Your email address will not be published.


*